*ಗೂಗಲ್, ಅಮೆಜಾನ್, ಫೇಸ್‌ಬುಕ್ ಕಂಪನಿಗಳಿಗೆ ಆಯ್ಕೆಯಾಗಿದ್ದ ವಿದ್ಯಾರ್ಥಿ ಬಿಶಾಕ್ ಮೊಂಡಲ್
*ಅತಿ ಹೆಚ್ಚು ಸಂಬಳದ ಆಫರ್ ನೀಡಿದ ಫೇಸ್‌ಬುಕ್ ಕಂಪನಿಯನ್ನು ಆಯ್ಕೆ ಮಾಡಿಕೊಂಡ ಜೆಯು ವಿದ್ಯಾರ್ಥಿ
*ಪಶ್ಚಿಮ ಬಂಗಾಳದ ಜಾಧವಪುರ ವಿವಿಯಿಂದ ಬೇರೆ ಬೇರೆ ಕಂಪನಿಗಳಿಗೆ ಸಾಕಷ್ಟು ವಿದ್ಯಾರ್ಥಿಗಳ ಆಯ್ಕೆ
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಂಪನಿಗಳು ಮಣೆ ಹಾಕುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದರೆ, ಕೆಲವೊಮ್ಮೆ ಕಂಪನಿಗಳು ನೀಡುವ ಆಫರ್ ಮಾತ್ರ ಎಂಥವರನ್ನೂ ದಂಗು ಬಡಿಸುತ್ತವೆ. ಯಾಕೆಂದರೆ, ಪಶ್ಚಿಮ ಬಂಗಾಳದ ವಿಧ್ಯಾರ್ಥಿಯೊಬ್ಬ ಬೃಹತ್ ಮೊತ್ತದ ಪ್ಯಾಕೇಜ್‌ನೊಂದಿಗೆ ಜಗತ್ತಿನ ಅತಿ ದೊಡ್ಡ ಸೋಷಿಯಲ್ ಮೀಡಿಯಾ ಕಂಪನಿ ಸೇರಿಸಿಕೊಂಡಿದ್ದಾನೆ. ಹೌದು, ಕೋಲ್ಕತ್ತಾ (Kolkata) ದ ಜಾಧವ್‌ಪುರ ವಿಶ್ವವಿದ್ಯಾನಿಲಯದ (JU) ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನಿಗೆ ಬಂಪರ್ ಜಾಬ್ ಜಾಕ್ ಪಟ್ ಹೊಡೆದಿದೆ. ಫೇಸ್‌ಬುಕ್ (Facebook) ನಿಂದ ದೊಡ್ಡ ಮೊತ್ತದ ಪ್ಯಾಕೇಜ್ ಪಡೆದಿದ್ದಾರೆ. ವಾರ್ಷಿಕ ರೂ 1.8 ಕೋಟಿ ಪ್ಯಾಕೇಜ್ ಅನ್ನು ಪಡೆದಿದ್ದಾನೆ. ಗೂಗಲ್ (Google), ಅಮೆಜಾನ್ (Amazon) ಹಾಗೂ ಫೇಸ್‌ಬುಕ್ ಮೂರು ದೈತ್ಯ ಕಂಪನಿಗಳಿಗೆ ಈ ವಿದ್ಯಾರ್ಥಿ ಆಯ್ಕೆ ಆಗಿದ್ದ. ಆದರೆ ಈ ವಿದ್ಯಾರ್ಥಿ ಅಂತಿಮವಾಗಿ ಫೇಸ್‌ಬುಕ್ ಕಂಪನಿಯನ್ನು ಆಯ್ಕೆ ಮಾಡಿಕೊಂಡಿದ್ದಾನೆ. Facebookನಿಂದ ವಾರ್ಷಿಕ 1.8 ಕೋಟಿ ರೂ. ಮೊತ್ತ ಅತ್ಯಧಿಕ ಪ್ಯಾಕೇಜ್ ಗಿಟ್ಟಿಸಿಕೊಳ್ಳುವಲ್ಲಿ ಸಕ್ಸಸ್ ಆಗಿರುವ ವಿದ್ಯಾರ್ಥಿ ಹೆಸರು ಬಿಶಾಕ್ ಮೊಂಡಲ್ (Bishak Mondal). ಜಾಧವಪುರ ವಿಶ್ವವಿದ್ಯಾಲಯದಲ್ಲಿ ಮೊಂಡಲ್ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ (Computer Science) ವಿದ್ಯಾರ್ಥಿಯಾಗಿದ್ದು, ಅವರಿಗೆ ಗೂಗಲ್ ಮತ್ತು ಅಮೆಜಾನ್‌ನಿಂದಲೂ ಉದ್ಯೋಗದ ಆಫರ್ ಇತ್ತು. ಆದರೆ ಅಂತಿಮವಾಗಿ ಹೆಚ್ಚಿನ ಸಂಬಳದ ಪ್ಯಾಕೇಜ್ ಅಂತ ಫೇಸ್‌ಬುಕ್ ಕಂಪನಿ ಆಯ್ಕೆ ಮಾಡಿಕೊಂಡರು. ಕಳೆದ ಮಂಗಳವಾರ ರಾತ್ರಿ ಮೊಂಡಲ್ ನೇಮಕಾತಿ ಸಂದರ್ಶನದ ಫಲಿತಾಂಶ ಬಂದಿದೆ. ಮುಂಬರುವ ಸೆಪ್ಟೆಂಬರ್‌ನಲ್ಲಿ ಮೊಂಡಲ್ Facebook ಕಂಪನಿಗೆ ಸೇರಲಿದ್ದಾರೆ.
ಇದನ್ನೂ ಓದಿ: ಆಪಲ್ ಬ್ಯಾಕ್ ಟು ಸ್ಕೂಲ್ ಆಫರ್: ಲ್ಯಾಪ್‌ಟ್ಯಾಪ್, ಐಪ್ಯಾಡ್ ಖರೀದಿ ಮೇಲೆ ರಿಯಾಯ್ತಿ!
ಬಿಶಾಕ್ ಮೊಂಡಲ್ ಅವರು ಹಲವಾರು ಸಂಸ್ಥೆಗಳಲ್ಲಿ ಕೆಲವು ಇಂಟರ್ನ್‌ಶಿಪ್‌ಗಳನ್ನು ಪೂರ್ಣಗೊಳಿಸುವ ಮೂಲಕ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಸದುಪಯೋಗ ಪಡಿಸಿಕೊಂಡರು. ಅದು ಅವರಿಗೆ ಜ್ಞಾನ ಮತ್ತು ಅನುಭವವನ್ನು ಪಡೆಯಲು ಸಹಾಯ ಮಾಡಿತು. ಪಠ್ಯಕ್ರಮದ ಹೊರತಾಗಿಯೂ ಬಿಶಾಕ್, ಕೆಲ ಪ್ರಾಜೆಕ್ಟ್‌ಗಳಲ್ಲಿ ಸಹ ಅನುಭವವನ್ನು ಪಡೆದರು. ಈ ಅನುಭವವು ಹೈಟೆಕ್ ಕಂಪನಿಗಳೊಂದಿಗೆ ಸಂದರ್ಶನಗಳನ್ನು ಎದುರಿಸಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಯಾಗಿರೋ ಮೊಂಡಲ್, ಬಂಗಾಳದ ಬಿರ್ಭುಮ್ ಜಿಲ್ಲೆಯವರು. ಸಾಧಾರಣ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದಾರೆ. ಮೊಂಡಲ್ ತಾಯಿ ಅಂಗನವಾಡಿ ಕಾರ್ಯಕರ್ತೆ. ಇಂಥ ದೊಡ್ಡ ಕಂಪನಿಯ ಆಫರ್ ಸಿಕ್ಕಿದ್ದಕ್ಕೆ ಅವರ ತಾಯಿ ಸಂತೋಷವನ್ನು ವ್ಯಕ್ತಪಡಿಸಿದರು. ಬಿಶಾಕ್ ಯಾವಾಗಲೂ ಅಧ್ಯಯನದಲ್ಲಿ ಗಂಭೀರವಾಗಿರುತ್ತಾನೆ. ಹೈಯರ್ ಸೆಕೆಂಡರಿ ಪರೀಕ್ಷೆಗಳು ಮತ್ತು ಎಂಜಿನಿಯರಿಂಗ್ ಜಂಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ನಂತರ ಅವರು ಜಾದವ್‌ಪುರ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದರು ಎಂದು ಅವರ ತಾಯಿ ಹೇಳಿದರು. Facebook ವಿಶ್ವದ ಅತ್ಯಂತ ಲಾಭದಾಯಕ ಮತ್ತು ಹೈಟೆಕ್ ಕಂಪನಿಗಳಲ್ಲಿ ಒಂದಾಗಿದೆ. ಫೇಸ್‌ಬುಕ್‌ನ ಸಂದರ್ಶನವನ್ನು ಭೇದಿಸುವುದು ಯಾವಾಗಲೂ ದೊಡ್ಡ ಸವಾಲೇ ಸರಿ. ಏಕೆಂದರೆ ಪರಿಣತಿ ಮತ್ತು ಪ್ರತಿಭೆಯನ್ನು ನೇಮಕ ಮಾಡಿಕೊಳ್ಳಲು ಕಂಪನಿಯು ಅನುಭವಕ್ಕಿಂತ ಕೌಶಲ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ.
ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಸಿವಿಲ್ ಎಂಜಿನಿಯರ್
ಈ ವರ್ಷ ಜಾಧವ್‌ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾರತದಲ್ಲಿ ಉದ್ಯೋಗಕ್ಕಾಗಿ ಸ್ವೀಕರಿಸಿದ ಅತ್ಯಧಿಕ ಪ್ಯಾಕೇಜ್ 65 ಲಕ್ಷ ರೂ. ಆಗಿದೆ. ನಾಲ್ಕನೇ ವರ್ಷದ ಐಟಿ ವಿದ್ಯಾರ್ಥಿ ಲಕ್ಷ್ಯ ಬೆಂಗಾನಿ ಅವರು ಆ್ಯಪಲ್ (Apple) ಕಂಪನಿಯಿಂದ ಈ ಆಫರ್ ಸ್ವೀಕರಿಸಿದ್ದಾರೆ. ಅವರು ಜುಲೈನಲ್ಲಿ ಹೈದರಾಬಾದ್ ನಲ್ಲಿ ಆ್ಯಪಲ್ ಕಂಪನಿಯನ್ನು ಸೇರಲಿದ್ದಾರೆ. ಜಾಧವ್‌ಪುರ ವಿಶ್ವವಿದ್ಯಾನಿಲಯದಲ್ಲಿ ಸುಮಾರು 50 ವಿದ್ಯಾರ್ಥಿಗಳು ಕನಿಷ್ಠ ವಾರ್ಷಿಕ 40 ಲಕ್ಷ ರೂ. ಉದ್ಯೋಗದ ಆಫರ್ ಅನ್ನು ಪಡೆದಿದ್ದಾರೆ. ಯೂನಿವರ್ಸಿಟಿಯ ಪ್ಲೇಸ್‌ಮೆಂಟ್ ಡ್ರೈವ್‌ಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇಕಡಾ 84 ರಷ್ಟು ಜನರು ನೂರಕ್ಕೂ ಹೆಚ್ಚು ಕಂಪನಿಗಳಲ್ಲಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ.