* ಫೆಬ್ರವರಿಯಲ್ಲಿ ಕೊರೋನಾ ಹೆಚ್ಚಳ ಸಾಧ್ಯತೆ
* ಬೇರೆ ಜಿಲ್ಲೆಗಳಲ್ಲೂ ಶಾಲಾ-ಕಾಲೇಜುಗಳು ಬಂದ್ ಆಗುತ್ತಾ?
* ಈ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಬೆಂಗಳೂರು, (ಜ.08): ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದಲ್ಲಿ ಭೌತಿಕ ತರಗತಿಗಳನ್ನು ನಡೆಸಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ಹೀಗಾಗಿ ಶಾಲೆಗಳನ್ನು (Schools) ನಡೆಸುವ ಸಂಬಂಧ ಪರಿಸ್ಥಿತಿಗೆ ಅನುಗುಣವಾಗಿ ತಾಲೂಕು ಹಂತದಲ್ಲೇ ಸ್ಥಳೀಯವಾಗಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್(BC Nagesh) ಹೇಳಿದ್ದಾರೆ.
ಬೇರೆ ಜಿಲ್ಲೆಗಳಲ್ಲೂ ಶಾಲಾ-ಕಾಲೇಜುಗಳು ಬಂದ್ ಆಗುತ್ತಾ ಎನ್ನುವ ಗೊಂದಲದಲ್ಲಿ ಪೋಷಕರು ಇದ್ದಾರೆ. ಈ ಬಗ್ಗೆ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ನಾಗೇಶ್, ಜಿಲ್ಲೆ, ತಾಲೂಕುಗಳಲ್ಲಿ ಕೇಸ್ ಹೆಚ್ಚಾದ್ರೆ ಕ್ರಮಕ್ಕೆ ಆಯಾ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ಗಳು ನಿರ್ಧಾರ ಮಾಡುತ್ತಾರೆ. ಕೇಸ್ ಶೇ.2ಕ್ಕಿಂತ ಹೆಚ್ಚಾದ ಕಡೆ ವಿದ್ಯಾಗಮ ಮೂಲಕ ಕಲಿಸುತ್ತೇವೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Omicron Threat: 1 ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ
ಫೆಬ್ರವರಿಯಲ್ಲಿ ಕೊರೋನಾ ಜಾಸ್ತಿ ಆಗುತ್ತೆ ಎಂದು ತಜ್ಞರು ಹೇಳಿದ್ದಾರೆ. ಕೊರೋನಾ ಹೆಚ್ಚಾದರೆ SSLC ಪರೀಕ್ಷೆ ಬಗ್ಗೆಯೂ ಚರ್ಚಿಸುತ್ತೇವೆ ಮತ್ತು ವಿದ್ಯಾರ್ಥಿಗಳಿಗೆ ಕರೆಂಟ್ ಸಮಸ್ಯೆ ಆಗದಂತೆ ಬೆಸ್ಕಾಂ ಜತೆ ಚರ್ಚಿಸುತ್ತೇವೆ ಎಂದು ತಿಳಿಸಿದರು.
ಮಕ್ಕಳಿಗೆ ವಿದ್ಯಾಗಮ
ಕೋವಿಡ್ 3ನೇ ಅಲೆ(Covid 3rd Wave) ಹಿನ್ನೆಲೆಯಲ್ಲಿ ಬೆಂಗಳೂರು(Bengaluru)ನಗರದಲ್ಲಿ ಈಗಾಗಲೇ ಸ್ಥಗಿತಗೊಳಿಸಿರುವ 1 ರಿಂದ 9ನೇ ತರಗತಿ ಶಾಲಾ ಮಕ್ಕಳಿಗೆ(Children) ಪರ್ಯಾಯ ಮಾರ್ಗದ ಮೂಲಕ ಪಠ್ಯ ಬೋಧನೆಗೆ ಸರ್ಕಾರ ‘ವಿದ್ಯಾಗಮ’(Vidyagama) ಕಾರ್ಯಕ್ರಮವನ್ನು ಮರು ಜಾರಿಗೊಳಿಸಿದೆ. ಅಗತ್ಯ ಸಿದ್ಧತೆ ಮಾಡಿಕೊಂಡು ಕೂಡಲೇ ವಿದ್ಯಾಗಮ ಜಾರಿಗೆ ಕ್ರಮ ವಹಿಸಲು ಸೂಚಿಸಿದೆ.
ಪ್ರಸಕ್ತ ಅನಿಶ್ಚಿತತೆಯ ಸನ್ನಿವೇಶದಲ್ಲಿ ರಾಜ್ಯಾದ್ಯಂತ(Karnataka) ಶಾಲೆಗಳನ್ನು(Schools) ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಂದರ್ಭ ಬರಬಹುದಾದ ಹಿನ್ನೆಲೆಯಲ್ಲಿ ಇತರೆ ಎಲ್ಲ ಜಿಲ್ಲೆಗಳಲ್ಲೂ ವಿದ್ಯಾಗಮ ಪುನಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಆಯಾ ಜಿಲ್ಲಾ ಉಪ ನಿರ್ದೇಶಕರು, ಬಿಇಒಗಳಿಗೆ ಸೂಚನೆ ನೀಡಿದೆ. ಈ ಸಂಬಂಧ ವಿದ್ಯಾರ್ಥಿಗಳ ತಂಡಗಳನು ರಚಿಸಿಕೊಂಡು ಪಾಳಿ ಪದ್ಧತಿಯಲ್ಲಿ ಪ್ರತಿ ತರಗತಿ ಮಕ್ಕಳಿಗೆ ವಾರದ ನಿಗದಿತ ದಿನಗಳಲ್ಲಿ ಪ್ರತಿ ದಿನ ಗರಿಷ್ಠ 4 ತರಗತಿಗಳನ್ನು ನಡೆಸಲು ವೇಳಾಪಟ್ಟಿಯನ್ನೂ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಆನ್‌ಲೈನ್ ವಿದ್ಯಾಗಮ ಮತ್ತು ಆಫ್‌ಲೈನ್ ವಿದ್ಯಾಗಮಕ್ಕೆ ಪ್ರತ್ಯೇಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಇಲಾಖೆಯ ವೆಬ್‌ಸೈಟ್‌ನಲ್ಲಿ www.schooleducation.kar.nic.in ನಲ್ಲಿ ವೀಕ್ಷಿಸಬಹುದು.
25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರ:
ಪ್ರತಿ 20ರಿಂದ 25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು(Teacher) ನೇಮಿಸಿ ವಿದ್ಯಾಗಮ ನಡೆಸಬೇಕು. ಮೂರು ವಿಧಾನದಲ್ಲಿ ವಿದ್ಯಾಗಮ ಶಿಕ್ಷಣ(Education) ನಡೆಸಬಹುದು. ಮೊದಲ ವಿಧಾನದಲ್ಲಿ ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಯಾವುದೇ ತಂತ್ರಜ್ಞಾನ ಆಧಾರಿತ ಸಾಧನಗಳಿಲ್ಲದ ಮಕ್ಕಳಿಗೆ ಶಾಲಾವರಣ, ಊರ ದೇವಸ್ಥಾನ, ವಠಾರ, ಸಮುದಾಯ ಭವನಗಳ ವ್ಯಾಪ್ತಿಯ ಕಾಲ್ಪನಿಕ ಕಲಿಕಾ ಕೋಣೆಯಲ್ಲಿ ಭೌತಿಕವಾಗಿ ಆಫ್‌ಲೈನ್ ತರಗತಿ ನಡೆಸಬೇಕು. ಆಫ್‌ಲೈನ್ ತರಗತಿಗೆ(Offline Class) ಪಾಲಕರ ಅನುಮತಿ ಪತ್ರ ಕಡ್ಡಾಯ. ಶಾಲೆಯಲ್ಲಿರುವ ಮಕ್ಕಳ ಹಾಗೂ ಶಿಕ್ಷಕ ಸಂಖ್ಯೆ ಅನುಗುಣವಾಗಿ ಮಕ್ಕಳ ಸಂಖ್ಯೆಯನ್ನು ಬದಲಿಸಲು ಅವಕಾಶ ಕಲ್ಪಿಸಿದೆ.
ಇನ್ನು ಭೌತಿಕವಾಗಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಲ್ಲಿ(Students) ಇಂಟರ್ನೆಟ್ ರಹಿತ ಮೊಬೈಲ್ ಫೋನ್ ಹೊಂದಿರುವವರಿಗೆ ಆ ದೂರವಾಣಿ ಮೂಲಕ, ಇಂಟರ್‌ನೆಟ್ ಸಹಿತ ಫೋನ್, ಲ್ಯಾಪ್‌ಟಾಪ್, ಸ್ಮಾಟ್ ಫೋನ್, ಟ್ಯಾಬ್ ಹೊಂದಿರುವವರಿಗೆ ಝೂಮ್, ವೆಬೆಕ್ಸ್, ಗೂಗಲ್ ಕ್ಲಾಸ್ ರೂಂ ಮತ್ತಿತರ ಆನ್‌ಲೈನ್ ತರಗತಿ ನಡೆಸಬೇಕು. ಈ ಮಕ್ಕಳನ್ನು ಕೂಡ ವಾರದಲ್ಲಿ ಒಂದು ದಿನ ಮಧ್ಯಾಹ್ನದ ನಂತರ ಶಾಲಾ ಆವರಣಕ್ಕೆ ಕರೆಸಿ ಕಲಿಕೆಯ ಪ್ರಗತಿ ಪರಿಶೀಲಿಸಬೇಕು. ವಿದ್ಯಾಗಮಕ್ಕೆ ಸ್ವಯಂ ಸೇವಕ ವಿದ್ಯಾವಂತ ಯುವಕ, ಯುವತಿಯರ ಸಹಕಾರ ಪಡೆಯಲು ಅವಕಾಶ ನೀಡಿದೆ.