* ಎಸ್ಎಸ್ಎಲ್ಸಿ ಪರೀಕ್ಷ ಫಲಿತಾಂಶ ಆ.9ಕ್ಕೆ ಪ್ರಕಟ
* ಸಂತಸ ವ್ಯಕ್ತಪಡಿಸಿದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್
* ಮಾಜಿ ಸಚಿವರ ಮಾತು ನಡೆಸಿಕೊಟ್ರಾ ಹಾಲಿ ಸಚಿವ
ಬೆಂಗಳೂರು, ಆಗಸ್ಟ್ 08: ಕೊರೋನಾ ವೈರಸ್ ಭೀತಿ ನಡುವೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಯಶಸ್ವಿಯಾಗಿ ನಡೆಸಿದೆ. ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಎದುರುನೋಡುತ್ತಿದ್ದಾರೆ.
ಸುರೇಶ್ ಕುಮಾರ್ ಈ ಹಿಂದೆ ಘೋಷಿಸಿದಂತೆ (ಆಗಸ್ಟ್ 10ರ ಒಳಗೆ) ಸೋಮವಾರ (ಆಗಸ್ಟ್ 9) ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ. ಈ ಬಗ್ಗೆ ನೂತನ ಶಿಕ್ಷಣ ಸಚಿವ ಬಿ. ನಾಗೇಶ್ ಅಧಿಕೃತ ಘೋಷಣೆ ಮಾಡಿದ್ದಾರೆ.
SSLC ಫಲಿತಾಂಶಕ್ಕೆ ಡೇಟ್ ಫಿಕ್ಸ್: ಮುಹೂರ್ತ ಘೋಷಿಸಿದ ನೂತನ ಶಿಕ್ಷಣ ಸಚಿವ
ಇನ್ನು ಹಾಲಿ ನೂತನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರು ಆಗಸ್ಟ್ 9ಕ್ಕೆ ಹತ್ತನೇ ತರಗತಿ ರಿಸಲ್ಟ್ ಪ್ರಕಟಿಸುತ್ತಿರುವುದಕ್ಕೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿನಂದಿಸಿದ್ದಾರೆ. ಜೊತೆ ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು...ಕೊರೋನಾ ಮಧ್ಯೆಯೇ ಸುರೇಶ್ ಕುಮಾರ್ ಅವರು ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದು, ಆಗಸ್ಟ್ 10ರೊಳಗೆ ಫಲಿತಾಂಶ ಪ್ರಕಟಿಸುವುದಾಗಿ ಹೇಳಿದ್ದರು. ಆದ್ರೆ, ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಎಸ್ ಸುರೇಶ್ ಕುಮಾರ್ ತಮ್ಮ ಸ್ಥಾನ ಕಳೆದುಕೊಂಡು, ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಈಗ ನೂತನ ಸಚಿವ ಬಿ.ಸಿ. ನಾಗೇಶ್ ಅವರು ಸುರೇಶ್ ಕುಮಾರ್ ಹೇಳಿದಂತೆಯೇ ಒಂದು ದಿನ ಮುಂಚಿತವಾಗಿಯೇ (ಆ.09) ಎಸ್‌ಎಸ್‌ಎಲ್‌ಸಿ ರಿಸಲ್ಟ್ ಅನೌನ್ಸ್ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಮಾಜಿ ಸಚಿವ ಸುರೇಶ್ ಕುಮಾರ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಅದು ಈ ಕೆಳಗಿನಂತಿದೆ.
ಕಳೆದ ಜುಲೈ 19 ಮತ್ತು 22ರಂದು ನಮ್ಮ ರಾಜ್ಯದ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಡೆಸಲಾಯಿತು.ನಾವು ಭರವಸೆ ಕೊಟ್ಟಂತೆ ನಮ್ಮ ಪರೀಕ್ಷಾ ಕೇಂದ್ರಗಳು ಇಡೀ ರಾಜ್ಯದಲ್ಲಿ ಮಕ್ಕಳ ಸುರಕ್ಷಾ ಕೇಂದ್ರಗಳಾಗಿಯೂ ಸಹ ಕಾರ್ಯನಿರ್ವಹಿಸಿದವು. ಕೋವಿಡ್ ಹಿನ್ನೆಲೆಯಲ್ಲಿ ವಿನೂತನ ರೀತಿಯಲ್ಲಿ ನಡೆಸಿದ ಈ ಪರೀಕ್ಷೆಗಳಲ್ಲಿ ಶೇಕಡ 99.6 ಪ್ರಮಾಣದಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸ ದಿಂದ ಹಾಜರಾಗಿ ಉತ್ತರ ಬರೆದರು. ಜುಲೈ 22ರಂದು ಪರೀಕ್ಷೆಗಳು ಮುಗಿದ ನಂತರ ನಾನು ಮಾಧ್ಯಮ ಮಿತ್ರರಿಗೆ ತಿಳಿಸಿದ್ದೆ, "ಈ ಪರೀಕ್ಷೆಗಳ ಫಲಿತಾಂಶವನ್ನು ಆಗಸ್ಟ್ ಹತ್ತರೊಳಗೆ ಪ್ರಕಟಿಸಲಾಗುವುದು" ಎಂದು.
ನಾಳೆ ಆಗಸ್ಟ್ 9 ಸಂಜೆ 3.30 ಗಂಟೆ ಸುಮಾರಿಗೆ ನೂತನ ಶಿಕ್ಷಣ ಸಚಿವರಾದ ಶ್ರೀ ಬಿ ಸಿ ನಾಗೇಶ್ ರವರು 2020-21 ನೆ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ಅಂದು ಕೊಟ್ಟ ಮಾತಿನಂತೆ ಫಲಿತಾಂಶ ಪ್ರಕಟವಾಗುತ್ತಿದೆ. ಒಂದು ರೀತಿಯ ಸಮಾಧಾನ, ತೃಪ್ತಿ ಮತ್ತು ಸಂತಸ.... ನನ್ನದು.