ರಾಜ್ಯದ 4.5 ಲಕ್ಷ ಪದವೀಧರ ನಿರುದ್ಯೋಗಿಗಳಿಗೆ ಅನುಕೂಲ ಆಗುವಂತೆ 2024ರ ಜನವರಿಯಿಂದ ಕಾಂಗ್ರೆಸ್‌ನ 5ನೇ ಗ್ಯಾರಂಟಿ ಯುವನಿಧಿ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ನ.20): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳನ್ನು ನೀಡಿದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಸಫಲವಾಗಿದೆ. ಆದರೆ, ಅಧಿಕಾರಕ್ಕೆ ಬಂದು 6 ತಿಂಗಳಾದರೂ 4 ಗ್ಯಾರಂಟಿಗಳನ್ನು ಮಾತ್ರ ಜಾರಿಗೊಳಿಸಿತ್ತು. ಈಗ ವಿಪಕ್ಷದಿಂದ 5ನೇ ಗ್ಯಾರಂಟಿ ಯುವನಿಧಿ ಜಾರಿ ಬಗ್ಗೆ ಟೀಕೆ ಎದುರಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಜನವರಿಯಿಂದ ಯುವನಿಧಿ ಯೋಜನೆ ಜಾರಿಗೆ ತರಲಾಗುವುದು. ಈ ಮೂಲಕ ನಿರುದ್ಯೋಗ ಪದವೀಧರ ಯುವಕ-ಯುವತಿಯರಿಗೆ ಸೂಕ್ತ ಕೆಲಸ ಹುಡುಕಿಕೊಳ್ಳಲು ಅನುಕೂಲ ಆಗುವಂತೆ ಮಾಸಿಕ 3,000 ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ ಅವರು, 'ಶಿಕ್ಷಣ ಪೂರ್ತಿಗೊಳಿಸಿದ ಪದವೀಧರ ಯುವಜನರಿಗೆ ಉದ್ಯೋಗ ಹುಡುಕಿಕೊಳ್ಳಲು ಅಗತ್ಯ ಸಮಯ ದೊರಕಬೇಕು ಮತ್ತು ಈ ಅವಧಿಯಲ್ಲಿ ಅವರು ಹತಾಶೆ, ಒತ್ತಡಗಳಿಗೆ ಒಳಗಾಗದೆ ತಮ್ಮಿಷ್ಟದ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಸಾಕಷ್ಟು ಅವಕಾಶ ಸಿಗಬೇಕು. ಇದು ಸಾಧ್ಯವಾಗಬೇಕಾದರೆ ನಿರುದ್ಯೋಗದಿಂದ ಎದುರಾಗುವ ಆರ್ಥಿಕ ಸಮಸ್ಯೆಗಳು ಅವರನ್ನು ಬಾಧಿಸದಂತೆ ತಡೆಯಬೇಕು. ಈ ಕಾರಣಕ್ಕಾಗಿ ನಾವು ಪದವೀಧರ ಮತ್ತು ಡಿಪ್ಲೊಮಾ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ನಿರುದ್ಯೋಗ ಭತ್ಯೆ ಒದಗಿಸುವ ಯುವನಿಧಿ ಯೋಜನೆಗೆ ಸರ್ಕಾರ ಜಾರಿಗೆ ಬಂದ ನಂತರದ ಮೊದಲ ಸಂಪುಟ ಸಭೆಯಲ್ಲಿಯೇ ಆಡಳಿತಾತ್ಮಕ ಅನುಮೋದನೆ ನೀಡಿದ್ದೇವೆ. ಈ ಯೋಜನೆ ಜನವರಿಯಿಂದ ಜಾರಿಗೆ ಬರಲಿದ್ದು, ಸುಮಾರು ನಾಲ್ಕೂವರೆ ಲಕ್ಷ ಯುವಜನತೆಗೆ ನೆರವಾಗಲಿದೆ ಎಂದು ಅಂದಾಜಿಸಲಾಗಿದೆ' ಎಂದು ಬರೆದುಕೊಂಡಿದ್ದಾರೆ.
ರಾಜ್ಯದ 4 ಲಕ್ಷ ವಿದ್ಯಾರ್ಥಿಗಳಿಗೆ ಶಾಕ್: ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ರದ್ದುಗೊಳಿಸಿದ ಸರ್ಕಾರ
ಕಳೆದ 6 ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿ ಮತ್ತು ಸಮಾಜದ ಶಾಂತಿ-ಸಾಮರಸ್ಯದ ರಕ್ಷಣೆ ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಸಾಧಿಸಿದ್ದು ಹಲವು, ಸಾಗಬೇಕಾದ ಹಾದಿ ಬಹುದೂರ ಇದೆ. ಕರ್ನಾಟಕ ಅಭಿವೃದ್ಧಿ ಮಾದರಿಯ ಈ ಪಯಣದಲ್ಲಿ ಜೊತೆಯಾಗಿ ಸಾಗೋಣ, ನಾಡನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ವಿದ್ಯುತ್ ಬಿಲ್ ಹೊರೆಯಿಂದ ಕಂಗೆಟ್ಟಿದ್ದ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿ, ನೆಮ್ಮದಿಯ ಬದುಕು ಕಲ್ಪಿಸುವ ಬದ್ಧತೆಯೊಂದಿಗೆ ನಾವು ಜಾರಿಗೆ ತಂದ ಗೃಹಜ್ಯೋತಿ ಯೋಜನೆ ಇಂದು ನಾಡಿನ ಪ್ರತಿ ಮನೆಯನ್ನು ಬೆಳಗುತ್ತಿದೆ. ಈ ಯೋಜನೆಯಡಿ ರಾಜ್ಯದ ಒಟ್ಟು 1.56 ಕೋಟಿ ಕುಟುಂಬಗಳಿಗೆ ಮಾಸಿಕ ಗರಿಷ್ಠ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ವರೆಗೆ ಯೋಜನೆಗಾಗಿ ರೂ. 2,152 ಕೋಟಿ ಅನುದಾನವನ್ನು ನಮ್ಮ ಸರ್ಕಾರವು ಬಿಡುಗಡೆಗೊಳಿಸಿದೆ.
ಮುರುಘಾ ಸ್ವಾಮೀಜಿಗೆ ಬಿಗ್ ರಿಲೀಫ್: 2ನೇ ಕೇಸ್‌ನಲ್ಲಿಯೂ ಜಾಮೀನು ಮಂಜೂರು
ಬಡತನ ಮತ್ತು ಹಸಿವು ಇಂದಿನ ಸಮಾಜವನ್ನು ಬಾಧಿಸುತ್ತಿರುವ ಮಾರಕ ರೋಗಗಳು. ನಾಡಿನ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯಡಿ ಬಡಕುಟುಂಬಗಳ ಪ್ರತಿ ಸದಸ್ಯನಿಗೆ ತಲಾ 10 ಕೆ.ಜಿ ಅಕ್ಕಿ ನೀಡುವ ಘೋಷಣೆ ಮಾಡಲಾಗಿತ್ತು. 5 ಕೆ.ಜಿ ಹೆಚ್ಚುವರಿ ಅಕ್ಕಿ ಲಭ್ಯವಿಲ್ಲದೇ ಇರುವುದರಿಂದ ರೂ. 170 ಅನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಉದ್ದೇಶಕ್ಕಾಗಿ ಒಟ್ಟು ರೂ. 2,444 ಕೋಟಿ ಹಣವನ್ನು ವಿನಿಯೋಗಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.