ಬೆಂಗಳೂರು (ಜು.27): ಪದವಿ, ಡಿಪ್ಲೊಮೊ, ಇಂಜನಿಯರಿಂಗ್ ಕಾಲೇಜುಗಳು ಸೋಮವಾರ ಆರಂಭವಾದ ಬೆನ್ನಲ್ಲೇ ಶಾಲಾ-ಕಾಲೇಜುಗಳನ್ನು ಆಗಸ್ಟ್ ಮೊದಲ ವಾರದಿಂದ ಪ್ರಾರಂಭಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯಪಡೆ ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಮುಖ್ಯಮಂತ್ರಿಗಳ ರಾಜೀನಾಮೆಯಿಂದಾಗಿ ವರದಿ ಜಾರಿ ಸ್ವಲ್ಪ ವಿಳಂಬವಾಗಬಹುದು ಎನ್ನಲಾಗುತ್ತಿದೆ.
ಕೋವಿಡ್ 2ನೇ ಅಲೆಯ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳನ್ನೂ ಬಂದ್ ಮಾಡಲಾಗಿತ್ತು. ಇದೀಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ 8ರಿಂದ 12 ನೇ ತರಗತಿಯನ್ನು ಆಗಸ್ಟ್ ಮೊದಲ ವಾರ ಆರಂಭಿಸಬೇಕು. ನಂತರ ಪರಿಸ್ಥಿತಿ ನೋಡಿಕೊಂಡು 1ರಿಂದ 6ನೇ ತರಗತಿ ಆರಂಭಿಸಬೇಕು ಎಂದು ಕಾರ್ಯಪಡೆ ಶಿಫಾರಸು ಮಾಡಿದೆ.
ಇಂದಿನಿಂದ ರಾಜ್ಯಾದ್ಯಂತ ಕಾಲೇಜು ಶುರು: ಯಾವೆಲ್ಲ ನಿಯಮ ಪಾಲಿಸಬೇಕು..?
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸೋಮವಾರ ಬೆಳಿಗ್ಗೆ ಭೇಟಿ ಮಾಡಿದ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್ ನೇತೃತ್ವದ ಕಾರ್ಯಪಡೆ, ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ವರದಿ ನೀಡಿದೆ. ಆದರೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿರುವುದರಿಂದ ಶಾಲೆ-ಕಾಲೇಜುಗಳ ಆರಂಭ ಒಂದಷ್ಟು ತಡವಾಗಬಹುದು ಎಂದು ಮೂಲಗಳು ತಿಳಿಸಿವೆ.
ಕೊರೋನಾ 3ನೇ ಅಲೆ ಸಿದ್ಧತೆ ಕುರಿತು ರಚಿಸಲಾಗಿದ್ದ ಉನ್ನತ ಮಟ್ಟದ ತಜ್ಞರ ಸಮಿತಿ ಮುಖ್ಯಸ್ಥರಾಗಿದ್ದ ಡಾ.ದೇವಿಶೆಟ್ಟಿಅವರೂ ಸಹ ಶಾಲೆಗಳ ಆರಂಭದ ಬಗ್ಗೆ ಪೂರಕವಾಗಿ ವರದಿ ಸಲ್ಲಿಸಿದ್ದರು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹ ಶಾಲೆಗಳ ಆರಂಭಕ್ಕೆ ಒಲವು ವ್ಯಕ್ತಪಡಿಸಿತ್ತು. ಇದನ್ನೆಲ್ಲಾ ಪರಿಗಣಿಸಿ ಕಾರ್ಯಪಡೆ ಸೋಮವಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.