3 ವರ್ಷದಲ್ಲಿ 3 ಸಾವಿರ ಕೆಪಿಎಸ್ ಶಾಲೆ ಸ್ಥಾಪನೆ ಗುರಿ: ಸಚಿವ ಮಧು ಬಂಗಾರಪ್ಪ

By Kannadaprabha News  |  First Published Dec 28, 2023, 10:23 PM IST

ರಾಜ್ಯದಲ್ಲಿ ಮುಂದಿನ 3 ವರ್ಷದಲ್ಲಿ 3 ಸಾವಿರ ಕೆಪಿಎಸ್ ಶಾಲೆ ಸ್ಥಾಪಿಸಲಾಗುವುದು. ಇದರಿಂದ ಎಲ್‍.ಕೆ.ಜಿ.ಯಿಂದ ಹಿಡಿದು ದ್ವಿತೀಯ ಪಿ.ಯು.ಸಿ.ವರೆಗೆ ಕಲೆ, ಸಂಗೀತ, ಕ್ರೀಡೆ ಇತರೆ ಚಟುವಟಿಕೆಗಳನ್ನು ಒಳಗೊಂಡ ಗುಣಮಟ್ಟದ ಶಿಕ್ಷಣ ಲಭಿಸಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. 
 


ಶಿವಮೊಗ್ಗ (ಡಿ.28): ರಾಜ್ಯದಲ್ಲಿ ಮುಂದಿನ 3 ವರ್ಷದಲ್ಲಿ 3 ಸಾವಿರ ಕೆಪಿಎಸ್ ಶಾಲೆ ಸ್ಥಾಪಿಸಲಾಗುವುದು. ಇದರಿಂದ ಎಲ್‍.ಕೆ.ಜಿ.ಯಿಂದ ಹಿಡಿದು ದ್ವಿತೀಯ ಪಿ.ಯು.ಸಿ.ವರೆಗೆ ಕಲೆ, ಸಂಗೀತ, ಕ್ರೀಡೆ ಇತರೆ ಚಟುವಟಿಕೆಗಳನ್ನು ಒಳಗೊಂಡ ಗುಣಮಟ್ಟದ ಶಿಕ್ಷಣ ಲಭಿಸಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದ ಡಿ.ವಿ.ಎಸ್. ಪ್ರೌಢಶಾಲಾ ಆವರಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ದೇಶೀಯ ವಿದ್ಯಾಶಾಲಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2023-24ರ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ವರ್ಷ 500 ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲಾಗುವುದು. ಪ್ರತಿ ಶಾಸಕರ ಕ್ಷೇತ್ರದಲ್ಲಿ 4 ರಿಂದ 6 ಶಾಲೆಗಳು ಉನ್ನತೀಕರಣಗೊಳ್ಳಲಿವೆ. ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆ ಇತ್ತು. ಇದರಲ್ಲಿ 13 ಸಾವಿರ ಶಿಕ್ಷಕರ ನೇಮಕ ಮಾಡಲಾಗಿದೆ. 4 ರಿಂದ 5 ಸಾವಿರ ದೈಹಿಕ ಶಿಕ್ಷಕರ ಕೊರತೆ ಇದೆ. ದೈಹಿಕ ಶಿಕ್ಷಕರು, ಕಲೆ, ಸಂಗೀತ ಶಿಕ್ಷಕರ ಕೊರತೆಯನ್ನು ಹಂತ ಹಂತವಾಗಿ ನೀಗಿಸಲಾಗುವುದು ಎಂದು ತಿಳಿಸಿದರು.

Latest Videos

undefined

ಲೋಕಸಭೆ ಚುನಾವಣೆಯಲ್ಲಿ ಕೋಲಾರದಿಂದ ಬಿಜೆಪಿಯನ್ನು ಗೆಲ್ಲಿಸಿ: ಸಂಸದ ಮುನಿಸ್ವಾಮಿ

ಪೌಷ್ಟಿಕತೆಯೆಡೆಗೆ ಹೆಜ್ಜೆ: ಸರ್ಕಾರ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಉತ್ತಮ ಹೆಜ್ಜೆ ಇಟ್ಟಿದ್ದು ಮೊದಲು 8ನೇ ತರಗತಿವರೆಗೆ ಇದ್ದ ಮೊಟ್ಟೆ ವಿತರಣೆಯನ್ನು ಇದೀಗ 10ನೇ ತರಗತಿವರೆಗೆ ವಿಸ್ತರಿಸಿ, ವಾರದಲ್ಲಿ 2 ದಿನ ಮೊಟ್ಟೆಯನ್ನು ನೀಡಲಾಗುತ್ತಿದೆ. ಕ್ಷೀರಭಾಗ್ಯ ಯೋಜನೆಯೊಂದಿಗೆ ಶೀಘ್ರದಲ್ಲೇ ಸಿಫ್‍ಆರ್‍ಟಿ ದೃಢೀಕರಣ ದೊರೆತ ತಕ್ಷಣ, 60 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲಾಗುವುದು ಎಂದು ತಿಳಿಸಿದರು. ಮಕ್ಕಳ ಶೈಕ್ಷಣಿಕ ಬೆಳವಣಿಗೆ ಉದ್ದೇಶದಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 3 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. 

ಅನುದಾನಿತ ಶಾಲೆಗಳು ಸಹ ಸರ್ಕಾರದ ಅಂಗವಾಗಿದ್ದು, 2020 ರವರೆಗೆ ಖಾಲಿ ಇರುವ ಶಿಕ್ಷಕರನ್ನು ತುಂಬಲು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು. ಹಂತ ಹಂತವಾಗಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಶಾಸಕಿ ಶಾರದಾ ಪೂರ್ಯಾ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡಲು ಸರ್ಕಾರ ಅನೇಕ ವೇದಿಕೆಗಳನ್ನು ಸೃಷ್ಟಿಸಿದೆ. ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಸರ್ಕಾರಿ ಶಾಲೆಗಳ ಉನ್ನತೀಕರಣವಾಗಬೇಕು. ಕೆಪಿಎಸ್ ಶಾಲೆಗಳ ಸ್ಥಾಪನೆ ಒಳ್ಳೆಯ ಯೋಜನೆಯಾಗಿದೆ ಎಂದರು.

ಮಾಸ್ಕ್‌-ಪುಸ್ತಕಗಳ ವಿತರಣೆ: ಇದೇ ಸಂದರ್ಭದಲ್ಲಿ ರೆಡ್‍ಕ್ರಾಸ್ ವತಿಯಿಂದ ನೀಡಲಾದ ಮಾಸ್ಕ್‌ಗಳನ್ನು ವಿದ್ಯಾರ್ಥಿಗಳು ಮತ್ತು ಆಶಾ ಕಾರ್ಯಕರ್ತೆರಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಕಲಿಕೆಯಲ್ಲಿ ಹಿಂದುಳಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಲಾದ ವಿಷನ್-95 ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಡಿವಿಎಸ್ ಸಮಿತಿಯ ರುದ್ರಗೌಡ, ಎಸ್‌.ಪಿ. ದಿನೇಶ್, ಜೆ.ಸುಮತಿ, ಡಿ.ಬಿ.ರುದ್ರಪ್ಪ, ರಾಜಶೇಖರ್, ಸತೀಶ್, ಎಂ.ವೈ.ಧರ್ಮಪ್ಪ, ಸದಾನಂದ ಗೌಡ, ರಾಘವೇಂದ್ರ, ಬಸವರಾಜ್ ವಿ. ಹಿರೇಮಠ್, ಡಯಟ್ ಪ್ರಾಂಶುಪಾಲ ಬಿ,ಆರ್‌. ಬಸವರಾಜಪ್ಪ, ಅನ್ಸರ್ ಆಲಿ ಬೇಗಂ ಮತ್ತಿತರರು ಇದ್ದರು.

ಸಿಎಂ ಸಿದ್ದರಾಮಯ್ಯ ಕೆಡಿಪಿ ಸಭೆ ಮ್ಯಾಚ್ ಫಿಕ್ಸಿಂಗ್: ಸಂಸದ ಮುನಿಸ್ವಾಮಿ

ಇಲಾಖೆ ಸಮಸ್ಯೆಗಳಿಗೆ ಹಂತಹಂತವಾಗಿ ಪರಿಹಾರ: ನನ್ನ ಇಲಾಖೆ ವ್ಯಾಪ್ತಿಯಡಿ ಸರ್ಕಾರಿ, ಅನುದಾನಿತ ಸೇರಿ ಒಟ್ಟು 58 ಸಾವಿರ ಶಾಲೆಗಳು, ಅನುದಾನರಹಿತ ಸೇರಿದಂತೆ ಒಟ್ಟು 76 ಸಾವಿರ ಶಾಲೆಗಳಿದ್ದು, 1 ಕೋಟಿ 2 ಲಕ್ಷ ಮಕ್ಕಳಿದ್ದಾರೆ. ವಿದ್ಯೆ ಒಂದು ಉತ್ತಮ ಸಂಪನ್ಮೂಲವಾಗಿದ್ದು, ವಿದ್ಯಾದಾನ ದೇವರ ಕೆಲಸವಿದ್ದಂತೆ. ಇಂತಹ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿವೆ. ಹಂತ ಹಂತವಾಗಿ ಅವುಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದರು.

click me!