* ಶೇ. 94.66 ಅಂಕ ಪಡೆದ ಮಂಗಳೂರು ಗ್ರಾಮದ ವಿದ್ಯಾರ್ಥಿನಿ ಉಮೈ ಐಮನ್
* ಎಂಬಿಬಿಎಸ್ ಓದುವ ಕನಸು
* ಜೀವನ ನಿರ್ವಹಣೆಗೆ ಚಿಕ್ಕ ಸೈಕಲ್ ರಿಪೇರಿ ಶಾಪ್ ನಡೆಸುತ್ತಿರುವ ಮುರ್ತುಜಾಸಾಬ್
ಅಮರೇಶ್ವರಸ್ವಾಮಿ ಕಂದಗಲ್ಲಮಠ
ಕುಕನೂರು(ಜೂ.23): ಸೈಕಲ್ ರಿಪೇರಿ ಮಾಡುವ ವ್ಯಕ್ತಿಯ ಪುತ್ರಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಶೇ. 94.66 ಅಂಕ ಗಳಿಸಿ ಸಾಧನೆಗೆ ಬಡತನ ಅಡ್ಡಿಯಾಗದು ಎಂಬುದನ್ನು ಸಾಬೀತು ಮಾಡಿದ್ದಾಳೆ.
ತಾಲೂಕಿನ ಮಂಗಳೂರು ಗ್ರಾಮದ ವಿದ್ಯಾರ್ಥಿನಿ ಉಮೈ ಐಮನ್ ವಣಗೇರಿ ಎಂಬವರೇ ಸಾಧನೆ ಮಾಡಿದ ವಿದ್ಯಾರ್ಥಿನಿ. ಇಳಕಲ್‌ನ ಸ್ಪಂದನಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಉಮೈ ಐಮನ್ ಹಿಂದಿ ವಿಷಯದಲ್ಲಿ 93, ಇಂಗ್ಲಿಷ್- 88, ಭೌತಶಾಸ್ತ್ರ- 96, ರಸಾಯನಶಾಸ್ತ್ರ- 97, ಗಣಿತ-98, ಜೀವಶಾಸ್ತ್ರ-96 ಅಂಕ ಗಳಿಸಿದ್ದಾಳೆ.
ಉಮೈ ಐಮನ್‌ನ ತಂದೆ ಮುರ್ತುಜಾಸಾಬ ವಣಗೇರಿ ಅವಗೆ ಮೂವರು ಪುತ್ರಿಯರು. ಮನೆಯಲ್ಲಿ ಒಮ್ಮೆ ಊಟ ಮಾಡಿದರೆ ಇನ್ನೊಂದು ಹೊತ್ತಿನ ತುತ್ತಿಗೂ ತತ್ವಾರ. ಜೀವನ ನಿರ್ವಹಣೆಗೆ ಚಿಕ್ಕ ಸೈಕಲ್ ರಿಪೇರಿ ಶಾಪ್ ನಡೆಸುತ್ತಾರೆ. ಸೈಕಲ್‌ಗೆ ಪಂಚರ್ ತಿದ್ದಿ, ಹವಾ ಹಾಕಿ ಬರುವ ಸಣ್ಣ ಆದಾಯದಲ್ಲೇ ಬದುಕು ಸಾಗಿಸುತ್ತಾರೆ. ಇದರ ಮಧ್ಯೆಯೂ ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾದ ಪೂರಕ ವಾತಾವರಣ ಕಲ್ಪಿಸಿಕೊಟ್ಟಿದ್ದಾರೆ. ಮಕ್ಕಳು ಸಹ ತಂದೆಯ ಬೆಂಬಲಕ್ಕೆ ಉತ್ತಮ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಅವರ ಎರಡನೇ ಪುತ್ರಿ ಉಮೈ ಐಮನ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 568(ಶೇ. 94.66) ಅಂಕ ಗಳಿಸಿ ಉತ್ತಮ ಸಾಧನೆ ಮೆರೆದಿದ್ದಾರೆ.
ಎಂಬಿಬಿಎಸ್ ಓದುವ ಕನಸು:
ಉಮೈ ಐಮನ್‌ಗೆ ಎಂಬಿಬಿಎಸ್ ಓದುವ ಕನಸು. ಅದಕ್ಕಾಗಿ ಈಗಾಗಲೇ ಅವರಿವರ ಬಳಿ ಸಹಾಯ ಪಡೆದು ನೀಟ್ ಪರೀಕ್ಷೆ ತರಬೇತಿ ಸಹ ಪಡೆಯುತ್ತಿದ್ದಾಳೆ. ಉತ್ತಮ ಅಂಕ ಪಡೆದ ಉಮೈ ಐಮನ್ ಅವರ ಕನಸು ಸಾಕಾರಗೊಳಿಸುವುದು ಹೇಗೆಂಬ ಪ್ರಶ್ನೆ ಹೆತ್ತವರನ್ನು ಕಾಡುತ್ತಿದೆ.
ಕಾಲಲ್ಲೇ ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿಗೆ ಡಿಸ್ಟಿಂಕ್ಷನ್: ಸಾಧನೆ ಮಾಡಲು ಛಲವೊಂದಿದ್ದರೆ ಸಾಕು..!
ಏಕಾಗ್ರತೆಯಿಂದ ಪಾಠ ಕೇಳಿ, ಪರಿಶ್ರಮದಿಂದ ಓದಿದ್ದು ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು ಮತ್ತು ಇನ್ನೊಂದು ಕಡೆಯಿಂದ ನನ್ನ ತಂದೆ ಎದುರಿಸುತ್ತಿರುವ ಕಷ್ಟದ ದಿನಗಳು ಈ ಸಾಧನೆಗೆ ಪ್ರೇರಣೆಯಾದವು ಅಂತ ವಿದ್ಯಾರ್ಥಿನಿ ಉಮೈ ಐಮನ್ ತಿಳಿಸಿದ್ದಾರೆ.
ಪುತ್ರಿ ಉಮೈ ಐಮನ್ ನನ್ನ ಆಸೆ ಪ್ರಕಾರ ಉತ್ತಮ ಅಂಕ ಪಡೆದಿದ್ದಾಳೆ. ಆದರೆ ಸದ್ಯ ಅವಳ ಎಂಬಿಬಿಎಸ್ ಓದುವ ಆಸೆಯನ್ನು ಹೇಗೆ ನಿಭಾಯಿಸುವುದು ಎಂಬುದು ದೊಡ್ಡ ಚಿಂತೆ ಆಗಿದೆ. ಏನಾದರೂ ಮಾಡಿ ಮಕ್ಕಳ ಶೈಕ್ಷಣಿಕ ಆಸೆಯನ್ನು ಈಡೇರಿಸಬೇಕೆಂಬುದು ನನ್ನ ಅಭಿಲಾಷೆ ಅಂತ ತಂದೆ ಮುರ್ತುಜಾಸಾಬ್ ವಣಗೇರಿ ಹೇಳಿದ್ದಾರೆ.