ಬಿಡದ ಛಲ, MBBS ಸೀಟು ಪಡೆಯಲು ಯಶಸ್ವಿಯಾದ ದನ ಕಾಯೋ ಹುಡುಗಿ!

By Suvarna News  |  First Published Nov 23, 2020, 2:27 PM IST

ವೈದ್ಯಳಾಗುವ ಭಗವತಿ ಕನಸಿಗೆ ಬಡತನ ಅಡ್ಡಿಯಾಗಲಿಲ್ಲ. ಕಷ್ಟಪಟ್ಟು ಓದಿ ಇದೀಗ ನೀಟ್‌ನಲ್ಲಿ ಹೆಚ್ಚಿನ ಅಂಕಗಳಿಸಿ ತಿರುನ್ವೇಲಿ ಮೆಡಿಕಲ್ ಕಾಲೇಜ್‌ನಲ್ಲಿ ಸೀಟು ಪಡೆಯಲು ಯಶಸ್ವಿಯಾಗಿದ್ದಾಳೆ. ತಮಿಳುನಾಡಿನ ಸರಕಾರ ಒದಗಿಸಿದ ಶೇ.7.5ರಷ್ಟು ಮೀಸಲು ಭಗವತಿ ಕನಸಿಗೆ ಕಸುವು ತುಂಬಿತು.
 


ಸಾಮಾಜಿಕವಾಗಿ ಸ್ಥಿತಿಗತಿ ಆಧರಿಸಿ ಮೀಸಲು ಕಲ್ಪಿಸಿದ್ದು ಒಳ್ಳೆಯದೇ? ಆರ್ಥಿಕ ಪರಿಸ್ಥಿತಿ ಆಧರಿಸಿ ಮೀಸಲು ಕಲ್ಪಿಸಬೇಕೇ ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಅದೆಷ್ಟೋ ದಮನಿತರ ಬಾಳಿನ ಏಳಿಗೆಗೆ ಮೀಸಲು ಬೆಳಕಾಗಿದೆ ಎನ್ನುವುದಕ್ಕೆ ತಮಿಳುನಾಡಿನ ಈ ದಲಿತ ವಿದ್ಯಾರ್ಥಿಯೇ ಸಾಕ್ಷಿ. ವೈದ್ಯಕೀಯ ಕಾಲೇಜು ಪ್ರವೇಶಾತಿಗೆ ಸರ್ಕಾರಿ ಮಕ್ಕಳಿಗೆ ಶೇ.7.5ರಷ್ಟು ಮೀಸಲು ಕಲ್ಪಿಸಿರುವ ತಮಿಳುನಾಡು ಸರ್ಕಾರದ ಕ್ರಮಕ್ಕೆ ಫಲ ಸಿಗಲಾರಂಭಿಸಿದೆ. ಇದೇ ಮೀಸಲು  ಬಳಸಿಕೊಂಡು ಪರಿಶಿಷ್ಟ ಜಾತಿಯ, ಕಡು ಬಡತನ ಮತ್ತು ದನ ಮೇಯಿಸುತ್ತಲೇ ನೀಟ್(NEET)ಗೆ ತಯಾರಿ ಮಾಡುತ್ತಿದ್ದ ಹುಡುಗಿ ಬಾಳಿನಲ್ಲಿ ಬೆಳಕು ಮೂಡಿದೆ.

ಅಂದ ಹಾಗೆ, ಈ ವಿದ್ಯಾರ್ಥಿನಿಯ ಹೆಸರು ಭಗವತಿ. ತಮಿಳುನಾಡಿನ ತಿರುನ್ವೇಲಿಯ ತೆಂಕಲಂಪುದೂರು ನಿವಾಸಿ. ಎಲ್ಲ ತೊಂದರೆಗಳನ್ನು ಮೆಟ್ಟಿ ನಿಂತ ಈ ವಿದ್ಯಾರ್ಥಿನಿ ಇದೀಗ ಎಂಬಿಬಿಎಸ್ ಸೀಟು ಪ್ರವೇಶ ಪಡೆಯಲು ಯಶಸ್ವಿಯಾಗಿದ್ದಾಳೆಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ. 

Tap to resize

Latest Videos

undefined

ಮಕ್ಕಳು ಒಡಾಡ್ಕೊಂಡು ಓದಲು ಟಾಮ್ ಲೈಬ್ರರಿ

ಭಗವತಿಯ ತಂದೆ ಮರಿಯಪ್ಪನ್, ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಭಗವತಿ ಆರು ವರ್ಷ ಇದ್ದಾಗಲೇ ಅವರು ಕ್ಯಾನ್ಸರ್‌ನಿಂದಾಗಿ ನಿಧನರಾದರು. ಆ ಬಳಿಕ ಭಗವತಿಯ ತಾಯಿ ಸಮುದಿರಕನ್ನಿ ಕಷ್ಟಪಟ್ಟು ತನ್ನ ನಾಲ್ಕು ಮಕ್ಕಳನ್ನು ಬೆಳೆಸಿದ್ದಾರೆ. ದೃತಿಗೆಡದೇ ಸಮುದಿರಕನ್ನಿ ತನ್ನ ಮೂರು ಹಸುಗಳಿಂದ ಬರುತ್ತಿದ್ದ ಅಲ್ಪ ಆದಾಯ ಹಾಗೂ ಕೃಷಿ ಕೂಲಿಯಾಗಿ ದುಡಿದು ತನ್ನೆಲ್ಲ ಮಕ್ಕಳಿಗೆ ಅತ್ಯುತ್ತಮ ಅಭ್ಯಾಸ ನೀಡುವ ದೃಢ ನಿಶ್ಚಯ ಮಾಡಿದರು ಮತ್ತು ಅದರಲ್ಲಿ ಯಶಸ್ವಿಯಾದರು ಎಂದು ಹೇಳಬಹುದು. 

ಕುಟುಂಬಕ್ಕೆ ಬಂದಿದ್ದ ಕೃಷಿ ಭೂಮಿಯನ್ನು ಮಾರಿದ ಬಳಿಕ ಸಮುದಿರಕನ್ನಿ ಅದೇ ದುಡ್ಡಿನಿಂದ ಸಮುದಿರಕನ್ನಿ ತನ್ನ ಮೊದಲನೇ ಮಗಳನ್ನು ನರ್ಸಿಂಗ್‌ಗೆ ಸೇರಿಸಿದರು. ಕೊಯಮತ್ತೂರಿನಲ್ಲಿ ಅವರು ಈಗ ನರ್ಸಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. ತಾಯಿ ಸಮುದಿರಕನ್ನಿ ಪ್ರಯತ್ನ ಇಷ್ಟಕ್ಕೆ ನಿಲ್ಲುವುದಿಲ್ಲ. ಸಮುದಿರಕನ್ನಿಯ ಪುತ್ರ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಗ್ರಿ ಪಡೆದ ಬಳಿಕ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಲುವಾಗಿ ಕೋಚಿಂಗ್ ಪಡೆಯುತ್ತಿದ್ದಾರೆ. ಈ ಮಹಾತಾಯಿಯ ನಿರಂತರ ದುಡಿಮೆ ಹಾಗೂ ಪ್ರಯತ್ನದ ಫಲವಾಗಿ ಮತ್ತೊಬ್ಬ ಮಗಳು ಬ್ಯಾಚುಲರ್ ಡಿಗ್ರಿ ಪಡೆಯುತ್ತಿದ್ದಾಳೆ.

ಜೆಡಿಎಸ್ ನಾಯಕರೊಬ್ಬರ ಅಪರೂಪದ ಸೇವೆ

ಎಂಬಿಬಿಎಸ್ ಸೇರಿದ ಭಗವತಿ
ತನ್ನ ಪುತ್ರಿ ಭಗವತಿ ಡಾಕ್ಟರ್ ಆಗಬೇಕೆಂದು ಸಮುದಿರಕನ್ನಿ ಆಸೆಪಟ್ಟರು. ಭಗವತಿ ಕೂಡ ವೈದ್ಯಳಾಗುವ ಕನಸು ಕಂಡರು. ಆದರೆ, ಅವರ ಕನಸಿನ ಮಧ್ಯೆ ನೀಟ್ ಅಡ್ಡಲಾಗಿತ್ತು. ಭಗವತಿ ಹತ್ತಿರದ ನಲ್ಲಮ್ಮಲ್ಪುರಂನ ಆದಿ ದ್ರಾವಿಡ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದು, 2019ರಲ್ಲಿ ನಡೆದ ಪ್ಲಸ್ ಟು ಪಬ್ಲಿಕ್ ಎಕ್ಸಾಮ್‌ನಲ್ಲಿ 600ರ ಪೈಕಿ 516 ಅಂಕಗಳನ್ನು ಗಳಿಸಿ ಮೆಚ್ಚುಗೆ ಪಡೆದಿದ್ದಳು. ಹೀಗಿದ್ದೂ ಭಗವತಿ 2019ರ ನೀಟ್‌ನಲ್ಲಿ ಗಳಿಸಲು ಸಾಧ್ಯವಾಗಿದ್ದು ಕೇವಲ 111 ಅಂಕ ಮಾತ್ರ.

ಆದರೆ, ವೈದ್ಯಳಾಗಳೇಬೇಕೆಂಬ ಛಲವನ್ನು ಭಗವತಿ ಬಿಡಲಿಲ್ಲ. ಅವರ ತಾಯಿ ತಮ್ಮ ಬಳಿ ಇದ್ದ ಮೂರು ಹಸುಗಳ ಪೈಕಿ ಒಂದು ಹಸುವನ್ನು ಮಾರಿ, ಅದರಿಂದ ಬಂದ ಹಣ ಮತ್ತು ಸ್ಥಳೀಯ ಸಾಲಗಾರರಿಂದ 74,000 ಹಣವನ್ನು ಪಡೆದು, ಪಾಲಾಯಂಕೋಟೈನ್‌ನಲ್ಲಿರುವ ಖಾಸಗಿ ಕೋಚಿಂಗ್‌ ಹಾಗೂ ಹಾಸ್ಟೇಲ್‌ಗೆ ಸೇರಿಸಿದರು. ಬಡತನ ಎಂಬುದು ಭಗವತಿಯ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಲಿಲ್ಲ. ಅದು ಅವಳನ್ನು ಮತ್ತಷ್ಟು ಗಟ್ಟಿಗೊಳಿಸಿತು. ಹಾಸ್ಟೆಲ್‌ಗೆ 7,500 ರೂಪಾಯಿ ಪಾವತಿಸಬೇಕಿತ್ತು. ಹಾಗಾಗಿ, ಮೊದಲ ಐದು ತಿಂಗಳ ಮಾತ್ರ ಹಾಸ್ಟೆಲ್‌ನಲ್ಲಿದ್ದರು. ನಂತರ ಅವರು ನೀಟ್ ಎಕ್ಸಾಮ್ ಎದುರಿಸುವ ಸಲುವಾಗಿ ನಿತ್ಯ ನಿಯಮಿತವಾಗಿ ಪರೀಕ್ಷೆಗಳನ್ನು ತೆಗೆದುಕೊಳ್ಳಲಾರಂಭಿಸಿದರು. 

ಬೆಸ್ಟ್ ಬಿ ಸ್ಕೂಲ್ ಪಟ್ಟ ಉಳಿಸಿಕೊಂಡು ಐಐಎಂ-ಬಿ

ಹಸು ಮೇಯಿಸುತ್ತಲೇ ಅಧ್ಯಯನ
ನೀಟ್‌ ಪರೀಕ್ಷೆ ತಯಾರಿ ಮಾಡುತ್ತಿರುವಾಗ ಭಗವತಿ ನಿತ್ಯ ಹಸು ಮೇಯಿಸುತ್ತಲೇ ಅಧ್ಯಯನ ಮಾಡುತ್ತಿದ್ದರು. ತಾಯಿ ಕೃಷಿ ಕೂಲಿಗೆ ಹೋದಾಗ ಹಸುಗಳನ್ನು ಹಾಲು ಕರೆಯುವ ಕೆಲಸವನ್ನು ಮಾಡುತ್ತಿದ್ದಳು ಭಗವತಿ. ಜೊತೆಗೆ ಓದು ನಿರಂತರವಾಗಿತ್ತು. ಭಗವತಿಯ ಈ ಕಠಿಣ ಪರಿಶ್ರಮಕ್ಕೆ ಪ್ರತಿಫಲವೂ ಸಿಕ್ಕಿತು. ಭಗವತಿ ಇದೀಗ ನೀಟ್‌ ಎಕ್ಸಾಮ್‌ನಲ್ಲಿ 364 ಅಂಕ ಗಳಿಸಿ, ತಿರುನ್ವೇಲಿ ಮೆಡಿಕಲ್ ಕಾಲೇಜ್‌ನಲ್ಲಿ ಪ್ರವೇಶ ಪಡೆಯಲು ಯಶಸ್ವಿಯಾಗಿದ್ದಾಳೆ. ಈ ಪ್ರವೇಶಕ್ಕೆ ಹಣ ಹೊಂದಿಸಲು ತಾಯಿ ಸಮುದಿರಕನ್ನಿ ತನ್ನ ಕಿವಿಯೊಲೆ ಮತ್ತು ರಿಂಗ್‌ಗಳನ್ನು ಮಾರಬೇಕಾಯಿತು. ನ್ಯೂರಾಲಾಜಿ ಅಥವಾ ಪೆಡಿಯಾಟ್ರಿಕ್‌ ಮೆಡಿಸಿನ್‌ನಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಮಾಡುವ ಗುರಿಯನ್ನು ಭಗವತಿ ಹಾಕಿಕೊಂಡಿದ್ದಾರೆ.

ಹಿಡಿದ ಕೆಲಸ ಮಾಡುವ ಛಲ, ಎಂಥದ್ದೇ ಪರಿಸ್ಥಿತಿಯಲ್ಲಿ ಧೈರ್ಯಗೆಡದಿದ್ದರೆ ಯಾವುದೇ ಸಮಸ್ಯೆಗಳು, ಬಡತನ ಇತ್ಯಾದಿ ಅಡ್ಡಿಗಳು ಏನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಭಗವತಿ ಅವರು ತೋರಿಸಿಕೊಟ್ಟಿದ್ದಾರೆ. 

click me!