BC Nagesh: ನಾಡಗೀತೆ ವಿವಾದ: ಚುಂಚಶ್ರೀಗೆ ನಾಗೇಶ್‌ ವಿವರಣೆ!

By Govindaraj SFirst Published May 31, 2022, 3:00 AM IST
Highlights

ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ ಲೇಖನ ಬರೆದಿರುವ ಹಾಗೂ ನಾಡಗೀತೆಯನ್ನು ತಿರುಚಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು.

ಬೆಂಗಳೂರು (ಮೇ.31): ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ ಲೇಖನ ಬರೆದಿರುವ ಹಾಗೂ ನಾಡಗೀತೆಯನ್ನು ತಿರುಚಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸೋಮವಾರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ವಿವಾದಿತ ವಿಚಾರಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಮಠದ ಶಾಖೆಯಲ್ಲಿ ಸ್ವಾಮೀಜಿಯನ್ನು ಭೇಟಿ ಮಾಡಿದ ಸಚಿವರು ಕುವೆಂಪು ಅವರ ವಿಚಾರದಲ್ಲಿ ತಮ್ಮ ಇಲಾಖೆಯಿಂದಾಗಲಿ, ಸರ್ಕಾರದ ಕಡೆಯಿಂದಾಗಲಿ ಯಾವುದೇ ಲೋಪಗಳು ನಡೆದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಪರಿಷ್ಕೃತ ಪಠ್ಯಪುಸ್ತಕ ಹಾಗೂ ಹಿಂದಿನ ಪಠ್ಯಪುಸ್ತಕ ಎರಡನ್ನೂ ಶ್ರೀಗಳ ಮುಂದಿಟ್ಟಸಚಿವರು, ಕುವೆಂಪು ಅವರ ಯಾವುದೇ ಪಠ್ಯವನ್ನು ಕೈಬಿಟ್ಟಿಲ್ಲ. ಬದಲಾಗಿ ಈ ಹಿಂದೆ ಇದ್ದ 7 ಪಾಠಗಳ ಜೊತೆಗೆ ಇನ್ನೂ ಮೂರು ಸೇರಿಸಿ 10ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ಬೆಂಗಳೂರಿನ ಪರಿಚಯದ ಪಾಠದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪರಿಚಯ ಮತ್ತು ಅವರು ಬೆಂಗಳೂರಿಗೆ ನೀಡಿದ ಕೊಡುಗೆ ಸೇರಿಸಲಾಗಿದೆ ಎಂದು ವಿವರಿಸಿದರು ಎಂದು ಮೂಲಗಳು ತಿಳಿಸಿವೆ.

ಹಿಜಾಬ್‌ ಹಾಕಿಕೊಂಡು ಶಾಲೆಗೆ ಬರುವಂತಿಲ್ಲ: ಸಚಿವ ನಾಗೇಶ

ಇನ್ನು, 4ನೇ ತರಗತಿ ಪಠ್ಯದಲ್ಲಿ ಇರುವ ಕುವೆಂಪು ಅವರ ಪಾಠವು ಪರಿಷ್ಕರಣೆಯಾಗಿಲ್ಲ. ಹಿಂದಿನಿಂದಲೂ ಇರುವ ಪಠ್ಯವನ್ನು ಯಥಾವತ್ತಾಗಿ ಉಳಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಅದೇ ರೀತಿ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಹಿಂದೆ ಹಾಕಿರುವ ತಿರುಚಿರುವ ನಾಡಗೀತೆಯು ಅವರು ಬರೆದಿರುವುದಲ್ಲ. ಬೇರೆ ಯಾರೋ ಬರೆದಿದ್ದನ್ನು ಶೇರ್‌ ಮಾಡಿದ್ದಾರೆ ಅಷ್ಟೆ. ಈ ಸಂಬಂಧ 2017ರಲ್ಲೇ ಎಫ್‌ಐಆರ್‌ ಕೂಡ ಆಗಿತ್ತು. ತನಿಖೆ ನಂತರ ಪೊಲೀಸರು ಬಿ ರಿಪೋರ್ಚ್‌ ಹಾಕಿದ್ದರು ಎಂಬ ವಿಷಯವನ್ನೂ ಸಚಿವರು ಶ್ರೀಗಳ ಗಮನಕ್ಕೆ ತಂದರು ಎಂದು ತಿಳಿದು ಬಂದಿದೆ.

ನಾಡಗೀತೆ ತಿರುಚಿದ ಬಗ್ಗೆ ಪತ್ರ ಗಂಭೀರವಾಗಿ ಪರಿಗಣನೆ: ರಾಷ್ಟ್ರಕವಿ ಕುವೆಂಪು ಅವರನ್ನು ಅಸಂಸದೀಯ ಭಾಷೆಯಲ್ಲಿ ನಿಂದಿಸಿರುವವರ ವಿರುದ್ಧ ಹಾಗೂ ನಾಡಗೀತೆ ತಿರುಚಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆದಿಚುಂಚನಗಿರಿಯ ನಿರ್ಮಿಲಾನಂದ ನಾಥ ಸ್ವಾಮೀಜಿ ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಚುಂಚನಗಿರಿ ಶ್ರೀಗಳು ತಮಗೆ ಬರೆದಿರುವ ಪತ್ರದ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಸಿಹಿ ಸುದ್ದಿ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಡ್ಲೆ ಮಿಠಾಯಿ ವಿತರಣೆಗೆ ಚಿಂತನೆ

ಮುಖ್ಯಮಂತ್ರಿಗಳಿಗೆ ಶನಿವಾರ ಪತ್ರ ಬರೆದಿದ್ದ ಶ್ರೀಗಳು, ‘ಕುವೆಂಪು ಅವರು ನಮ್ಮ ನಾಡು ಕಂಡ ಅಪ್ರತಿಮ ಕವಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಕರ್ನಾಟಕ ಆರ್ಥಿಕ, ಸಾಮಾಜಿಕ, ಧಾರ್ಮಿಕ ಅಸಮಾನತೆ ಮತ್ತು ಲಿಂಗಭೇದ ನಿವಾರಿಸಿಕೊಂಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂಬ ಕನಸು ಕಂಡವರು. ಅದರೆ, ಕುವೆಂಪು ಬರೆದಿರುವ ‘ಜೈ ಭಾರತ ಜನನಿಯ ತನುಜಾತೆ’ ಗೀತೆಯನ್ನು ಕೆಲವರು ತಿರುಚಿ ಬರೆದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕುವೆಂಪು ಬಗ್ಗೆ ಅತ್ಯಂತ ಕೀಳುಭಾಷೆಯಲ್ಲಿ ನಿಂದಿಸಿ ಅವಹೇಳನಕಾರಿ ಲೇಖನ ಬರೆದಿದ್ದು, ಅಂಥಹವರ ವಿರುದ್ಧ ಸೈಬರ್‌ ಕ್ರೈಂ ಅಡಿಯಲ್ಲಿ ಸರ್ಕಾರ ಕ್ರಮ ಜರುಗಿಸಬೇಕು’ ಎಂದು ಕೋರಿದ್ದರು.

click me!