ಸರ್ಕಾರಿ ಶಾಲೆ ಜಾಗ ಮಾರಾಟ?: ಶಿಕ್ಷಣ ಸಚಿವ ನಾಗೇಶ್‌ ಹೇಳಿದ್ದಿಷ್ಟು

By Kannadaprabha News  |  First Published Aug 19, 2022, 10:41 AM IST

ಶಿಕ್ಷಣ ಇಲಾಖೆಯ ತಕರಾರನ್ನೂ ಲೆಕ್ಕಿಸದೆ ಬಹುಕೋಟಿ ಮೌಲ್ಯದ ಸರ್ಕಾರಿ ಶಾಲೆಯ ಜಾಗವನ್ನು ಮಾರಾಟ ಅಥವಾ ಹರಾಜು ಹಾಕಲು ಕೋರಿ ಬೆಂಗಳೂರು ನಗರ ಡಿಸಿ ಕಂದಾಯ ಇಲಾಖೆಗೆ ಪತ್ರ ಬರೆದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ 


ಬೆಂಗಳೂರು(ಆ.19):  ನಗರದ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆಯ ಜಾಗ ಶಿಕ್ಷಣ ಇಲಾಖೆಗೆ ಸೇರಿದ್ದಾಗಿದ್ದು, ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಪರಭಾರೆ ಮಾಡಲು ಅವಕಾಶ ನೀಡುವುದಿಲ್ಲ. ಸರ್ಕಾರಿ ಶಾಲೆಗಳು ನಡೆಯುತ್ತಿರುವ ಜಾಗವನ್ನು ಆಯಾ ಶಾಲೆಗಳ ಹೆಸರಿಗೆ ನೋಂದಣಿ ಮಾಡಿಕೊಡಲು ಈಗಾಗಲೇ ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಶಿಕ್ಷಣ ಇಲಾಖೆಯ ತಕರಾರನ್ನೂ ಲೆಕ್ಕಿಸದೆ ಬಹುಕೋಟಿ ಮೌಲ್ಯದ ಸರ್ಕಾರಿ ಶಾಲೆಯ ಜಾಗವನ್ನು ಮಾರಾಟ ಅಥವಾ ಹರಾಜು ಹಾಕಲು ಕೋರಿ ಬೆಂಗಳೂರು ನಗರ ಜಿಲ್ಲಾಧಿಕಾರಿಯು ಕಂದಾಯ ಇಲಾಖೆಗೆ ಪತ್ರ ಬರೆದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ಕೂಡ ಮಧ್ಯ ಪ್ರವೇಶಿಸಿದ್ದು, ಈ ಸಂಬಂಧ ಕಂದಾಯ ಇಲಾಖೆ ಜೊತೆ ಅಧಿಕಾರಿಗಳು ಸಂವಹನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Tap to resize

Latest Videos

ಕನಕಗಿರಿ ಪ್ರೌಢಶಾಲಾ ಶಿಕ್ಷಕರಿಗೆ ಎರಡೂವರೆ ತಿಂಗಳಿಂದ ವೇತನವಿಲ್ಲ!

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಸಚಿವ ನಾಗೇಶ್‌ ಅವರು, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯ ಜಾಗವನ್ನು ಸಾರ್ವಜನಿಕ, ಖಾಸಗಿ ಪಾಲುದಾರಿಕೆ (ಪಿಪಿಪಿ) ಯೋಜನೆಯಡಿ ಯಾವುದೋ ಖಾಸಗಿಯವರಿಗೆ ಲೀಸ್‌ಗೆ ನೀಡಿರುವುದು ಶತ ಮೂರ್ಖತನದ ಕ್ರಮ. ಈ ಬಗ್ಗೆ ನಮ್ಮ ಇಲಾಖೆಯಿಂದ ಈ ಹಿಂದೆಯೇ ಕಂದಾಯ ಇಲಾಖೆಗೆ ಆಕ್ಷೇಪಣೆ ಸಲ್ಲಿಸಿದ್ದು, ಶಿಕ್ಷಣ ಇಲಾಖೆಯ ಜಾಗವನ್ನು ಶಾಲೆಯ ಹೆಸರಿಗೆ ನೋಂದಣಿ ಮಾಡಿಕೊಡಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಈ ಜಾಗ ಶಿಕ್ಷಣ ಇಲಾಖೆಯದ್ದಾಗಿದ್ದು, ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಮಾರಾಟ, ಹರಾಜು ಮಾಡಲು ಅವಕಾಶ ನೀಡುವುದಿಲ್ಲ. ಈ ಜಾಗವನ್ನು ಶಾಲೆಯ ಹೆಸರಿಗೆ ನೋಂದಣಿ ಮಾಡಿಸಲು ಅಗತ್ಯ ಕ್ರಮ ವಹಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ದಾನಿಗಳು ನೀಡಿದ್ದ ಜಾಗ

ಬೆಂಗಳೂರು ಉತ್ತರ ತಾಲೂಕು ಚಿಕ್ಕಪೇಟೆ ಒಟಿಸಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ 77 ವರ್ಷಗಳಷ್ಟುಹಳೆಯದು. ದಾನಿಗಳು ಶಾಲೆಗೆ ನೀಡಿದ 13,735 ಚದರಡಿ ವಿಸ್ತೀರ್ಣದ ಜಾಗದಲ್ಲಿ 1945ರಲ್ಲೇ ಪ್ರಾಥಮಿಕ, ಮಾಧ್ಯಮಿಕ ಶಾಲೆ ಆರಂಭವಾಗಿದ್ದವು. ಸ್ವಾತಂತ್ರ್ಯಾ ನಂತರ ಅದೇ ಜಾಗದಲ್ಲಿ ಪ್ರೌಢಶಾಲೆಯನ್ನೂ ತೆರೆಯಲಾಗಿತ್ತು. ಸದ್ಯ ಇಲ್ಲಿನ ಪ್ರತಿ ಚದರಡಿಗೆ 40 ಸಾವಿರದಷ್ಟುಮಾರುಕಟ್ಟೆಮೌಲ್ಯ ಇದೆ.

ಈ ಕಟ್ಟಡವನ್ನು ಶಾಲೆಯ ಹೆಸರಿಗೆ ಖಾತೆ ಮಾಡಿಕೊಡುವಂತೆ ಶಾಲೆಯ ಮುಖ್ಯ ಶಿಕ್ಷಕರು ಸಲ್ಲಿಸಿದ ಮನವಿಯನ್ನೂ ಕಂದಾಯ ಇಲಾಖೆ ಪುರಸ್ಕರಿಸಿಲ್ಲ. ಶಿಕ್ಷಣ ಇಲಾಖೆಯ ಆಕ್ಷೇಪವನ್ನು ಪರಿಗಣಿಸದೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಈ ಜಾಗವನ್ನು ಮಾರಾಟ ಮಾಡಲು ನಿರ್ದೇಶನ ಕೋರಿ ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ. ಇದು ಭಾರೀ ವಿರೋಧಕ್ಕೆ ಕಾರಣವಾಗಿದೆ.

click me!