ಮೇ 31ರ ಶಾಲೆ ಆರಂಭದ ದಿನ ತಳಿರು-ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಮಕ್ಕಳಿಗೆ ಗುಲಾಬಿ ಹೂ, ಚಾಕಲೇಟ್ ಅಥವಾ ಇನ್ಯಾವುದೇ ಸಿಹಿ ನೀಡಿ ಬರಮಾಡಿಕೊಳ್ಳಬೇಕು. ಅಂದು ಬಿಸಿಯೂಟದಲ್ಲಿ ಒಂದು ಸಿಹಿ ತಿನಿಸು ತಯಾರಿಸಿ ಮಕ್ಕಳಿಗೆ ಬಡಿಸಬೇಕು.
ಬೆಂಗಳೂರು(ಮೇ.29): ಸರ್ಕಾರದ 2023-24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಮೇ 31ರಿಂದ ರಾಜ್ಯಾದ್ಯಂತ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪುನಾರಂಭಗೊಳ್ಳಲಿವೆ. ಇದಕ್ಕೆ ಪೂರಕವಾಗಿ ಮೇ 29 ಮತ್ತು 30ರಂದು ಶಾಲೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ, ಸರಿಪಡಿಸಿ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚಿಸಿದೆ.
2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆ, ಪರೀಕ್ಷೆಗಳು ಮುಕ್ತಾಯಗೊಂಡ ಬಳಿಕ ಏ.11ರಿಂದ ಮೇ 28ರವರೆಗೆ ರಾಜ್ಯಾದ್ಯಂತ ಶಾಲೆಗಳಿಗೆ ಸುಮಾರು ಎರಡು ತಿಂಗಳ ಬೇಸಿಗೆ ರಜೆ ನೀಡಲಾಗಿತ್ತು. ಇದೀಗ ರಜೆ ಮುಕ್ತಾಯಗೊಂಡಿದ್ದು ಮಂಗಳವಾರ ಮತ್ತು ಬುಧವಾರ ಪ್ರತಿ ತರಗತಿ ಕೊಠಡಿ, ಆವರಣ, ಆಟದ ಮೈದಾನ, ಲೈಬ್ರರಿ ಸೇರಿದಂತೆ ಇಡೀ ಶಾಲೆಯನ್ನು ಸ್ವಚ್ಛಗೊಳಿಸಬೇಕು. ಮಕ್ಕಳು ತರಗತಿಯಲ್ಲಿ ಕೂತು ಪಾಠ ಕೇಳಲು ಆರೋಗ್ಯಕರ ರೀತಿಯಲ್ಲಿ ಶಾಲೆಯನ್ನು ಸಜ್ಜುಗೊಳಿಸಬೇಕು. ಶಾಲಾ ಕೊಠಡಿ, ಶೌಚಾಲಯ, ಕಾಂಪೌಂಡ್ ಸೇರಿದಂತೆ ಶಾಲೆಯ ಯಾವುದೇ ಭಾಗ ಮಳೆ ಮತ್ತಿತರ ಕಾರಣದಿಂದ ಹಾನಿಯಾಗಿದ್ದರೆ ಅವುಗಳ ದುರಸ್ತಿಗೆ ಕ್ರಮ ವಹಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಇಲಾಖೆ ಎಲ್ಲ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದೆ.
undefined
ರಾಜ್ಯಾದ್ಯಂತ 27 ಸಾವಿರ ಅತಿಥಿ ಶಿಕ್ಷಕರ ನೇಮಕ: ಜಿಲ್ಲಾವಾರು ಹುದ್ದೆಗಳ ವಿವರ ಇಲ್ಲಿದೆ..
ಎಸ್‌ಡಿಎಂಸಿ ಸಭೆ:
ಪ್ರತಿ ಶಾಲೆಯಲ್ಲೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ನಡೆಸಿ ಪ್ರಾರಂಭೋತ್ಸವ ಹೇಗೆ ಮಾಡಬೇಕು ಎಂಬ ಬಗ್ಗೆ ಚರ್ಚಿಸಬೇಕು. ಶಾಲಾ ವೇಳಾಪಟ್ಟಿ, ವಿಷಯವಾರು ಕ್ರಿಯಾ ಯೋಜನೆ, ಶಿಕ್ಷಕರ ವೇಳಾಪಟ್ಟಿ, ಶಾಲಾಭಿವೃದ್ಧಿ ಯೋಜನೆ, ಶಾಲಾ ವಾರ್ಷಿಕ ಕ್ಯಾಲೆಂಡರ್ ಸಿದ್ಧಪಡಿಸಿಕೊಳ್ಳಬೇಕು. ಮುಖ್ಯ ಶಿಕ್ಷಕರು ಶಿಕ್ಷಕರೊಂದಿಗೆ ಸಭೆ ನಡೆಸಿ ವಿವಿಧ ಕಾರ್ಯಭಾರಗಳ ಹಂಚಿಕೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ವಿದ್ಯಾರ್ಥಿಗಳಿಗೆ ಸ್ವಾಗತ:
ಮೇ 31ರ ಶಾಲೆ ಆರಂಭದ ದಿನ ತಳಿರು-ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಮಕ್ಕಳಿಗೆ ಗುಲಾಬಿ ಹೂ, ಚಾಕಲೇಟ್ ಅಥವಾ ಇನ್ಯಾವುದೇ ಸಿಹಿ ನೀಡಿ ಬರಮಾಡಿಕೊಳ್ಳಬೇಕು. ಅಂದು ಬಿಸಿಯೂಟದಲ್ಲಿ ಒಂದು ಸಿಹಿ ತಿನಿಸು ತಯಾರಿಸಿ ಮಕ್ಕಳಿಗೆ ಬಡಿಸಬೇಕು. ಮೊದಲ ದಿನದಿಂದಲೇ ಕಳೆದ ಸಾಲಿನಲ್ಲಿ ಅರ್ಧಕ್ಕೆ ಶಾಲೆಯಿಂದ ದೂರ ಉಳಿದ ಮಕ್ಕಳು, ಶಾಲೆಗೆ ಬಾರದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಶಾಲೆಯ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಬೇಕು ಎಂದು ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿ ಸೂಚಿಸಿದೆ.
ಹಾವೇರಿ: ಶಿಥಿಲಾವಸ್ಥೆಯಲ್ಲಿ 2565 ಶಾಲಾ ಕೊಠಡಿಗಳು; ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ!
ಪಠ್ಯಪುಸ್ತಕ-ಸಮವಸ್ತ್ರ ಶೇ.95ರಷ್ಟು ಪೂರೈಕೆ
ಪ್ರತೀ ವರ್ಷ ಶಾಲೆ ಆರಂಭವಾಗಿ ವಾರ, ತಿಂಗಳುಗಳು ಕಳೆದರೂ ಸಮವಸ್ತ್ರ ಬಂದಿಲ್ಲ, ಪಠ್ಯಪುಸ್ತಕ ಪೂರ್ಣ ಕ್ರಮಾಣದಲ್ಲಿ ಪೂರೈಕೆಯಾಗಿಲ್ಲ ಎಂಬ ದೂರುಗಳು ಸಹಜ. ಆದರೆ, ಈ ಬಾರಿ ಇಲಾಖೆಯು ಹೆಚ್ಚಿನ ಮುತುವರ್ಜಿ ವಹಿಸಿ ಶಾಲೆ ಆರಂಭದ ಮೊದಲ ದಿನವೇ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ನೀಡಲು ಅಗತ್ಯ ಕ್ರಮ ವಹಿಸಿದೆ.
ಈ ವರ್ಷ ಸಮವಸ್ತ್ರ ಮತ್ತು ಪಠ್ಯಪುಸ್ತಕದ ಟೆಂಡರ್ ಅನ್ನು ಮೊದಲೇ ಕರೆದ ಕಾರಣ ಬಹುತೇಕ ಕಡೆ ಶೇ.95 ಪೂರೈಕೆಯಾಗಿದ್ದು, ಈ ಎರಡು ಕೂಡ ಶಾಲಾ ಆರಂಭದ ದಿನವೇ ವಿದ್ಯಾರ್ಥಿಗಳ ಕೈ ಸೇರುವುದು ಖಚಿತವಾಗಿದೆ. ಕೆಲವು ಕಡೆ ಮೊದಲ ದಿನ ಸಾಂಕೇತಿಕವಾಗಿ ನೀಡಲಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ವಿತರಣೆ ಮಾಡಲು ಶಾಲಾ ಮುಖ್ಯಸ್ಥರು ನಿರ್ಧರಿಸಿದ್ದಾರೆ.