* ಆನ್‌ಲೈನ್ ಪ್ರವೇಶ ಕಡ್ಡಾಯ
* ವೆಬ್‌ಸೈಟ್‌ನಲ್ಲಿ ಪರಿಪೂರ್ಣ ಮಾಹಿತಿಯೇ ಇಲ್ಲ
* ದಾಖಲಾತಿ ಪ್ರಕ್ರಿಯೆ, ತರಗತಿ ಚಟುವಟಿಕೆ ಆರಂಭದ ಮೇಲೆ ಪರಿಣಾಮವಾಗುವ ಆತಂಕ
ಬೆಂಗಳೂರು(ಜೂ.21): ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳು ವಿವಿಧ ಪದವಿ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಆರಂಭಿಸಿವೆ. ವಿದ್ಯಾರ್ಥಿಗಳು ಕಾಲೇಜುಗಳು, ವಿವಿಗಳಿಗೆ ಭೇಟಿ ನೀಡಿ ತಮ್ಮಿಷ್ಟದ ಕೋರ್ಸು, ಕಾಂಬಿನೇಷನ್‌ಗಳ ಮಾಹಿತಿ ಪಡೆಯಲಾರಂಭಿಸಿದ್ದಾರೆ.
ಆದರೆ, ರಾಜ್ಯದ ಎಲ್ಲ ಮಾದರಿಯ ಕಾಲೇಜು, ವಿವಿಗಳು ಪದವಿ ಕೋರ್ಸುಗಳಿಗೆ ಇಲಾಖೆ ಸಿದ್ಧಪಡಿಸಿರುವ ವೆಬ್‌ಸೈಟ್‌ನಲ್ಲಿ http://uucms.karnataka.gov.in ಮೂಲಕ ಆನ್‌ಲೈನ್‌ನಲ್ಲೇ ಪ್ರವೇಶ ನೀಡಬೇಕೆಂಬುದು ಸಮಸ್ಯೆಯಾಗಿ ಪರಿಣಮಿಸಿದೆ. ಏಕೆಂದರೆ ಇಲಾಖೆಯ ಆನ್‌ಲೈನ್ ವೇದಿಕೆ ಸಮರ್ಪಕವಾಗಿ ಸಿದ್ಧವಾಗಿಲ್ಲ. ಇದುವರೆಗೂ ವೆಬ್‌ಸೈಟ್‌ನಲ್ಲಿ ಸಾಕಷ್ಟುಕಾಲೇಜುಗಳ ಮ್ಯಾಪಿಂಗ್ ಮಾಡದಿರುವುದು ಮತ್ತು ಅವುಗಳಲ್ಲಿ ಲಭ್ಯವಿರುವ ಕೋರ್ಸುಗಳ ಮಾಹಿತಿ ನೀಡದೆ ಇರುವುದು ಪ್ರವೇಶ ಪ್ರಕ್ರಿಯೆಗೆ ಮುಂದಾಗಿರುವ ಕಾಲೇಜು ಆಡಳಿತ ಮಂಡಳಿಗಳಿಗೆ ಮತ್ತು ಅರ್ಜಿ ಸಲ್ಲಿಸಲು ಮುಂದಾಗುತ್ತಿರುವ ವಿದ್ಯಾರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
SSLC Supplementary Exam: ಜೂ.27ರಿಂದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ
ಪಿಯು ಫಲಿತಾಂಶ ಪ್ರಕಟವಾದ ಮರುದಿನದಿಂದಲೇ ಬೆಂಗಳೂರು ನಗರ ವಿವಿ, ಬೆಂಗಳೂರು ವಿವಿ, ಬೆಂಗಳೂರು ಉತ್ತರ ವಿವಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ವಿವಿಗಳು ಹಾಗೂ ಅವುಗಳ ಸಂಯೋಜಿತ ಸರ್ಕಾರಿ, ಖಾಸಗಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಅದರಂತೆ ಕಾಲೇಜು ಆಡಳಿತ ಮಂಡಳಿಗಳು ಕಾಲೇಜು, ಕೋರ್ಸ್, ಬ್ಯಾಂಕ್ ಮಾಹಿತಿ ಎಲ್ಲವನ್ನೂ ಕಾಲೇಜು ಶಿಕ್ಷಣ ಇಲಾಖೆಗೆ ನೀಡಿವೆ. ಆದರೂ ತಂತ್ರಾಂಶ ಸಂಪೂರ್ಣವಾಗಿ ಈ ಮಾಹಿತಿ ನೀಡದಿರುವುದರಿಂದ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ.
ಕಳೆದ ವರ್ಷವೇ ಯುಯುಸಿಎಂಎಸ್ ಜಾರಿಗೆ ತಂದು, ಆನ್‌ಲೈನ್ ಮೂಲಕ ಪ್ರವೇಶಕ್ಕೆ ಸೂಚಿಸಲಾಗಿತ್ತು. ಆದರೆ ಸಂಪೂರ್ಣ ಕಾರ್ಯಸಾಧುವಾಗಿರಲಿಲ್ಲ. ಈ ವರ್ಷವೂ ಆರಂಭದಲ್ಲೇ ಸಮಸ್ಯೆಯಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿ ಕಾಲೇಜು, ಕೋರ್ಸುಗಳ ಹುಡುಕಾಟ ನಡೆಸಿದರೆ ಮಾಹಿತಿ ಸರಿಯಾಗಿ ಲಭ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ. ಕಾಲೇಜು ಆಡಳಿತ ಮಂಡಳಿಗಳು ಕೂಡ ವೆಬ್‌ಸೈಟ್ ಪರಿಶೀಲಿಸಿದ್ದು ತಮ್ಮ ಕಾಲೇಜು ಮತ್ತು ಕೋರ್ಸುಗಳ ಮಾಹಿತಿ ಲಭ್ಯವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿವೆ. ವೆಬ್‌ಸೈಟ್ ಪೂರ್ಣ ಸಿದ್ಧವಾಗದ ಹೊರತು ಸರ್ಕಾರ ಯಾವ ಪುರುಷಾರ್ಥಕ್ಕೆ ಆನ್‌ಲೈನ್ ಪ್ರಕ್ರಿಯೆ ಕಡ್ಡಾಯಗೊಳಿಸಬೇಕು. ಇದರಿಂದ ದಾಖಲಾತಿ ಪ್ರಕ್ರಿಯೆ ತಡವಾಗುವ ಸಾಧ್ಯತೆ ಇದೆ, ನಂತರ ಇದು ತರಗತಿ ಚಟುವಟಿಕೆಗಳ ವಿಳಂಬಕ್ಕೂ ಕಾರಣವಾಗಿ ಪರೀಕ್ಷೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ 430 ಸರ್ಕಾರಿ ಮತ್ತು 375 ಖಾಸಗಿ ಅನುದಾನಿತ ಪದವಿ ಕಾಲೇಜುಗಳಿವೆ. ಪ್ರತಿ ವರ್ಷ 2.5 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ.