ಅನುಮತಿ ಪಡೆಯದೆ ನಡೆಸುತ್ತಿದ್ದ ಹರಳೂರಿನ ಆರ್ಕಿಡ್ ಶಾಲೆಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ, ಆರ್ಕಿಡ್ ಶಾಲೆ ಪೂರ್ವ ಪ್ರಾಥಮಿಕ ತರಗತಿಗಳಿಗೆ ಮಾತ್ರ ಅನುಮತಿ ಪಡೆದಿತ್ತು. ಆದರೂ 1ರಿಂದ 6ನೇ ತರಗತಿಯವರೆಗೆ ಶಾಲೆಗಳನ್ನು ನಡೆಸುತ್ತಿದೆ.
ಬೆಂಗಳೂರು (ಜು.24): ಪರವಾನಗಿ ಪಡೆಯದೆ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಸರ್ಜಾಪುರ ರಸ್ತೆಯ ಹರಳೂರಿನ ‘ಆರ್ಕಿಡ್ ಇಂಟರ್‌ನ್ಯಾಷನಲ್ ಸ್ಕೂಲ್’ ಅನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಚ್ಚಿಸಿದ್ದಾರೆ. ಆರ್ಕಿಡ್ ಶಾಲೆ ಪೂರ್ವ ಪ್ರಾಥಮಿಕ ತರಗತಿಗಳಿಗೆ ಮಾತ್ರ ಅನುಮತಿ ಪಡೆದಿತ್ತು. ಆದರೂ 1ರಿಂದ 6ನೇ ತರಗತಿಯವರೆಗೆ ಶಾಲೆಗಳನ್ನು ನಡೆಸುತ್ತಿದೆ ಎಂದು ಕೆಲವರು ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಪರಿಶೀಲನೆ ನಡೆಸಿದ ನಂತರ ಪೊಲೀಸರ ಭದ್ರತೆಯಲ್ಲಿ ಶಾಲೆಯನ್ನು ಮುಚ್ಚಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ-4 ರಾಮಮೂರ್ತಿ, ‘ಶಾಲೆಯು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಡಿಡಿಪಿಐ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಯಿತು. ಶಾಲೆಯಲ್ಲಿ ಸುಮಾರು 70 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇವರನ್ನು ಶಾಲಾ ಆಡಳಿತ ಮಂಡಳಿ ಎಚ್‌ಎಸ್‌ಆರ್ ಲೇಔಟ್, ಸರ್ಜಾಪುರ ಶಾಖೆಗಳಿಗೆ ವರ್ಗಾಯಿಸಿದೆ. ಬೇರೆ ಶಾಖೆಗೆ ಮಕ್ಕಳನ್ನು ಕಳುಹಿಸಲು ಇಚ್ಛಿಸದ ನಾಲ್ವರು ವಿದ್ಯಾರ್ಥಿಗಳ ಪೋಷಕರಿಗೆ ಶುಲ್ಕ ವಾಪಸ್ ಕೊಡಿಸಿ ವರ್ಗಾವಣೆ ಪ್ರಮಾಣ ಪತ್ರ ಕೊಡಿಸಲಾಯಿತು’ ಎಂದು ತಿಳಿಸಿದರು.
ಅನಧಿಕೃತ ಶಿಕ್ಷಣ ಸಂಸ್ಥೆಗಳನ್ನು ಆಯಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪತ್ತೆ ಹಚ್ಚಿ ಪೊಲೀಸ್ ಠಾಣೆಗೆ ದೂರು ಸಲ್ಲಿಸುವಂತೆ ಇತ್ತೀಚೆಗೆ ಶಿಕ್ಷಣ ಇಲಾಖೆಯು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಬಿಇಒಗಳು ಕ್ರಮ ಕೈಗೊಳ್ಳುತ್ತಿದ್ದಾರೆ.
ಈ ಹಿಂದೆ ಕೂಡ ಅನುಮತಿ ಇಲ್ಲದೆ ಶಾಲೆ ನಡೆಸುತ್ತಿದ್ದ ಆರ್ಕಿಡ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ಮೇಲೆ ಎಫ್ ಐ ಆರ್ ದಾಖಲಾಗಿತ್ತು. ಮಾಗಡಿ ರಸ್ತೆ ಹೊಸಹಳ್ಳಿ ಗೊಲ್ಲರಪಾಳ್ಯದ ಆರ್ಕಿಡ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ಜೊತೆಗೆ ಶಾಲೆಯ ಸೆಕ್ರೆಟರಿ ಹಾಗೂ ಶಾಲಾ ಪ್ರಾಂಶುಪಾಲರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅನುಮತಿಗಾಗಿ ಮರು ಅರ್ಜಿ: ಶಾಲೆ ಮುಚ್ಚಿಸಿರುವುದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಆರ್ಕಿಡ್ ಶಾಲೆ ಆಡಳಿತ ಮಂಡಳಿ, ಅನುಮತಿಗಾಗಿ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದು ಅನುಮೋದನೆ ಸಿಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಸ್ಪಷ್ಟೀಕರಣ ಬಯಸಿ ಅರ್ಜಿ ತಿರಸ್ಕರಿಸಲಾಗಿದೆ ಎಂದು ನೋಟಿಸ್ ಬಂದಿದೆ. ಇದೀಗ ಅನುಮತಿ ನೀಡುವಂತೆ ಪುನಃ ಅರ್ಜಿ ಸಲ್ಲಿಸಲಾಗುವುದು ಎಂದು ಪ್ರತಿಕ್ರಿಯಿಸಿದೆ.
ಅನುಮತಿ ಇಲ್ಲದೆ ನಕಲಿ ಶಾಲೆ, ಆರ್ಕಿಡ್ ದಿ ಇಂಟರ್ ನ್ಯಾಷನಲ್ ವಿರುದ್ಧ ಕೇಸ್
ಶಾಲಾ ಕಟ್ಟಡ ನಿರ್ಮಾಣ ಹಂತದಲ್ಲಿರುವಾಗ, ಶಾಲೆಯ ಮೂಲಸೌಕರ್ಯ ಹಾಗೂ ನಮ್ಮ ಹೆಸರನ್ನು ಗಮನಿಸಿದ ಹಲವು ಪೋಷಕರು ಶಾಲಾ ದಾಖಲಾತಿಗೆ ಆಸಕ್ತಿ ತೋರಿಸಿದರು. ಇದೀಗ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಇತರ ಶಾಖೆಗಳಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು. ಇದನ್ನು ಪೋಷಕರಿಗೂ ಈಗಾಗಲೇ ತಿಳಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.