ಕೊಡಗು ಭೂಕುಸಿತದಿಂದ ಹಾನಿಗೊಳಗಾದ ಶಾಲೆಯಲ್ಲಿ ಪಾಠ ಪ್ರವಚನ: ಮಕ್ಕಳ ಜೀವಕ್ಕೆ ಆಪತ್ತಿನ ತೂಗುಗತ್ತಿ

By Sathish Kumar KHFirst Published May 29, 2023, 10:21 PM IST
Highlights

ಕೆಲವು ವರ್ಷಗಳ ಹಿಂದೆ ಭೂ ಕುಸಿತ ಸಂಭವಿಸಿ ಹಾನಿಗೊಳಗಾದ ಶಾಲಾ ಕಟ್ಟಡದಲ್ಲಿ ಪಾಠ ಪ್ರವಚನ ಆರಂಭ. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರ ಹಿಂದೇಟು ಹಾಕಿದ್ದಾರೆ.

ಕೊಡಗು (ಮೇ 29):  2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು ಮೇ 31 ರಿಂದ ತರಗತಿ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸುತ್ತಿದೆ. ಶಾಲೆಗಳನ್ನು ಸಿಂಗರಿಸಿ ವಿದ್ಯಾರ್ಥಿಗಳು ಬಂದ ದಿನ ಖುಷಿಯಾಗುವಂತೆ ಮಾಡಿ ಎಂದು ಹೇಳಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಕಳುಹಿಸುವುದಕ್ಕೆ ಪೋಷಕರು ಆತಂಕಪಡುತ್ತಿದ್ದಾರೆ. 

ಇಂತಹ ಆತಂಕಕ್ಕೆ ಕಾರಣವಾಗಿರುವುದು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕೊಯನಾಡಿನಲ್ಲಿ. ಕಳೆದ ವರ್ಷದ ಮಳೆಗಾಲದ ಸಂದರ್ಭ ಇಲ್ಲಿ ಸರ್ಕಾರಿ ಶಾಲಾ ಕಟ್ಟಡದ ಮೇಲೆಯೇ ಭೂಕುಸಿತವಾಗಿತ್ತು. ಪಯಶ್ವಿನಿ ನದಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಸಿದ್ದ ಪರಿಣಾಮ ಶಾಲೆಯಲ್ಲಿ ತೆರೆದಿದ್ದ ಕಾಳಜಿ ಕೇಂದ್ರದಲ್ಲಿ ಗ್ರಾಮದ ಜನರು ಆಶ್ರಯ ಪಡೆದಿದ್ದರು. ಇದೇ ವೇಳೆ ಶಾಲೆಯ ಹಿಂಭಾಗದಲ್ಲಿಯೇ ಭೂಕುಸಿತವಾಗಿತ್ತು. ಇದನ್ನು ಸ್ವತಃ ಕಣ್ಣಾರೆ ಕಂಡಿದ್ದ ಪೋಷಕರು ಇದೀಗ ಆತಂಕಪಡುತ್ತಿದ್ದಾರೆ. ಮೇ 31 ರಿಂದ ಶಾಲೆ ಆರಂಭವಾದರೆ ಜೂನ್ 4 ರಿಂದ ರಾಜ್ಯದಲ್ಲಿ ಮಳೆಗಾಲ ಆರಂಭವಾಗಲಿದೆ. ಮಳೆಗಾಲ ಆರಂಭವಾಯಿತ್ತೆಂದರೆ ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯಲಿದೆ. 

Karnataka Rain: ಹೊಲದಲ್ಲಿ ಉಳುಮೆ ಮಾಡುತ್ತಲೇ ಸಿಡಿಲಿಗೆ ಬಲಿಯಾದ ರೈತರು

ಬಿರುಕು ಬಿಟ್ಟ ಶಾಲೆಗಳಲ್ಲಿ ಶಿಕ್ಷಣ ಪ್ರಸಾರ: ಕಳೆದ ಜುಲೈ ತಿಂಗಳಲ್ಲಿ ಭೂಕುಸಿತವಾದಾಗ ಬೃಹತ್ ಗಾತ್ರದ ಬಂಡೆಗಳು ನೂರಾರು ಲೋಡಿನಷ್ಟು ಮಣ್ಣು ಶಾಲೆಯ ಮೇಲೆ ಉರುಳಿತ್ತು. ಇದರಿಂದ ಕ್ಷಣಾರ್ಧದಲ್ಲಿ ಶಾಲಾ ಕಟ್ಟಡದ ಗೋಡೆಗಳು ಕುಸಿದಿದ್ದವು. ಅದಾದ ಕೆಲವು ತಿಂಗಳ ಬಳಿಕ ಕಟ್ಟಡದ ಗೋಡೆ ಕುಸಿದ ಭಾಗವನ್ನು ತೆರವುಗೊಳಿಸಿ ಮತ್ತೆ ಗೋಡೆ ಕಟ್ಟಿ ಕಟ್ಟಡವನ್ನು ದುರಸ್ಥಿ ಮಾಡಲಾಗಿದೆ. ಆದರೆ ತರಗತಿ ಕಟ್ಟಡದ ಉಳಿದ ಗೋಡೆಗಳು ಈಗಲೂ ಬಿರುಕು ಬಿಟ್ಟಿವೆ. ಇದು ಈ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವ ಪೋಷಕರಿಗೆ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ. ಇದೇ ಬಿರುಕು ಬಿಟ್ಟಿರುವ ಶಾಲಾ ಕೊಠಡಿಗಳಲ್ಲೇ ಸದ್ಯ ಶಿಕ್ಷಕರು ಶಾಲಾ ಆರಂಭಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. 

ಮಕ್ಕಳ ಜೀವಕ್ಕೆ ಅಪಾಯ: ಮೇ 31 ರಂದು ಶಾಲೆಗೆ ಬರುವ 80 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಶಾಲೆಯಲ್ಲಿ ಕಳೆದ ವರ್ಷದಿಂದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ಆರಂಭವಾಗಿದ್ದು ಒಟ್ಟು 20 ಹಾಲುಗೆನ್ನೆಯ ವಿದ್ಯಾರ್ಥಿಗಳಿದ್ದಾರೆ. 1ನೇ ತರಗತಿಯಿಂದ 8 ನೇ ತರಗತಿಯವರೆಗೆ 60 ವಿದ್ಯಾರ್ಥಿಗಳು ಇದ್ದಾರೆ. ಜಿಲ್ಲೆಯಲ್ಲಿ ತೀವ್ರ ಮಳೆ ಸುರಿಯುವುದರಿಂದ  ಕಳೆದ ವರ್ಷದ ಮಳೆಗಾಲದ ಸಂದರ್ಭ ಭೂಕುಸಿತದಿಂದ ಶಿಥಿಲಗೊಂಡಿರುವ ಕಟ್ಟಡ ಈ ಬಾರಿಯ ಮಳೆಗಾಲದಲ್ಲಿ ಏನಾದರೂ ಅಪಾಯ ಎದುರಿಸಿದರೆ ಆಗುವ ಅನಾಹುತವನ್ನು ಊಹಿಸಲು ಸಾಧ್ಯವಿಲ್ಲ ಎಂದು ಪೋಷಕರು ಆತಂಕಗೊಂಡಿದ್ದಾರೆ. 

ಹಾವು ಕಚ್ಚಿದ ಪುತ್ರನಿಗೆ ಕಿಡ್ನಿ ಕೊಟ್ಟು ಮರುಜನ್ಮ ನೀಡುತ್ತಿರುವ ತಾಯಿ: ಆರ್ಥಿಕ ಸಹಾಯಕ್ಕೆ ಮನವಿ

ಭೂಕುಸಿತ ಮತ್ತು ಶಿಥಿಲಗೊಂಡ ಕಟ್ಟಡದಲ್ಲಿ ಪಾಠ: ಈ ಕುರಿತು ಶಿಕ್ಷಕರನ್ನು ಕೇಳಿದರೆ ಸದ್ಯ ಕಟ್ಟಡ ದುರಸ್ಥಿ ಮಾಡಲಾಗಿದ್ದು, ಯಾವುದೇ ಸಮಸ್ಯೆ ಇಲ್ಲ. ಆದರೂ ಭಯವಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಮಳೆ ಆರಂಭವಾಗುವಷ್ಟರಲ್ಲಿ ಎಸ್ಡಿಎಂಸಿ ಸಭೆ ಕರೆಯಲಾಗುವುದು. ಸಭೆಗೆ ಅಧಿಕಾರಿಗಳು ಬರುವುದರಿಂದ ಭೂಕುಸಿತ ಮತ್ತು ಕಟ್ಟಡ ಶಿಥಿಲವಾಗಿರುವ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತೇವೆ. ಬಳಿಕ ಇಲ್ಲಿಯೇ ತರಗತಿ ನಡೆಸಬೇಕೆ ಅಥವಾ ಬೇರೆಡೆ ತರಗತಿ ನಡೆಸಬೇಕೆ ಎಂದು ನಿರ್ಧರಿಸುತ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ ಕಳೆದ ವರ್ಷ ಶಾಲಾ ಕಟ್ಟಡದ ಮೇಲೆ ಭೂಕುಸಿತವಾಗಿದ್ದ ಅವಘಡ ಇಲ್ಲಿನ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದ್ದು ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿರುವುದಂತು ಸತ್ಯ. 

click me!