ಹಾವೇರಿ: ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ನುಂಗಿದ ಸಿಬ್ಬಂದಿ..!

By Kannadaprabha NewsFirst Published Jun 23, 2022, 2:40 PM IST
Highlights

*  ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೋಟ್ಯಂತರ ರು. ಅವ್ಯವಹಾರ ಬೆಳಕಿಗೆ
*  ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌, ಶೈಕ್ಷಣಿಕ ಸಾಲದ ಹಣ ನುಂಗಿದ ಸಿಬ್ಬಂದಿ
*  ಹಣ ದುರ್ಬಳಕೆ ಕುರಿತು ದೂರು 
 

ಹಾವೇರಿ(ಜೂ.23):  ಎಂಜಿನಿಯರಿಂಗ್‌ ಪದವಿ ಕನಸು ಹೊತ್ತು ಬಂದ ಪ್ರತಿಭಾವಂತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌, ಶೈಕ್ಷಣಿಕ ಸಾಲದ ಹಣ ಸೇರಿದಂತೆ ಕೋಟ್ಯಂತರ ರು. ಗಳನ್ನು ಸಿಬ್ಬಂದಿಯೇ ತಿಂದು ನೀರು ಕುಡಿದಿರುವ ಪ್ರಕರಣ ಇಲ್ಲಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಎಂಜಿನಿಯರಿಂಗ್‌ ಕಾಲೇಜಿನ ಸಿಬ್ಬಂದಿ ಮಾಡಿದ ಅವ್ಯವಹಾರದಿಂದ ಮೆರಿಟ್‌ ಆಧಾರದಲ್ಲಿ ಎಂಜಿನಿಯರಿಂಗ್‌ ಪ್ರವೇಶ ಪಡೆದಿರುವ ನೂರಾರು ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸರ್ಕಾರದಿಂದ ನೀಡುವ ಸ್ಕಾಲರ್‌ಶಿಪ್‌ಗೆ ಕನ್ನ ಹಾಕಿರುವ ಸಿಬ್ಬಂದಿ, ಶಿಕ್ಷಣ ಪೂರೈಸಲು ವಿವಿಧ ಬ್ಯಾಂಕುಗಳಲ್ಲಿ ವಿದ್ಯಾರ್ಥಿಗಳು ಮಾಡಿರುವ ಸಾಲವನ್ನೂ ತಮ್ಮ ಜೇಬಿಗೆ ಇಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ರೈತರ ಮಕ್ಕಳ ಸ್ಕಾಲರ್‌ಶಿಪ್‌ಗೆ ಪಹಣಿ ಬೇಕಿಲ್ಲ: ಸಚಿವ ಬಿ.ಸಿ.ಪಾಟೀಲ್‌

ಏನಿದು ಅವ್ಯವಹಾರ?:

ದಾಖಲೆಗಳನ್ನು ತಿದ್ದುಪಡಿ ಮಾಡಿ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಸಿಸಿಟೆಕ್‌ ಅನುದಾನ, ಸ್ಕಾಲರ್‌ಶಿಫ್‌, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲದ ಹಣ ಸೇರಿ ಒಟ್ಟು .3,14 ಕೋಟಿಗಳನ್ನು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣ ಇದಾಗಿದೆ. ಸಮಗ್ರ ತನಿಖೆ ನಡೆದರೆ ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧವಾಗಿ ಎರಡು ತಿಂಗಳ ಹಿಂದಷ್ಟೇ ನಿವೃತ್ತರಾಗಿರುವ ಪ್ರಾಚಾರ್ಯ ಡಾ. ಕೆ.ಬಿ. ಪ್ರಕಾಶ, ಕಚೇರಿ ಅಧೀಕ್ಷಕ ಎಚ್‌. ವಾಸುದೇವ, ಗುರಪ್ಪ ಸುಂಕದವರ, ಪ್ರಥಮ ದರ್ಜೆ ಸಹಾಯಕಿ ಜಯಮ್ಮ ಕಾಚೇರ, ಕರ್ತವ್ಯಕ್ಕೆ 4 ತಿಂಗಳಿನಿಂದ ಗೈರಾಗಿರುವ ದ್ವಿತೀಯ ದರ್ಜೆ ಸಹಾಯಕ ರವೀಂದ್ರಕುಮಾರ ಹಾಗೂ ಮತ್ತೊಬ್ಬ ದ್ವಿತೀಯ ದರ್ಜೆ ಸಹಾಯಕ ಅನಿಲಕುಮಾರ ಕಟ್ಟೆಗಾರ ವಿರುದ್ಧ ಕಾಲೇಜಿನ ಹಾಲಿ ಪ್ರಾಚಾರ್ಯ ಡಾ. ಜಗದೀಶ ಕೋರಿ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ.

ಹೇಗೆಲ್ಲ ತಿಂದರು?:

ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ವಿದ್ಯಾಸಿರಿ ಯೋಜನೆ ಜಾರಿಗೊಳಿಸಿದೆ. ಬಡ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಬೇಕಿತ್ತು. ಆದರೆ, ಇಲ್ಲಿಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವಿದ್ಯಾಸಿರಿ ಸ್ಕಾಲರ್‌ಶಿಪ್‌ ಹಣ ವಿದ್ಯಾರ್ಥಿಗಳ ಕೈಗೆ ಸಿಗದೇ ಅಲ್ಲಿಯ ಸಿಬ್ಬಂದಿಯೇ ಕಬಳಿಸಿದ್ದಾರೆ. ಕಾಲೇಜು ನೀಡಿರುವ ವಿದ್ಯಾಸಿರಿ ಚೆಕ್‌ಗಳನ್ನು ವಿದ್ಯಾರ್ಥಿಗಳು ಬ್ಯಾಂಕಿಗೆ ಸಲ್ಲಿಸಿದರೆ ಅಕೌಂಟಿನಲ್ಲಿ ಹಣವಿಲ್ಲ ಎಂಬ ಕಾರಣದಿಂದ ಚೆಕ್‌ ಬೌನ್ಸ್‌ ಆಗಿತ್ತಿವೆ. ಈ ಬಗ್ಗೆ ಕೇಳಿದರೆ ಏನೋ ತಾಂತ್ರಿಕ ಸಮಸ್ಯೆ ಎಂದು ಸಬೂಬು ಹೇಳುತ್ತ ಕಳೆದಿದ್ದಾರೆ.

ಅದೇ ರೀತಿ ಶೈಕ್ಷಣಿಕ ಸಾಲಕ್ಕೆ ಅನೇಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಬ್ಯಾಂಕುಗಳಿಂದ ಬಿಡುಗಡೆಯಾದ ಸಾಲದ ಮೊತ್ತ ಕಾಲೇಜು ಅಕೌಂಟ್‌ನಲ್ಲಿ ಜಮೆಯಾಗಿ, ನಂತರ ವಿದ್ಯಾರ್ಥಿಗಳ ಕೈ ಸೇರುತ್ತಿತ್ತು. ಆದರೆ, ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿ ಹೋದರೂ ಶೈಕ್ಷಣಿಕ ಸಾಲದ ಹಣ ಅವರ ಕೈಸೇರಿಲ್ಲ. ಈ ಬಗ್ಗೆಯೂ ಅನೇಕ ವಿದ್ಯಾರ್ಥಿಗಳು ಕೇಳುತ್ತ ಬಂದರೂ ಇನ್ನು ಸ್ವಲ್ಪ ದಿನಕ್ಕೆ ಸಿಗುತ್ತದೆ ಎಂದು ಹೇಳುತ್ತಲೇ ಸಿಬ್ಬಂದಿ ಕಾಲಕಳೆದಿದ್ದಾರೆ. ವಾಸ್ತವವಾಗಿ ಈ ಅಕೌಂಟ್‌ನಿಂದಲೂ ಹಣವನ್ನು ಲಪಾಟಿಯಿಸಿರುವುದು ಗೊತ್ತಾಗಿದೆ. ಅತ್ತ ಸಾಲ ನೀಡಿದ ಬ್ಯಾಂಕುಗಳಿಗೆ ಕಂತು ತುಂಬಬೇಕಿರುವ ವಿದ್ಯಾರ್ಥಿಗಳು ತಮಗೆ ಬರಬೇಕಾದ ಹಣಕ್ಕಾಗಿ ಕಾಲೇಜಿಗೆ ಅಲೆಯುತ್ತಿದ್ದಾರೆ.

ಇನ್ನು ವಿದ್ಯಾರ್ಥಿಗಳ ಪ್ರವೇಶ, ಪರೀಕ್ಷಾ ಶುಲ್ಕ ಕಟ್ಟಿಸಿಕೊಳ್ಳುವಾಗಲೂ ಗೋಲ್‌ಮಾಲ್‌ ಮಾಡಲಾಗಿದೆ. ವಿದ್ಯಾರ್ಥಿಗಳಿಂದ .17 ಸಾವಿರ ಪಡೆದು ರಶೀದಿ ನೀಡಿದ್ದು, ಕಾಲೇಜಿನ ಕಾರ್ಬನ್‌ ಕಾಪಿಯಲ್ಲಿ 2 ಸಾವಿರ ಎಂದು ನಮೂದಿಸಿ ಪ್ರತಿ ವಿದ್ಯಾರ್ಥಿಗಳಿಂದ .15 ಸಾವಿರ ಹೆಚ್ಚುವರಿ ಹಣ ಪಡೆದು ಕಬಳಿಸಿದ್ದಾರೆ. ಈ ರೀತಿಯಾಗಿಯೇ ಕೋಟ್ಯಂತರ ರು. ಲಪಟಾಯಿಸಿರುವ ಅಂದಾಜಿದೆ.

20 ಸಾವಿರ ಚೆಕ್‌ ಮೇಲೆ ಪ್ರಾಚಾರ್ಯರ ಸಹಿ ಪಡೆದು ನಂತರ .2.20 ಲಕ್ಷ ಎಂದು ತಿದ್ದಲಾಗಿದೆ. ಸ್ಕಾಲರ್‌ಶಿಪ್‌ ಹಣವಿಲ್ಲದೇ, ಶೈಕ್ಷಣಿಕ ಸಾಲದ ಹಣವೂ ಸಿಗದೇ ಅನೇಕ ವಿದ್ಯಾರ್ಥಿಗಳು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸುವ ನಿರ್ಧಾರಕ್ಕೂ ಬಂದಿದ್ದರು. ಅವರಿವರಿಂದ ನೆರವು ಪಡೆದು ಶಿಕ್ಷಣ ಪೂರೈಸುತ್ತಿದ್ದಾರೆ.

ಸಿಬ್ಬಂದಿ ನಾಪತ್ತೆ:

ಕಾಲೇಜಿನಲ್ಲಿ ವಿದ್ಯಾರ್ಥಿ ವೇತನ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ರವೀಂದ್ರಕುಮಾರ ಎಂಬಾತ 4 ತಿಂಗಳುಗಳಿಂದ ಅನಧಿಕೃತ ಗೈರು ಹಾಜರಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಾಲೇಜಿನವರು ಸಂಪರ್ಕಿಸಲು ಯತ್ನಿಸಿದರೂ, ರವೀಂದ್ರಕುಮಾರ ಅವರಿಂದ ಪ್ರತ್ಯುತ್ತರ ಬಂದಿಲ್ಲ.

ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ, ಕಾಲೇಜು ಮಟ್ಟದಲ್ಲಿಯೇ ಒಂದು ಸಮಿತಿ ರಚಿಸಿ ತನಿಖೆಗೆ ಆದೇಶಿಸಲಾಗಿತ್ತು. ಸಮಿತಿಯವರು ವಿದ್ಯಾರ್ಥಿ ವೇತನ ಹಾಗೂ ಶೈಕ್ಷಣಿಕ ವಿದ್ಯಾಭ್ಯಾಸ ಸಾಲದ ಬ್ಯಾಂಕ್‌ ಖಾತೆಗಳ ವಿವರಣಾತ್ಮಕ ಪಟ್ಟಿಯನ್ನು ಬ್ಯಾಂಕಿನಿಂದ ತರಿಸಿ ಮೊತ್ತ ಪರಿಶೀಲಿಸಿದಾಗ ಭಾರಿ ಪ್ರಮಾಣದ ವ್ಯತ್ಯಾಸ ಕಂಡು ಬಂದಿದೆ. ದೊಡ್ಡಮಟ್ಟದ ಹಣ ದುರುಪಯೋಗ ಆಗಿರುವುದು ಪತ್ತೆಯಾಗಿದೆ. ಇದಾದ ಮೇಲೆ ನಿವೃತ್ತ ಪ್ರಾಚಾರ್ಯರು ಸೇರಿದಂತೆ 6 ಜನರ ಮೇಲೆ ಈಗಿನ ಪ್ರಾಚಾರ್ಯರು ದೂರು ನೀಡಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೆ ಈಗ ನಡುಕ ಶುರುವಾಗಿದೆ.

Basavaraj Bommai: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಸ್ಕಾಲರ್‌ಶಿಪ್‌: ಸಿಎಂ ಚಾಲನೆ

ಕಾಲೇಜಿನಲ್ಲಿ ನಡೆದಿರುವ ಹಣ ದುರ್ಬಳಕೆ ಕುರಿತು ದೂರು ನೀಡಲಾಗಿದ್ದು, ಐವರು ಸಿಬ್ಬಂದಿ ಅಮಾನತು ಮಾಡಲಾಗಿದೆ. ಅಧಿಕಾರಿಗಳ ತಂಡ ಬಂದು ಪ್ರಾಥಮಿಕ ಹಂತದ ತನಿಖೆ ನಡೆಸಿದೆ. ಇಲಾಖೆ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತ ಪ್ರಾಚಾರ್ಯ ಡಾ. ಜಗದೀಶ ಕೋರಿ ಹೇಳಿದ್ದಾರೆ. 

ನಾನು ಎಂಜಿನಿಯರಿಂಗ್‌ ಕಾಲೇಜಿನ ಮುಖ್ಯಸ್ಥನಾಗಿದ್ದ ಅವಧಿಯಲ್ಲಿ ಹಣ ದುರುಪಯೋಗ ನಡೆದಿರುವುದು ಗೊತ್ತಾಗಿದೆ. ಆದರೆ, ಇದರಲ್ಲಿ ನನ್ನ ಕೈವಾಡ ಏನೂ ಇಲ್ಲ. ಸಿಬ್ಬಂದಿ ಮೇಲೆ ಅತಿಯಾಗಿ ವಿಶ್ವಾಸ ಇಟ್ಟಿದ್ದೇ ದೊಡ್ಡ ತಪ್ಪಾಯಿತು. ಅಕ್ರಮದಲ್ಲಿ ನನ್ನ ಪಾತ್ರ ಏನೂ ಇಲ್ಲ. ನಯಾ ಪೈಸೆ ತಿಂದಿದ್ದರೂ ಶಿಕ್ಷೆಗೆ ಒಳಗಾಗಲು ಸಿದ್ಧನಿದ್ದೇನೆ  ಅಂತ ಪ್ರಕರಣದ ಆರೋಪಿ ನಿವೃತ್ತ ಪ್ರಾಚಾರ್ಯ ಕೆ.ಬಿ. ಪ್ರಕಾಶ ತಿಳಿಸಿದ್ದಾರೆ. 
 

click me!