ಶಿಕ್ಷಣ ಸಂಸ್ಥೆಗಳೇ ನಿಜ ಸೇನಾನಿಗಳು: ಉಪರಾಷ್ಟ್ರಪತಿ ಧನ್‌ಕರ್‌

By Kannadaprabha NewsFirst Published Mar 2, 2023, 10:33 AM IST
Highlights

ಎಂ.ಎಸ್‌.ರಾಮಯ್ಯಜನ್ಮ ಶತಮಾನೋತ್ಸವಕ್ಕೆ ಚಾಲನೆ, ರಾಜ್ಯಪಾಲ ಗೆಹಲೋತ್‌, ಸಚಿವ ಮಾಧುಸ್ವಾಮಿ ಭಾಗಿ, ಎಂಎಸ್‌ಆರ್‌ ಕುರಿತ 3 ಕೃತಿ ಬಿಡುಗಡೆ. 

ಬೆಂಗಳೂರು(ಮಾ.02):  ಭಾರತದ ಸ್ವಾತಂತ್ರ್ಯ ಶತಮಾನೋತ್ಸವದ ವೇಳೆಗೆ ಶಿಕ್ಷಣ, ಉದ್ಯೋಗ, ಆರ್ಥಿಕತೆ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ದೇಶವನ್ನು ನಂಬರ್‌ 1 ಸ್ಥಾನಕ್ಕೆ ಕೊಂಡೊಯ್ಯುವ ಬಹುದೊಡ್ಡ ಸವಾಲು ಪ್ರತಿಯೊಬ್ಬ ಪ್ರಜೆಯ ಮುಂದಿದೆ. ಈ ವಿಚಾರದಲ್ಲಿ ದೇಶದ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳ ದೊಡ್ಡದಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಹೇಳಿದರು.

‘ಗೋಕುಲ ಶಿಕ್ಷಣ ಪ್ರತಿಷ್ಠಾನ’ವು ಎಂ.ಎಸ್‌.ಆರ್‌.ನಗರದ ಜ್ಞಾನಗಂಗೋತ್ರಿ ಕ್ಯಾಂಪಸ್‌ನಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ.ಎಂ.ಎಸ್‌. ರಾಮಯ್ಯ ಅವರ ಜನ್ಮ ಶತಮಾನೋತ್ಸವ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಮಹನೀಯರ ಸ್ವಾತಂತ್ರ್ಯ ಹೋರಾಟ ತ್ಯಾಗ, ಬಲಿದಾನ, ಅಂಬೇಡ್ಕರ್‌ ಅವರು ನೀಡಿದ ಬಲಿಷ್ಠ ಸಂವಿಧಾನ, ದೂರದೃಷ್ಟಿನಾಯಕರ ಆಡಳಿತದ ಫಲವಾಗಿ ಭಾರತ ಬಹುದೂರ ಸಾಗಿ ಇಂದು ಅಮೃತ ಕಾಲದಲ್ಲಿದೆ. 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿರುವ ಭಾರತದತ್ತ ಇಡೀ ಪ್ರಪಂಚವೇ ತಿರುಗಿನೋಡುತ್ತಿದೆ ಎಂದರು.

Latest Videos

ಬಾಗಲಕೋಟೆ: ಕಲಾದಗಿಯಲ್ಲಿ ಆಧುನಿಕ ಪದವಿ ಕಾಲೇಜು ನಿರ್ಮಾಣ, ಸಚಿವ ನಿರಾಣಿ

ಎಂ.ಎಸ್‌.ರಾಮಯ್ಯ ಅವರು ಒಬ್ಬ ಕರ್ಮಯೋಗಿ. ತಮ್ಮ ಇಡೀ ಜೀವನವನ್ನು ಕರ್ಥವ್ಯಪಥದಲ್ಲಿ ಸವೆಸಿದವರು. ಅತ್ಯಂತ ಸರಳ ಜೀವನ ನಡೆಸಿ ದೊಡ್ಡ ಗುರಿ ಸಾಧಿಸಿದವರು. ಅವರು ಆರಂಭಿಸಿದ ಗೋಕುಲ ಶಿಕ್ಷಣ ಸಂಸ್ಥೆಯಡಿ ಇಂದು ಹತ್ತಾರು ವಿದ್ಯಾಸಂಸ್ಥೆಗಳು ಬೆಳೆದು ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ ಎಂದು ಉಪರಾಷ್ಟ್ರಪತಿ ಅವರು ಶ್ಲಾಘಿಸಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಮಾತನಾಡಿ, ಜೀವನದಲ್ಲಿ ಮನುಷ್ಯನ ಯಶಸ್ಸಿಗೆ ಶಿಕ್ಷಣ ಬಹಳ ಮುಖ್ಯ. ಇದನ್ನು ಅರಿತಿದ್ದ ಎಂ.ಎಸ್‌.ರಾಮಯ್ಯ ಅವರು ಶಿಕ್ಷಣ ಕ್ಷೇತ್ರದ ಮೂಲಕ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಸುಧಾರಣೆಗೆ ಶ್ರಮಿಸಿದ ದೂರದೃಷ್ಟಿಯ ವ್ಯಕ್ತಿ. ಬೆಂಗಳೂರು ಶಿಕ್ಷಣದ ಹಬ್‌ ಆಗಲು ಅವರ ಕೊಡುಗೆ ಅಪಾರ. ಅವರ ಜೀವನ ಮತ್ತು ಆದರ್ಶ ಎಲ್ಲರಿಗೂ ಪ್ರೇರಣೆ ಎಂದು ಶ್ಲಾಘಿಸಿದ ಅವರು, ಭಾರತ ವನ್ನು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಗೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಶಿಕ್ಷಣ ಕ್ಷೇತ್ರಕ್ಕೆ ಎಂ.ಎಸ್‌. ರಾಮಯ್ಯ ಅವರ ಕಾಣಿಕೆ ದೊಡ್ಡದು. ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ರಾಜ್ಯವನ್ನು ಕಟ್ಟಲು ನೆರವಾದರು ಎಂದರು.

ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ಅವರು ಎಂ.ಎಸ್‌.ರಾಮಯ್ಯ ಜನ್ಮ ಶತಮಾನೋತ್ಸವ ಭವನವನ್ನು ವರ್ಚುವಲ್ಲಾಗಿ ಉದ್ಘಾಟಿಸಿದರು. ಗೋಕುಲ ಸಂಸ್ಥೆಯ ಕುರಿತಾದ ‘ಕಾಫಿ ಟೇಬಲ್‌, ಅಪೂರ್ವ ಸಾಧಕ, ರಾಮಯ್ಯ ನವರ ವಿಜಯಗಾಥೆ’ ಎಂಬ ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದರು.

1ನೇ ಕ್ಲಾಸ್‌ ಪ್ರವೇಶಕ್ಕೆ 6 ವರ್ಷ: ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ

ಉಪ ರಾಷ್ಟ್ರಪತಿ ಅವರ ಪತ್ನಿ ಡಾ.ಸುದೇಶ್‌ ಧನ್‌ಕರ್‌, ಎಂ.ಎಸ್‌. ರಾಮಯ್ಯ ಅವರ ಪುತ್ರರಾದ ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್‌. ಜಯರಾಮ್‌ ಹಾಗೂ ಉಪಾಧ್ಯಕ್ಷ ಎಂ.ಆರ್‌.ಸೀತಾರಾಮ್‌, ಕಾರ್ಯದರ್ಶಿ ಎಂ.ಆರ್‌.ರಾಮಯ್ಯ, ಮುಖ್ಯ ಕಾರ್ಯಕಾರಿಗಳಾದ ಎಂ.ಆರ್‌. ಶ್ರೀನಿವಾಸಮೂರ್ತಿ, ರಾಮಯ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಕೆ.ರೈನಾ, ಬಿ.ಎಸ್‌. ರಾಮಪ್ರಸಾದ್‌, ಪ್ರಾಂಶುಪಾಲ ಡಾ. ಎನ್‌ವಿಆರ್‌ ನಾಯ್ಡು ಇತರರು ಇದ್ದರು.
ಸಮಾಜ, ಜನಸೇವೆಯೇ ದೇವರ ಸೇವೆ ಎಂದು ತಿಳಿದಿದ್ದವರು ನಮ್ಮ ತಂದೆ. ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಡಿ ಇಂದು ಎಂಜಿನಿಯರಿಂಗ್‌ನಿಂದ ವೈದ್ಯಕೀಯ ಶಿಕ್ಷಣದ ವರೆಗೆ 25 ಕಾಲೇಜುಗಳು ಸಾವಿರಾರು ಮಕ್ಕಳಿಗೆ ಶಿಕ್ಷಣ ದೊರಕಿಸುತ್ತಿವೆ. ನೀರಾವರಿ ಕ್ಷೇತ್ರಕ್ಕೂ ಅವರ ಕೊಡುಗೆ ಅಪಾರವಾದದ್ದು ಅಂತ ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್‌.ಜಯರಾಮ್‌ ತಿಳಿಸಿದ್ದಾರೆ. 

ಶಿಕ್ಷಣ ಸಂಸ್ಥೆಗಳೇ ನಿಜ ಸೇನಾನಿಗಳು

ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿ ನಿಂತು ವಿಶ್ವವನ್ನು ಮುನ್ನಡೆಸುವ ಗುರಿಯೊಂದಿಗೆ ಭಾರತ ಸಾಗುತ್ತಿದೆ. ಈ ಸಾಧನೆಗೆ ಪ್ರತಿಯೊಬ್ಬ ಪ್ರಜೆಯೂ ಜೈಜೋಡಿಸಬೇಕು. ಅದರಲ್ಲೂ ಈ ವಿಚಾರದಲ್ಲಿ ಶಿಕ್ಷಣ ಸಂಸ್ಥೆಗಳೇ ನಿಜವಾದ ಸೇನಾನಿಗಳು. ನಮ್ಮ ಯುವಜನರಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸಂಶೋಧನೆ, ಆವಿಷ್ಕಾರಗಳಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸಿಕೊಟ್ಟು ದೇಶವನ್ನು ಮುಂಚೂಣಿಗೆ ತರಲು ಶಿಕ್ಷಣ ಸಂಸ್ಥೆಗಳು ಬದಲಾವಣೆಯ ಶಕಿ ್ತಗಳಾಗಿ ಶ್ರಮಿಸಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅಭಿಪ್ರಾಯಪಟ್ಟರು.

click me!