* ಈ ಬಾರಿಯ ಕಾಮೆಡ್-ಕೆ ಯುಜಿಇಟಿಗೆ ಒಟ್ಟು 61,635 ವಿದ್ಯಾರ್ಥಿಗಳು ನೋಂದಣಿ
* ಜೂ.19ರಂದು ದೇಶದ 154 ನಗರಗಳಲ್ಲಿನ 230 ಕೇಂದ್ರಗಳಲ್ಲಿ ಎರಡು ಹಂತದಲ್ಲಿ ಪರೀಕ್ಷೆ
* ಕಂಪ್ಯೂಟರ್ ಆಧಾರಿತ ಆನ್‌ಲೈನ್ ಮಾದರಿ ಪರೀಕ್ಷೆ ನಡೆಯಲಿದೆ
ಬೆಂಗಳೂರು(ಜೂ.15): ಸಿಇಟಿ ಪರೀಕ್ಷೆ ಮುಕ್ತಾಯಗೊಂಡ ನಂತರ ರಾಜ್ಯದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಪ್ಯಾನ್ ಇಂಡಿಯಾದ ಆಯ್ದ ವಿವಿಗಳಲ್ಲಿ ಲಭ್ಯವಿರುವ ಆಡಳಿತ ಮಂಡಳಿ ಕೋಟಾದ ಸೀಟುಗಳ ಪ್ರವೇಶಕ್ಕೆ ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟ (ಕಾಮೆಡ್-ಕೆ) ಜೂ.19ರಂದು ‘ಯುಜಿಇಟಿ-2022’ ಪರೀಕ್ಷೆ ನಡೆಸಲಿದೆ.
ನೀಟ್, ಸಿಇಟಿ ಮಾದರಿಯಲ್ಲೇ ಪರೀಕ್ಷಾ ಅಕ್ರಮ ತಡೆಯುವ ದೃಷ್ಟಿಯಿಂದ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಲೆ, ಕಿವಿ ಮುಚ್ಚುವಂತಹ, ಪೂರ್ಣ ತೋಳಿನ ಉಡುಪು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಈ ಬಾರಿಯ ಕಾಮೆಡ್-ಕೆ ಯುಜಿಇಟಿಗೆ ಒಟ್ಟು 61,635 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಜೂ.19ರಂದು ದೇಶದ 154 ನಗರಗಳಲ್ಲಿನ 230 ಕೇಂದ್ರಗಳಲ್ಲಿ ಎರಡು ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಕಂಪ್ಯೂಟರ್ ಆಧಾರಿತ ಆನ್‌ಲೈನ್ ಮಾದರಿ ಪರೀಕ್ಷೆ ನಡೆಯಲಿದೆ. ಮೊದಲ ಹಂತದ ಪರೀಕ್ಷೆಗಳು ಬೆಳಗ್ಗೆ 9ರಿಂದ 12ಗಂಟೆವರೆಗೆ, ಎರಡನೇ ಹಂತದ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ನಡೆಯಲಿವೆ ಎಂದು ಕಾಮೆಡ್-ಕೆ ಪ್ರಕಟಣೆ ತಿಳಿಸಿದೆ.
ComedK Result: ದೇಶಕ್ಕೆ ರಾಜ್ಯದ ವೀರೇಶ್ ಪ್ರಥಮ
ನೋಂದಾಯಿತ ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರಗಳನ್ನು ಕಾಮೆಡ್-ಕೆ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪರೀಕ್ಷಾ ಕೇಂದ್ರಕ್ಕೆ ತಪ್ಪದೆ ಪ್ರವೇಶ ಪತ್ರ ತರಬೇಕು. ಅಭ್ಯರ್ಥಿಗಳು ಮಾಸ್ಕ್, ಗ್ಲೌಸ್ ಧರಿಸಿ, ಸ್ಯಾನಿಟೈಸರ್ ಸೇರಿದಂತೆ ಕೋವಿಡ್ ನಿಯಂತ್ರಣಾ ಮಾರ್ಗಸೂಚಿ ಅನುಸರಿಸಿ ಬರಬೇಕು ಎಂದು ಕಾಮೆಡ್-ಕೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.