ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮ: ಸಚಿವ ರಾಮಲಿಂಗಾರೆಡ್ಡಿ

By Kannadaprabha NewsFirst Published Oct 7, 2023, 12:30 AM IST
Highlights

ಈ ಹಿಂದೆ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಯೋಜನೆ ಇರಲಿಲ್ಲ. ನಾವು ಅದನ್ನು ಜಾರಿಗೆ ತರುತ್ತಿದ್ದೇವೆ. ಒಂದರಿಂದ ಹತ್ತನೇ ತರಗತಿಯವರೆಗೆ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್‌ ಮಾಧ್ಯಮಗಳ ತರಗತಿಗಳನ್ನು ತೆರೆಯಲಾಗುವುದು ಎಂದು ಘೋಷಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 

ರಾಮನಗರ(ಅ.07):  ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದು, ಆ ಕೆಲಸ ನಮ್ಮಿಂದ ಏಕೆ ಸಾಧ್ಯವಿಲ್ಲ ಎಂದು ಶಾಲೆಗಳ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕುದೂರಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಯೋಜನೆ ಇರಲಿಲ್ಲ. ನಾವು ಅದನ್ನು ಜಾರಿಗೆ ತರುತ್ತಿದ್ದೇವೆ. ಒಂದರಿಂದ ಹತ್ತನೇ ತರಗತಿಯವರೆಗೆ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್‌ ಮಾಧ್ಯಮಗಳ ತರಗತಿಗಳನ್ನು ತೆರೆಯಲಾಗುವುದು ಎಂದು ಘೋಷಿಸಿದರು.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ: ಬಡ ಮಕ್ಕಳ ಪಾಲಕರ ಬಹುದಿನಗಳ ಕನಸು ಸಾಕಾರ..!

ಕುದೂರು ಗ್ರಾಮಕ್ಕೆ ವ್ಯವಸ್ಥಿತ ಬಸ್ ನಿಲ್ದಾಣ ಹಾಗೂ ಕೆಎಸ್ಆರ್ ಟಿಸಿ ಬಸ್ ಡಿಪೋಗೆ ಹತ್ತು ಎಕರೆ ಜಾಗ ಇದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದಂತೆ ಅದನ್ನು ನಮ್ಮ ಇಲಾಖೆಗೆ ವರ್ಗಾವಣೆ ಮಾಡಿದ ಕೂಡಲೇ ಇಲ್ಲಿ ಡಿಪೋ ಮಂಜೂರು ಮಾಡುತ್ತೇವೆ ಎಂದು ಹೇಳಿದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆಗೆ ಉಪಕಾರವಾಗುತ್ತಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಸಿದ್ದಗಂಗಾ ಶ್ರೀಗಳ ಪುತ್ಥಳಿ ಕಾರ್ಯವನ್ನು ನಿಲ್ಲಿಸಿದರು. ಅದನ್ನು ನಾವು ಪೂರ್ಣಗೊಳಿಸುತ್ತೇವೆ. ಕೆಂಪೇಗೌಡರ ಸಮಾಧಿ ಸ್ಥಳ ಕೆಂಪಾಪುರ ಗ್ರಾಮವನ್ನು ಅಭಿವೃದ್ದಿ ಪಡಿಸುತ್ತೇವೆ. ಅಲ್ಲದೆ ಮಾಗಡಿ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಕೆಂಪೇಗೌಡರ ಕೋಟೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಇನ್ನೊಂದು ವರ್ಷದಲ್ಲಿ ಕುದೂರು ಗ್ರಾಪಂ ಅನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಗ್ರಾಮದಲ್ಲಿ ಕೆಎಸ್ಆರ್‌ಟಿಸಿ ಡಿಪೋಗೆಂದು ಕುದೂರು ಪಟ್ಟಣದ ಸಮೀಪ ಹತ್ತು ಎಕರೆ ಜಮೀನಿದ್ದು ಅಲ್ಲಿ ನಿರ್ಮಾಣ ಮಾಡುತ್ತೇವೆ. ಕುದೂರು ಶಿವಗಂಗೆ ರಸ್ತೆ ಅಗಲೀಕರಣ, ಸುಸಜ್ಜಿತ ಮೈದಾನ, ರಂಗಮಂದಿರ, ಉದ್ಯಾನವನಗಳಿಂದ ಕುದೂರನ್ನು ಮಾದರಿ ಹೋಬಳಿಯನ್ನಾಗಿಸುವ ಹೊಣೆಗಾರಿಕೆ ನನ್ನ ಮೇಲಿದೆ ಎಂದು ತಿಳಿಸಿದರು.

click me!