ಪ್ರತಿ ಕ್ಷೇತ್ರದಲ್ಲೂ ಶಿಕ್ಷಣ ಮಹತ್ವದ ಪಡೆದಿದ್ದು, ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ ಎಂದು ತುಮಕೂರು ವಿವಿ ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಹೇಳಿದರು.
ತುಮಕೂರು (ಆ.08): ಪ್ರತಿ ಕ್ಷೇತ್ರದಲ್ಲೂ ಶಿಕ್ಷಣ ಮಹತ್ವದ ಪಡೆದಿದ್ದು, ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ ಎಂದು ತುಮಕೂರು ವಿವಿ ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಹೇಳಿದರು. ತುಮಕೂರು ವಿವಿಯ 17ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ, ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಮಾತನಾಡಿದರು. ಪ್ರತಿಯೊಂದು ಕ್ಷೇತ್ರವೂ ಶಿಕ್ಷಣದಿಂದ ಹೊರತಾಗಿಲ್ಲ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದ ಮಹತ್ವ ಅರಿತು ವ್ಯಾಸಂಗ ಮಾಡಬೇಕು. ಶಿಕ್ಷಣ ಎಂಬುದು ಅಭಿವೃದ್ಧಿಯ ಊರುಗೋಲು ಎಂದರು.
ಶಿಕ್ಷಣ ಸರ್ವ ವ್ಯಾಪಿ, ಸರ್ವ ಸ್ಪರ್ಶಿ. ಶಿಕ್ಷಣ ಪಡೆಯದಿದ್ದರೆ ಜೀವನ ಪರಿಪೂರ್ಣ ಪಕ್ವತೆಯಾಗುವುದಿಲ್ಲ. ಆದ್ದರಿಂದ ಇಂದು ಪದವಿ ಪಡೆದಿರುವ ಎಲ್ಲರೂ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಬೇಕು. ಮೇಕ್ ಇನ್ ಇಂಡಿಯಾ ಪ್ರಧಾನಿ ನರೇಂದ್ರ ಮೋದಿ ಸಂಕಲ್ಪವಾಗಿದ್ದು, ಇದರ ಸಾಕಾರಕ್ಕೆ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ. ಸದ್ಯ ಭಾರತ ಅಭಿವೃದ್ಧಿಯಲ್ಲಿ 5ನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ಶಿಕ್ಷಣವಂತರ ಸಂಖ್ಯೆ ಜಾಸ್ತಿಯಾಗುವ ಮೂಲಕ ಭಾರತ ಅಭಿವೃದ್ಧಿಯಲ್ಲಿ ಪ್ರಪಂಚದಲ್ಲೇ ಮೂರನೇ ಸ್ಥಾನಕ್ಕೇರಲಿದೆ ಎಂದರು.
ಸಿಎಂ ಸಿದ್ದರಾಮಯ್ಯನವರ ಮೇಲೆ ಗೂಬೆ ಕೂರಿಸುವ ವ್ಯವಸ್ಥಿತ ಸಂಚು: ಮಾಜಿ ಸಂಸದ ವಿ.ಎಸ್.ಉಗ್ರಪ್ಪ
ತುಮಕೂರು ವಿವಿ ದೇಶದಲ್ಲಿ ಮತ್ತಷ್ಟು ಪ್ರಗತಿಪರ ವಿಶ್ವವಿದ್ಯಾನಿಲಯವಾಗಿದ್ದು, ವಿವಿ ಅಭಿವೃದ್ಧಿಗೆ ಬೋಧಕರು ಹಾಗೂ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬೋಧಕರು ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಶ್ರಾಂತ ಅಧ್ಯಕ್ಷ ಡಾ. ಎ.ಎಸ್. ಕಿರಣ್‌ಕುಮಾರ್ ಮಾತನಾಡಿ, ಬಾಹ್ಯಾಕಾಶ ಆರ್ಥಿಕತೆಯು ಮುಂಬರುವ ವರ್ಷಗಳಲ್ಲಿ ಒಂದು ಟ್ರಿಲಿಯನ್ ಡಾಲರ್‌ಗೆ ಬೆಳೆಯುವ ನಿರೀಕ್ಷೆಯಿದೆ. ಭಾರತವು ತನ್ನ ಪ್ರಸ್ತುತ ಬಾಹ್ಯಾಕಾಶ ತಂತ್ರಜ್ಞಾನದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಸ್ವತಃ ಬಾಹ್ಯಾಕಾಶ ಸಮರ್ಥ ದೇಶವಾಗಿರುವ ಭಾರತವು ಬೇರೆ ದೇಶಗಳಿಗೂ ಈ ನಿಟ್ಟಿನಲ್ಲಿ ಸೇವೆಗಳನ್ನು ಒದಗಿಸುವ ದೇಶವಾಗಿ ಮಾರ್ಪಾಡಾಗುವ ಹಂತದಲ್ಲಿದೆ.
ಈ ಪ್ರಯತ್ನಗಳು ಅಂತಾರಾಷ್ಟ್ರೀಯ ಗಮನ ಸೆಳೆದು ಮೆಚ್ಚುಗೆ ಪಡೆದಿವೆ. ಮತ್ತಷ್ಟು ಮಾನವ ಬಾಹ್ಯಾಕಾಶ ಹಾರಾಟದ ಚಟುವಟಿಕೆಗಳನ್ನು ಕೈಗೊಳ್ಳಲು, ಬಾಹ್ಯಾಕಾಶ ನಿಲ್ದಾಣಗಳನ್ನು ನಿರ್ಮಿಸಲು ಮತ್ತು ಮಾನವರನ್ನು ಚಂದ್ರನ ಮೇಲೆ ಇಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಕಳೆದ ಆರು ದಶಕಗಳಲ್ಲಿ ಭಾರತವು ತನ್ನದೇ ಆದ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ಮಾತ್ರವಲ್ಲದೆ ಘನ ಮೋಟಾರ್‌ಗಳು ಮತ್ತು ದ್ರವ ಮತ್ತು ಕ್ರಯೋಜೆನಿಕ್ ಎಂಜಿನ್‌ಗಳನ್ನು ಬಳಸಿಕೊಂಡು ರಾಕೆಟ್‌ಗಳ ರೂಪಾಂತರ ನಿರ್ಮಿಸುವ ಮೂಲಕ ೩೪ ದೇಶಗಳ ೪೦೦ ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದೆ.
ಭೂಮಿ, ಸಾಗರ ಮತ್ತು ಗಾಳಿಯ ನಂತರ ಮನುಷ್ಯ ಜಗತ್ತಿನ ನಾಲ್ಕನೇ ಗಡಿ ಎಂದು ಪರಿಗಣಿಸಲ್ಪಟ್ಟಿರುವ ಬಾಹ್ಯಾಕಾಶವು ಅಪಾರ ಪ್ರಾಮುಖ್ಯತೆಯ ಪ್ರದೇಶವಾಗುತ್ತಿದೆ ಎಂದರು. ಬಾಹ್ಯಾಕಾಶ ಪರಿಶೋಧನೆ, ಬಾಹ್ಯಾಕಾಶ ಬಳಕೆ, ಬಾಹ್ಯಾಕಾಶ ಸಾಹಸ, ಬಾಹ್ಯಾಕಾಶ ಪ್ರವಾಸೋದ್ಯಮ, ಬಾಹ್ಯಾಕಾಶ ವಸತಿ, ಭೂಮಿಗಾಗಿ ಬಾಹ್ಯಾಕಾಶ, ಬಾಹ್ಯಾಕಾಶಕ್ಕಾಗಿ ಬಾಹ್ಯಾಕಾಶ, ಇಂಧನಕ್ಕಾಗಿ ಬಾಹ್ಯಾಕಾಶ ಮುಂತಾದ ಪರಿಕಲ್ಪನೆಗಳನ್ನು ಒಳಗೊಂಡು ಬಾಹ್ಯಾಕಾಶ ತಂತ್ರಜ್ಞಾನವು ಈಗ ಪ್ರಗತಿ ಸಾಧಿಸುತ್ತಿದೆ ಎಂದು ವಿವರಿಸಿದರು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, ಬ್ರಿಟಿಷ್ ಕೌನ್ಸಿಲ್ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಯೊಂದಿಗೆ ಚರ್ಚಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ.
ವಿಜಯೇಂದ್ರನ ಸಹವಾಸದಿಂದ ಯಡಿಯೂರಪ್ಪ ಜೈಲಿಗೋದ್ರು: ಸಚಿವ ಮಧು ಬಂಗಾರಪ್ಪ
ಉನ್ನತ ಶಿಕ್ಷಣ ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆ ತಂದು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್‌ಗಳನ್ನು ಜಾರಿಗೆ ತರಲಾಗಿದೆ. ಉದ್ಯೋಗ ಸಂಬಂಧಿತ ಜಾರಿಯಾಗಿರುವ ಹೊಸ ಕೋರ್ಸ್‌ಗೆ ಈಗಾಗಲೇ ಸಾವಿರಾರು ಮಂದಿ ದಾಖಲಾಗಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ವಿಶ್ವವಿದ್ಯಾನಿಲಯ ಬೋಧನೆ ಮತ್ತು ಸಂಶೋಧನೆಯಲ್ಲಿ ಮಾತ್ರವಲ್ಲದೆ ವಿಸ್ತರಣಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿದೆ. ತುಮಕೂರು ತಾಲೂಕಿನ ಬಿದರಕಟ್ಟೆಯಲ್ಲಿ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ಕಾರ್ಯಾರಂಭ ಮಾಡಲು ಸಜ್ಜುಗೊಂಡಿದೆ ಎಂದು ತಿಳಿಸಿದರು. ವಿವಿ ಕುಲಸಚಿವ ನಹೀದಾ ಜಮ್ ಜಮ್, ಪ್ರೊ. ಪ್ರಸನ್ನಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.