ಇನ್ಮುಂದೆ ಶಾಲೆ, ಕಾಲೇಜಲ್ಲಿ ನಿತ್ಯ ಸಂವಿಧಾನ ವಾಚನ: ಸಚಿವ ಮಹದೇವಪ್ಪ

By Kannadaprabha NewsFirst Published Jun 2, 2023, 1:48 PM IST
Highlights

ಅಧಿಕಾರಿಗಳೆಲ್ಲರೂ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಎಲ್ಲರೂ ಸಂವಿಧಾನ ತೋರಿದ ಮಾರ್ಗದಲ್ಲಿ ಕೆಲಸ ಮಾಡಬೇಕು. ಸಂವಿಧಾನ ಬದ್ಧವಾಗಿ ಕೆಲಸ ಮಾಡಲು ಪ್ರಮಾಣ ವಚನ ಸ್ವೀಕಾರ ಮಾಡಿದ್ದೇವೆ. ಒಂದು ವೇಳೆ ಯಾರಾದರೂ ಉಲ್ಲಂಘನೆ ಮಾಡಿದರೆ ಚಾಟಿ ಬೀಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ ಸಚಿವ ಎಚ್‌.ಸಿ. ಮಹದೇವಪ್ಪ 

ಬೆಂಗಳೂರು(ಜೂ.02):  ರಾಜ್ಯದ ಎಲ್ಲ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಂದ ಹೇಳಿಸುವುದಕ್ಕೆ ಪೂರಕವಾಗಿ ಆದೇಶ ಹೊರಡಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ. ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ತಮ್ಮ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಅವರು, ಅಧಿಕಾರಿಗಳೆಲ್ಲರೂ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಎಲ್ಲರೂ ಸಂವಿಧಾನ ತೋರಿದ ಮಾರ್ಗದಲ್ಲಿ ಕೆಲಸ ಮಾಡಬೇಕು. ಸಂವಿಧಾನ ಬದ್ಧವಾಗಿ ಕೆಲಸ ಮಾಡಲು ಪ್ರಮಾಣ ವಚನ ಸ್ವೀಕಾರ ಮಾಡಿದ್ದೇವೆ. ಒಂದು ವೇಳೆ ಯಾರಾದರೂ ಉಲ್ಲಂಘನೆ ಮಾಡಿದರೆ ಚಾಟಿ ಬೀಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಇದೇ ವೇಳೆ ರಾಜ್ಯದ ಎಲ್ಲ ಶಾಲೆ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಂದ ಹೇಳಿಸುವುದಕ್ಕೆ ಪೂರಕ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂ.ನಗರ ವಿವಿಯಲ್ಲಿ ವಿದೇಶಿ ಭಾಷೆಯಲ್ಲಿ ಡಿಗ್ರಿ: ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್‌ ಭಾಷೆ ಪರಿಚಯ

ವಿದ್ಯಾರ್ಥಿ ವೇತನ ಸಮಸ್ಯೆ ಆಗದಂತೆ ಕ್ರಮ:

ರಾಜ್ಯದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಕೆಯಲ್ಲಿ ವಿಳಂಬ, ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವಂತೆ ಇದೇ ವೇಳೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕೆಲವೆಡೆ ವಿದ್ಯಾರ್ಥಿ ವೇತನ ವಿಳಂಬದಿಂದ ಕಾಲೇಜುಗಳಲ್ಲಿ ದಾಖಲಾತಿ ಸಮಸ್ಯೆ ಆಗುತ್ತಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿವೇತನದಲ್ಲಿ ಕೇಂದ್ರ ಸರ್ಕಾರದ್ದು ಶೇ.60 ಹಾಗೂ ರಾಜ್ಯ ಸರ್ಕಾರದ್ದು ಶೇ.40ರಷ್ಟು ಪಾಲಿದೆ. ರಾಜ್ಯದ ಪಾಲನ್ನು ಸಮರ್ಪಕವಾಗಿ ನೀಡಿ ಕೇಂದ್ರದ ಪಾಲು ತಪ್ಪದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

click me!