* ಕೊನೆಗೂ ಬಸವಲೀಲಾಗೆ ಸಿಕ್ತು ಆಧಾರ್ ಕಾರ್ಡ್
* ಬಸವಲೀಲಾಗೆ 'ಆಧಾರ'ವಾದ ಕೊಪ್ಪಳ ಜಿಲ್ಲಾಡಳಿತ
*ಆಧಾರ್ ಕಾರ್ಡ್ ಇಲ್ಲದೇ ಪರದಾಡುತ್ತಿದ್ದ ಎಸ್‌ಎಸ್‌ಎಲ್‌ಸಿ ಟಾಪರ್
ರಾಯಚೂರು, (ಜೂನ್.04): ಎಸ್‌ಎಸ್‌ಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ ಸಿಂಧನೂರು ತಾಲೂಕಿನ ವಿದ್ಯಾರ್ಥಿನಿ ಬಸವಲೀಲಾಗೆ ಕೊನೆಗೂ ಆಧಾರ್ ಕಾರ್ಡ್ (Aadhar Card) ಸಿಕ್ಕಿದೆ. ರಾಯಚೂರು ಜಿಲ್ಲೆಗೆ ಸೇರಿದ ವಿದ್ಯಾರ್ಥಿನಿಗೆ ಕೊಪ್ಪಳ ಜಿಲ್ಲಾಡಳಿತ ಕರೆದು ಆಧಾರ್ ಕಾರ್ಡ್ ನೀಡಿದೆ.
ಹೌದು.. ಬೇರೆ ಜಿಲ್ಲೆಯ ನಿವಾಸಿ ಎನ್ನದೇ ಕೊಪ್ಪಳ ಜಿಲ್ಲಾಡಳಿತ ವಿದ್ಯಾರ್ಥಿನಿಗೆ ಆಧಾರವಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಜಾಫರ್ ಎನ್ನುವರು ವಿದ್ಯಾರ್ಥಿ ಬಸವಲೀಲಾಗೆ ಕರೆ ಮಾಡಿ ಎಲ್ಲಾ ದಾಖಲೆಗಳನ್ನ ತೆಗೆದುಕೊಂಡು ಹತ್ತು ದಿನಗಳಲ್ಲೇ ಆಧಾರ್ ಕಾರ್ಡ್ ನೀಡಿದ್ದಾರೆ. ಇದಕ್ಕೆ ವಿದ್ಯಾರ್ಥಿನಿ ಬಸವಲೀಲಾ ಸಂತಸಗೊಂಡಿದ್ದು, ಜಾಫರ್ ಅವರ ಸಹಾಯಕ್ಕೆ ಅಭಿನಂದನೆಗಳನ್ನ ತಿಳಿಸಿದ್ದಾಳೆ.
SSLC ಪರೀಕ್ಷೆಯಲ್ಲಿ ರಾಯಚೂರು ಜಿಲ್ಲೆಗೆ ಫಸ್ಟ್ , ಆಧಾರ್ ಕಾರ್ಡ್‌ಗಾಗಿ ಅಲೆದಾಡಿ ಸುಸ್ತು!
ವಿದ್ಯಾರ್ಥಿನಿಗೆ 'ಆಧಾರ;ವಾದ ಕೊಪ್ಪಳ ಜಿಲ್ಲಾಡಳಿತ
ಆಧಾರ್ ಕಾರ್ಡ್ ಇಲ್ಲದೇ ಪರದಾಡುತ್ತಿದ್ದನ್ನು ಮಾಧ್ಯಮಗಳಲ್ಲಿ ನೋಡಿದ ಜಾಫರ್ ಅವರು ಖುದ್ದು ಬಸವಲೀಲಾಗೆ ಕರೆ ಮಾಡಿ ಆಧಾರ್ ಕಾರ್ಡ್‌ಗೆ ಬೇಕಾದ ಎಲ್ಲಾ ದಾಖಲಾತಿಗಳನ್ನ ಫೂನ್ ಮೂಲಕವೇ ಸ್ವೀಕರಿಸಿದ್ದಾರೆ. ಎಲ್ಲಾ ದಾಖಲೆಗಳನ್ನ ನೀಡಿದ 10 ದಿನಗಳಲ್ಲೇ ಆಧಾರ್ ಕಾರ್ಡ್ ಬಸವಲೀಲಾಳ ಕೈಸೇರಿದೆ. ಬೇರೆ ಜಿಲ್ಲೆಯ ನಿವಾಸಿ ಎಂದು ತಾರತಮ್ಯ ಮಾಡದೇ ಸಂಕಷ್ಟಕ್ಕೆ ಸಿಲುಕಿದ್ದ ಬಸವಲೀಲಾಗೆ 'ಆಧಾರ್'ವಾಗಿ ನಿಂತ ಜಾಫರ್ ಹಾಗೂ ಕೊಪ್ಪಳ ಜಿಲ್ಲಾಡಳಿಕ್ಕೆ ಅಭಿನಂದನೆಗಳನ್ನ ಹೇಳಲೇಬೇಕು.
ಬಡತನದ ಕುಟುಂಬದ ವಿದ್ಯಾರ್ಥಿನಿಗೆ ಯಾವುದೇ ಸೌಲಭ್ಯಗಳು ಇಲ್ಲದಿದ್ದರೂ ಸರ್ಕಾರಿ ಶಾಲೆಯಲ್ಲೇ ಓದಿ 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ರ‍್ಯಾಂಕ್ ತಂದಿದ್ದಾಳೆ. ಕುಟುಂಬದ ಕಷ್ಟದ ಮಧ್ಯೆಯೂ ಆಧಾರ್ ಕಾರ್ಡ್ ಇಲ್ಲದೆ ವಿದ್ಯಾರ್ಥಿನಿ ಇದುವರೆಗೆ ಸ್ಕಾಲರ್ಶಿಪ್ ನಿಂದಲೂ ವಂಚಿತಳಾಗಿದ್ದಳು. ಅಲ್ಲದೇ ಮುಂದಿನ ವಿದ್ಯಾಭ್ಯಾಸಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದರಿಂದ ದಿಕ್ಕುತೋಚದೆ ಬಸವಲೀಲಾ ಮನೆಯಲ್ಲೇ ಕುಳಿತ್ತಿದ್ದಳು.
ನಾನಾ ಕಾರಣಗಳಿಗೆ ಆಧಾರ್ ಕಾರ್ಡ್ ನೀಡಲು ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ. ಮಸ್ಕಿ, ಸಿಂಧನೂರಿಗೆ ತೆರಳಿ ಅರ್ಜಿ ಹಾಕಿದರೂ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಇದುವರೆಗೂ ಆಧಾರ್ ಕಾರ್ಡ್ ಬಂದಿಲ್ಲ. ಆಧಾರ್ ಕಾರ್ಡ್ ಇಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿನಿ ಬಸವಲೀಲಾ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಳು.
ರಾಜ್ಯಕ್ಕೆ 2ನೇ ಸ್ಥಾನಗಳಿಸಿ ಎಂಬಿಬಿಎಸ್ ಕನಸು ಕಟ್ಟಿಕೊಂಡಿದ್ದಳು. ಆದ್ರೆ, 2016 ರಿಂದಲೂ ಅರ್ಜಿ ಹಾಕಿ ಅಲೆದಾಡಿ ಸುಸ್ತಾಗಿರುವ ಪ್ರತಿಭಾವಂತ ವಿದ್ಯಾರ್ಥಿನಿ ಬಸವಲೀಲಾ ಇದುವರೆಗೆ 11 ಬಾರಿ ಅರ್ಜಿ ಹಾಕಿದ್ದಳು. ಆದರೂ ಇಲ್ಲಿಯವೆಗೆ ಆಧಾರ್ ಕಾರ್ಡ್ ಸಿಕ್ಕಿರಲಿಲ್ಲ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಸಹ ಪ್ರಕಟಿಸಿತ್ತು. ಅಲ್ಲದೇ ಇತ್ತೀಗೆ ರಾಯಚೂರು ಜಿಲ್ಲೆಗೆ ಪ್ರಾಥಮಿ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಭೆಟಿ ನೀಡಿದ್ದ ವೇಳೆ ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯುಸ್ ಪ್ರಶ್ನಿಸಿತ್ತು.
ಅಂತಿಮವಾಗಿ ಬಸವಲೀಲಾಗೆ ಆಧಾರ್ ಕಾರ್ಡ್ ದೊರೆತ್ತಿದ್ದು, ಆಕೆಯ ಎಂಬಿಬಿಎಸ್ ಕನಸು ನನಸಾಗಲಿ. ತಾಯಿ ಇಲ್ಲದ ತಬ್ಬಲಿ ಬಸವಲೀಲಾ ಎಂಬಿಬಿಎಸ್ ಮುಗಿಸಿ ಮುಂದೆ ಜನರ ಕಷ್ಟಗಳಿಗೆ ಸ್ಪಂದಿಸುವಂತಾಗಲಿ ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಹಾರೈಸುತ್ತದೆ.