ಮಹಾರಾಷ್ಟ್ರಕ್ಕಿಂತ ಕರ್ನಾಟಕದಲ್ಲಿ ಕಲಿಕಾ ಗುಣಮಟ್ಟ ಕಳಪೆ: ಬಸವರಾಜ ಹೊರಟ್ಟಿ

By Kannadaprabha News  |  First Published Jul 2, 2022, 9:17 PM IST

*   ಶಿಕ್ಷಣ ಇಲಾಖೆಯಲ್ಲಿ ಸಮಸ್ಯೆ, ಗೊಂದಲ ಜಾಸ್ತಿ
*  ಶಿಕ್ಷಣದ ವ್ಯಾಪಾರೀಕರಣವಾಗುತ್ತಿದೆ. ಇದು ಸರಿಯಲ್ಲ
*  ಇಂದಿನ ಶಿಕ್ಷಣಕ್ಕೆ ಬರೀ ಅಂಕವೇ ಪ್ರಧಾನವಾದಂತಾಗಿದೆ 


ಹುಬ್ಬಳ್ಳಿ(ಜು.02): ರಾಜ್ಯದ ಕಲಿಕಾ ಗುಣಮಟ್ಟಮಹಾರಾಷ್ಟ್ರಕ್ಕಿಂತ ಕಳಪೆಯಾಗಿದೆ. ಯಾವ ಸರ್ಕಾರಗಳೂ ಶಿಕ್ಷಣ ಇಲಾಖೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಿರುವ ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಇದರಿಂದಾಗಿ ಇಲಾಖೆಯಲ್ಲಿ ಸಮಸ್ಯೆ ಹಾಗೂ ಗೊಂದಲ ಹೆಚ್ಚು ಎಂದರು.

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ‘ಪತ್ರಕರ್ತರೊಂದಿಗೆ ಸಂವಾದ’ದಲ್ಲಿ ಮಾತನಾಡಿದ ಅವರು, ಬರೀ ಅಧಿಕಾರಿಗಳ ಮಾತು ಕೇಳಿ ಸರ್ಕಾರಗಳು ಶಿಕ್ಷಣ ಇಲಾಖೆಯನ್ನು ನಿರ್ಲಕ್ಷಿಸುತ್ತಾ ಬಂದಿವೆ ಎಂದು ವಿಷಾಧಿಸಿದರು.

Latest Videos

undefined

ಕಳೆದ ವರ್ಷ ರಾಜ್ಯದಲ್ಲಿ ಶಾಲಾ ಪ್ರವೇಶ ಕುಸಿತ

ಯಾರಿಗಾದರೂ ಕೆಟ್ಟ ಹೆಸರು ತರಬೇಕೆಂದರೆ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಲಾಗುತ್ತದೆ ಎಂಬ ಮಾತಿದೆ. ಇಲಾಖೆಯಲ್ಲಿನ ಇಂದಿನ ಪರಿಸ್ಥಿತಿ ನೋಡಿದರೆ, ಇದು ನಿಜ ಎನಿಸುತ್ತದೆ. ಶಿಕ್ಷಣ ಇಲಾಖೆಯನ್ನು ಸುಧಾರಿಸಲು ಬ್ರಹ್ಮನಿಂದಲೂ ಸಾಧ್ಯವಿಲ್ಲ. ಒಂದು ಸಮಸ್ಯೆ ಮುಗಿಯುವುದರೊಳಗೆ ಮತ್ತೊಂದು ಸಮಸ್ಯೆ ತಲೆ ಎತ್ತುತ್ತದೆ. ಇದಕ್ಕೆಲ್ಲ ಅಧಿಕಾರಿಗಳೇ ನೇರ ಕಾರಣ ಎಂದ ಅವರು, ಮಕ್ಕಳ ಕಲಿಕಾ ಮಟ್ಟಸುಧಾರಿಸುವುದು ಸರ್ಕಾರದ ಜವಾಬ್ದಾರಿ. ಅದಕ್ಕಾಗಿ ಎಲ್ಲ ರೀತಿಯ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಇದೀಗ ಪಠ್ಯಪುಸ್ತಕ, ಸಮವಸ್ತ್ರ ಸರಿಯಾಗಿ ಮಕ್ಕಳಿಗೆ ತಲುಪುತ್ತಿಲ್ಲ. ಅದನ್ನು ಕಾಲಕಾಲಕ್ಕೆ ತಲುಪಿಸುವ ಕೆಲಸ ಮಾಡಬೇಕು. ತಾವು ಸಚಿವರಾಗಿದ್ದ ಅವಧಿಯಲ್ಲಿ ಮೇ ತಿಂಗಳೊಳಗೆ ಸೈಕಲ್‌, ಪುಸ್ತಕ ಕೊಡುವ ಪದ್ಧತಿ ಇತ್ತು ಎಂದು ತಿಳಿಸಿದರು.

ಪಠ್ಯಪುಸ್ತಕ ಪರಿಷ್ಕರಣೆ, ವರ್ಗಾವಣೆಯಲ್ಲಿನ ಲೋಪ, ಪಠ್ಯ ಪುಸ್ತಕ ವಿತರಣೆಯಲ್ಲಾಗುವ ವಿಳಂಬಕ್ಕೆ ಅಧಿಕಾರಿಗಳು ಸಮರ್ಪಕ ಕೆಲಸ ಮಾಡುತ್ತಿಲ್ಲ ಎಂಬುದಕ್ಕೆ ಸಾಕ್ಷಿ. ಯಾವುದೇ ಇಲಾಖೆ ಮಂತ್ರಿಗಳಾಗಿರಬಹುದು ಕೇವಲ ಅಧಿಕಾರಿಗಳ ಮಾತಿಗೆ ಕಿವಿಗೊಡದೇ, ಸ್ವಂತ ವಿವೇಚನೆ ಬಳಸಿ ಬದ್ಧತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಇಲಾಖೆಯಲ್ಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಹೊಸಪೇಟೆ: ಪಾಸಾದರೂ ಡಿಗ್ರಿ ಅಂಕಪಟ್ಟಿ ಕೊಡುತ್ತಿಲ್ಲ, ವಿದ್ಯಾರ್ಥಿಗಳ ಪರದಾಟ

ವರ್ಗಾವಣೆ ಸಮಸ್ಯೆಗೆ ಕಾರಣ:

2007ರಲ್ಲಿ ಜಾರಿಗೆ ತಂದ ಶಿಕ್ಷಕರ ವರ್ಗಾವಣೆ ಕಾಯ್ದೆ ಶಿಕ್ಷಕರ ಸ್ನೇಹಿಯಾಗಿದೆ. ಕಾಯ್ದೆ ಪ್ರಕಾರ ಎಬಿಸಿ ವಲಯಗಳಿವೆ. ಹೊಸದಾಗಿ ನೇಮಕಗೊಂಡ ಶಿಕ್ಷಕರನ್ನು ಮೊದಲು ಸಿ ವಲಯಕ್ಕೆ, ಸಿ ವಲಯದಲ್ಲಿದ್ದವು ಬಿ ವಲಯಕ್ಕೆ, ಬಿ ವಲಯದಲ್ಲಿದ್ದವರು ಎ ವಲಯಕ್ಕೆ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಪ್ರತಿ ವರ್ಷ ಶಿಕ್ಷಕರ ನೇಮಕಾತಿ ಮಾಡಿಕೊಳ್ಳದ ಕಾರಣ ಶಿಕ್ಷಕರಿಗೆ ಸಮಸ್ಯೆಯಾಗಿದೆ. ಅತಿಥಿ ಶಿಕ್ಷಕರ ನೇಮಕಾತಿ ಇಲಾಖೆ ಜಾರಿಗೆ ತಂದ ಕೆಟ್ಟಪದ್ಧತಿ. ಇಡೀ ಶಿಕ್ಷಣ ವ್ಯವಸ್ಥೆಯ ಆಶಯಗಳೇ ಬುಡಮೇಲಾಗುತ್ತವೆ ಎಂದು ಹೊರಟ್ಟಿ ಹೇಳಿದರು.

ವ್ಯಾಪಾರೀಕರಣ ಸರಿಯಲ್ಲ

ಶಿಕ್ಷಣದ ವ್ಯಾಪಾರೀಕರಣವಾಗುತ್ತಿದೆ. ಇದು ಸರಿಯಲ್ಲ. ಇಂದಿನ ಶಿಕ್ಷಣಕ್ಕೆ ಬರೀ ಅಂಕವೇ ಪ್ರಧಾನವಾದಂತಾಗಿದೆ. ಅಂಕ ಬೇಕು. ಇದರೊಂದಿಗೆ ಸಂಸ್ಕಾರ ಕೊಡಿಸುವ ಕೆಲಸವೂ ಆಗಬೇಕಿದೆ. ಪಾಲಕರ ಮನಸ್ಥಿತಿ ಅರಿತುಕೊಂಡಿರುವ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನೇ ವ್ಯಾಪಾರೀಕರಣವನ್ನಾಗಿ ಮಾಡಿಕೊಂಡಿವೆ. ಜಾಣ ವಿದ್ಯಾರ್ಥಿಗಳನ್ನು ತೆಗೆದುಕೊಂಡು ಒಳ್ಳೆಯ ಫಲಿತಾಂಶ ಬಂದಿದೆ ಎಂದು ಪ್ರಚಾರ ಮಾಡುತ್ತಿವೆ. ತಾವು ಶಿಕ್ಷಣ ಸಚಿವರಾಗಿದ್ದಾಗ ನೀತಿಪಾಠದ ಒಂದು ಕ್ಲಾಸ್‌ ಬೋಧನೆ ಇದ್ದಿದ್ದನ್ನು ಸ್ಮರಿಸಿಕೊಂಡರು.
 

click me!