ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಸರ್ಕಾರ, ವಿರೋಧ ಪಕ್ಷ ಮತ್ತು ಸಾಹಿತಿಗಳ ನಡುವೆ ನಡೆಯುತ್ತಿರುವ ತಿಕ್ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮೈಸೂರು/ಚಾಮರಾಜನಗರ (ಮೇ.26): ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಸರ್ಕಾರ, ವಿರೋಧ ಪಕ್ಷ ಮತ್ತು ಸಾಹಿತಿಗಳ ನಡುವೆ ನಡೆಯುತ್ತಿರುವ ತಿಕ್ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಾಲಾ ಪಠ್ಯಕ್ಕೆ ನನ್ನ ಕಥನ ಸೇರಿಸಬೇಡಿ ಎಂಬ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ಮನವಿಯನ್ನು ತಿರಸ್ಕರಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಪಠ್ಯಪುಸ್ತಕ ಅಚ್ಚಾಗಿರುವ ಈ ಹೊತ್ತಲ್ಲಿ ಪಠ್ಯವನ್ನು ಹಿಂದಕ್ಕೆ ತೆಗೆಯಲು ಬರುವುದಿಲ್ಲ. ಇದಕ್ಕೆ ಸಂಬಂಧಿಸಿ ನಾನು ದೇವನೂರ ಮಹಾದೇವ ಅವರನ್ನು ಭೇಟಿಯಾಗಿ ಗೊಂದಲ ಪರಿಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ದೇವನೂರ ಮಹಾದೇವ, ಸದ್ಯದ ಪರಿಸ್ಥಿತಿಯಲ್ಲಿ ನನ್ನ ಪಾಠ ಕೈ ಬಿಡುವುದಿಲ್ಲವಾದರೆ ಪಾಠ ಮಾಡಬೇಡಿ ಎಂದು ಸರ್ಕಾರವೇ ಹೇಳಿಬಿಡಲಿ ಎಂದು ತಿರುಗೇಟು ನೀಡಿದ್ದಾರೆ. ‘ಪಠ್ಯದಿಂದ ನನ್ನ ಕಥನವನ್ನು ತೆಗೆಯಿರಿ, ನಿಮಗೆ ಕೊಟ್ಟಿದ್ದ ಹಕ್ಕನ್ನು ವಾಪಸ್ಸು ಪಡೆದಿದ್ದೇನೆ’ ಎಂಬ ದೇವನೂರ ಮಹಾದೇವ ಅವರ ಪತ್ರದ ವಿಚಾರಕ್ಕೆ ಸಂಬಂಧಿಸಿ ಮೈಸೂರು ಮತ್ತು ಚಾಮರಾಜನಗರಗಳಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಬಿ.ಸಿ.ನಾಗೇಶ್, ದೇವನೂರ ಮಹಾದೇವ ಹಿರಿಯ ಸಾಹಿತಿಗಳು. ಮಾಧ್ಯಮಗಳಲ್ಲಿ ಅವರ ಪತ್ರದ ಬಗ್ಗೆ ನೋಡಿದೆ.
Textbook Controversy: ಪಠ್ಯ ಪರಿಷ್ಕರಣೆಗೆ ಹೆಚ್ಚಾಗುತ್ತಿದೆ ವಿರೋಧದ ಕೂಗು!
ಆದರೆ ನನಗೆ ಯಾವುದೇ ಪತ್ರ ಬಂದಿಲ್ಲ. ಮುಂಚೆಯೇ ಹೇಳಿದ್ದರೆ ಅವರ ಮಾತಿನ ಬಗ್ಗೆ ಚರ್ಚೆ ಮಾಡಬಹುದಿತ್ತು. ಈಗಾಗಲೇ ಪಠ್ಯಪುಸ್ತಕ ಮುದ್ರಣವಾಗಿದ್ದು ಶೇ.80ರಷ್ಟುವಿತರಣೆಯಾಗಿದೆ. ಇದು ವಾಸ್ತವ ಸ್ಥಿತಿ ಎಂದರು. ತಾತ್ವಿಕ ಭಿನ್ನತೆ ನಮಗಿಲ್ಲ. ದೇವನೂರು ಅವರಿಗಿರಬಹುದು. ಇದನ್ನು ಮಾತನಾಡಿ ಬಗೆಹರಿಸುತ್ತೇನೆ. ದೇವನೂರು ಹೇಳುತ್ತಿರುವುದು ಸತ್ಯದ ಮಾತು. ನಾವು ಎಲ್ಲವನ್ನು ಬದಲಾವಣೆ ಮಾಡಿದ್ದೇವೆ. ಬ್ರಿಟಿಷರು ತಯಾರಿಸಿದ ಪಠ್ಯವೇ ಇತ್ತು. ನಾವು ಬಂದ ಮೇಲೆಯೇ ರಾಷ್ಟ್ರೀಯತೆಯನ್ನು ಪಠ್ಯದಲ್ಲಿ ಸೇರಿಸಿದ್ದು ಎಂದರು.
ಪಾಠ ಮಾಡಬೇಡಿ- ಮಹಾದೇವ: ಇದಕ್ಕೆ ದೇವನೂರ ಮಹಾದೇವ ಪ್ರತಿಕ್ರಿಯಿಸಿ, ಸದ್ಯದ ಪರಿಸ್ಥಿತಿಯಲ್ಲಿ ನನ್ನ ಪಾಠ ಕೈ ಬಿಡುವುದಿಲ್ಲವಾದರೆ ಸರ್ಕಾರವೇ ಪಾಠ ಮಾಡಬೇಡಿ ಎಂದು ಹೇಳಿಬಿಡಲಿ ಎಂದು ಖಡಕ್ ಆಗಿ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಪಠ್ಯ ಪುಸ್ತಕ ಪ್ರಿಂಟ್ ಆಗಿದ್ದರೆ ವಾಪಸ್ ಕಿತ್ತುಕೊಳ್ಳೋಕೆ ಆಗುತ್ತಾ? ಪಠ್ಯ ಮಕ್ಕಳ ಕೈ ಸೇರಿದ್ದರೆ ಸರ್ಕಾರ, ಅಧಿಕಾರ ಅವರ ಕೈನಲ್ಲೇ ಇದೆ. ಪಾಠ ಮಾಡಬೇಡಿ ಅಂತ ಸರ್ಕಾರವೇ ಹೇಳಲಿ ಎಂದರು.
ಶಿಕ್ಷಣ ಮಾತ್ರವಲ್ಲ ಎಲ್ಲವನ್ನು ಬದಲಾವಣೆ ಮಾಡಿದ್ದೇವೆ BC Nagesh
ಆರೆಸ್ಸೆಸ್ ಪ್ರಭಾವದಲ್ಲಿ ಸಚಿವ: ನಾನು ಪ್ರಚೋದನೆಗೆ ಒಳಗಾಗಿದ್ದೇನೆ ಎಂದು ಹೇಳುವ ಸಚಿವರೇ ಪ್ರಚೋದನೆ ಒಳಗಾಗಿದ್ದಾರೆ. ನಾನು ಯಾರ ಪ್ರಭಾವಕ್ಕೂ ಒಳಗಾಗಿಲ್ಲ, ಅವರು ನಾಗಪುರದ ಆರ್‌ಎಸ್‌ಎಸ್ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಸಚಿವ ಬಿ.ಸಿ. ನಾಗೇಶ್ ಅವರಿಗೆ ತಿರುಗೇಟು ನೀಡಿದರು.