ಕಾಲಲ್ಲೇ ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿಗೆ ಡಿಸ್ಟಿಂಕ್ಷನ್‌: ಸಾಧನೆ ಮಾಡಲು ಛಲವೊಂದಿದ್ದರೆ ಸಾಕು..!

By Kannadaprabha NewsFirst Published Jun 22, 2022, 12:19 PM IST
Highlights

*  ಆಳ್ವಾಸ್‌ ವಿದ್ಯಾರ್ಥಿಯ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ
*  ಕಾಲಲ್ಲೇ ಪರೀಕ್ಷೆ ಬರೆದು ಡಿಸ್ಟಿಂಕ್ಷನ್‌ ಸಾಧನೆಯೊಂದಿಗೆ ಉತೀರ್ಣರಾಗಿ ಗಮನ ಸೆಳೆದ ಕೌಶಿಕ್‌ 
*  ಕೌಶಿಕ್‌ ಆಸೆಗೆ ಆಳ್ವಾಸ್‌ ಮತ್ತೆ ಆಸರೆ 
 

ಮೂಡುಬಿದಿರೆ(ಜೂ.22): ಭುಜದಿಂದಲೇ ಬಲಗೈಯಿಲ್ಲ, ಅಪೂರ್ಣ ಬೆಳವಣಿಗೆಯ ಎಡಕೈ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬ ಪರಿಸ್ಥಿತಿ. ಹೀಗೆ ಹುಟ್ಟುತ್ತಲೇ ಎರಡೂ ಕೈಗಳ ಆಧಾರವಿಲ್ಲದೇ ಬೆಳೆದ ಬಂಟ್ವಾಳ ಮೂಲದ ಮೂಡುಬಿದಿರೆಯ ಆಳ್ವಾಸ್‌ ಪಿಯುಸಿ ವಿದ್ಯಾರ್ಥಿ ಕೌಶಿಕ್‌ ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಕಾಲಲ್ಲೇ ಬರೆದು ಡಿಸ್ಟಿಂಕ್ಷನ್‌ ಸಾಧನೆಯೊಂದಿಗೆ ಉತೀರ್ಣರಾಗಿ ಗಮನ ಸೆಳೆದಿದ್ದಾರೆ. ತನ್ನ ಅದಮ್ಯ ಆತ್ಮವಿಶ್ವಾಸದ ಜತೆಗೆ ಪರಿಶ್ರಮದಿಂದ 600ರಲ್ಲಿ 524 ಅಂಕಗಳನ್ನು ಪಡೆದ ಕೌಶಿಕ್‌ ಅಂಗವೈಕಲ್ಯವನ್ನೇ ಮೆಟ್ಟಿನಿಲ್ಲುವಲ್ಲೂ ಗೆದ್ದಿದ್ದಾರೆ.

ಬಂಟ್ವಾಳ ಕಂಚಿಗಾರ ಪೇಟೆ ಮನೆ ನಿವಾಸಿ ರಾಜೇಶ್‌ ಆಚಾರ್ಯ ಜಲಜಾಕ್ಷಿ ದಂಪತಿಯ ಮೂವರು ಮಕ್ಕಳ ಪೈಕಿ ಎರಡನೆಯವರಾದ ಕೌಶಿಕ್‌ ಹುಟ್ಟಿನಲ್ಲೇ ಅಂಗವೈಕಲ್ಯದಿಂದ ಬಳಲಿದವರು. ಈ ಹಂತದಲ್ಲಿ ಮಗನಿಗೆ ಅಮ್ಮನೇ ಮೊದಲ ಗುರುವಾಗಿ ಅಕ್ಷರ ಕಲಿಸಿದ್ದರು. ಬಂಟ್ವಾಳ ದೇಳವದ ಎಸ್‌.ವಿ.ಎಸ್‌. ಶಾಲೆಯಲ್ಲಿ ಕೊನೆಗೂ ಕಲಿಕೆಗೆ ಅವಕಾಶ ದೊರೆತು ಎಸ್ಸೆಸ್ಸೆಲ್ಸಿ ಕಾಲಲ್ಲೇ ಬರೆದ ಕೌಶಿಕ್‌ ಪ್ರಥಮ ದರ್ಜೆಯಲ್ಲಿ ಉತೀರ್ಣರಾದದ್ದು, ಆಗ ಪೊಳಲಿಗೆ ಭೇಟಿ ನೀಡಿದ್ದ ಅಂದಿನ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಈ ಪ್ರತಿಭೆಯನ್ನು ಶ್ಲಾಘಿಸಿದ್ದು ಸ್ಥಳದಲ್ಲಿದ್ದ ಶಾಸಕ ರಾಜೇಶ್‌ ನಾಯ್‌್ಕ ಜತೆಗಿದ್ದ ಡಾ. ಎಂ. ಮೋಹನ ಆಳ್ವರಲ್ಲಿ ಹುಡುಗನ ಬಗ್ಗೆ ಪ್ರಸ್ತಾಪಿಸಿದಾಗ ಈ ಪ್ರತಿಭೆಯನ್ನು ಅಂದೇ ಆಳ್ವರು ದತ್ತು ಸ್ವೀಕರಿಸಿದ್ದರು.

ಪಿಯುಸಿ ರಿಸಲ್ಟ್‌: ಜೇವರ್ಗಿ ಕೂಲಿ ಕಾರ್ಮಿಕನ ಮಗ ನಿಂಗಣ್ಣ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2 ನೇ ರ್‍ಯಾಂಕ್..!

ಉನ್ನತ ಕಲಿಕೆಯ ಕನಸೊಂದು ನನಸಾದ ಖುಷಿಯಲ್ಲಿ ಆಳ್ವಾಸ್‌ ಪ್ರವೇಶಿಸಿದ ಕೌಶಿಕ್‌ ಪಟ್ಟ ಪರಿಶ್ರಮಕ್ಕೆ ಫಲ ಎಂಬಂತೆ ಪಿಯುಸಿಯಲ್ಲಿ ಡಿಸ್ಟಿಂಕ್ಷನ್‌ ಒಲಿದಿದೆ. ಮುಂದೆ ಬಿ.ಕಾಂ ಓದಿ ಬ್ಯಾಂಕಿಂಗ್‌ ಉದ್ಯೋಗಿಯಾಗಬೇಕು ಎನ್ನುವ ಕೌಶಿಕ್‌ ಆಸೆಗೆ ಆಳ್ವಾಸ್‌ ಮತ್ತೆ ಆಸರೆಯಾಗುತ್ತಿದೆ.

ಡಾ. ಎಂ. ಮೋಹನ ಆಳ್ವ ಮತ್ತು ಸಂಸ್ಥೆಯ ಉಪನ್ಯಾಸಕರು ಮತ್ತಿತರ ಎಲ್ಲ ಮಂದಿಯ ಸಹಕಾರ, ಸಹೋದರರ ಪೋ›ತ್ಸಾಹ ವಿಶೇಷವಾಗಿ ತಾಯಿಯ ಮಮತೆ ಈ ಮಟ್ಟಕ್ಕೆ ನನ್ನನ್ನು ಬೆಳೆಸಿದೆ ಎನ್ನುವ ಕೌಶಿಕ್‌ ಈಜು,ಡ್ಯಾನ್ಸ್‌, ಕಲೆ, ಕ್ರಾಫ್ಟ್‌, ಕ್ರಿಕೆಟ್‌ ಶಟ್ಲ್‌ ಹೀಗೆ ಕ್ರೀಡೆಯಲ್ಲೂ ಮುಂದಿದ್ದಾರೆ. ಕಾಲನ್ನೇ ಬಳಸಿಕೊಂಡರೂ ಎಲ್ಲರಂತೆ ಸಹಜ ವೇಗದಿಂದ ಬರೆಯಬಲ್ಲ ಸಾಮರ್ಥ್ಯ ಕೌಶಿಕ್‌ನ ವಿಶೇಷತೆ. ಕಲಿಕೆಗೆ ಸ್ಫೂರ್ತಿ ತುಂಬಿದ ತಂದೆ ರಾಜೇಶ್‌ ಪಿಯುಸಿ ಪರೀಕ್ಷೆಯ ಸಂದರ್ಭದಲ್ಲೇ ಅಗಲಿದ ನೋವು ಸಹಿಸಲಾಗುತ್ತಿಲ್ಲ. ಈ ಸಾಧನೆ ನೋಡಲು ಅವರಿರಬೇಕಿತ್ತು ಎನ್ನುವ ಕೌಶಿಕ್‌ ಆತ್ಮವಿಶ್ವಾಸ, ಪರಿಶ್ರಮವಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಸಾಧಿಸಿ ಸಾಬೀತುಪಡಿಸಿದ್ದಾರೆ.
 

click me!