
ಬೆಂಗಳೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ದೇಶಪೂರ್ಣವಾದ ಭಾಷಣ ಮಾಡಿ, ಶಿಕ್ಷಣದ ಮಹತ್ವ, ಸಮಾನತೆಯ ಅಗತ್ಯತೆ ಹಾಗೂ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.
ಪ್ರತಿ ವರ್ಷ ಸೆಪ್ಟೆಂಬರ್ 5ರಂದು ನಾವು ಶಿಕ್ಷಕರ ದಿನವನ್ನು ಆಚರಿಸುತ್ತೇವೆ. ಈ ದಿನ ಭಾರತ ರತ್ನ, ದಾರ್ಶನಿಕ, ಉಪನ್ಯಾಸಕ ಹಾಗೂ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣ ಅವರ ಜನ್ಮದಿನವಾಗಿದೆ. ಅವರು ರಾಷ್ಟ್ರಪತಿಯಾಗುವ ಮೊದಲು ಉಪರಾಷ್ಟ್ರಪತಿ ಹಾಗೂ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಮೈಸೂರಿನಲ್ಲೂ ಅವರು ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಮೇಧಾವಿ, ಬುದ್ಧಿವಂತರು, ನೈತಿಕತೆ ಪಾಲಿಸಿದ ಆದರ್ಶ ವ್ಯಕ್ತಿಯಾಗಿದ್ದರಿಂದ ಅವರ ಗೌರವಕ್ಕಾಗಿ ಪ್ರತಿವರ್ಷ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ ಎಂದು ಸಿಎಂ ನೆನಪಿಸಿದರು.
ಒಂದು ಕಾಲದಲ್ಲಿ ಶೂದ್ರರು ವಿದ್ಯಾಭ್ಯಾಸ ಪಡೆಯಲು ಅವಕಾಶವಿರಲಿಲ್ಲ. ಆದರೆ ಸಂವಿಧಾನ ಜಾರಿಯಾದ ನಂತರ ಎಲ್ಲರಿಗೂ ಸಮಾನವಾದ ಅವಕಾಶ ಲಭ್ಯವಾಯಿತು. ಅದಕ್ಕಾಗಿ ಶಾಲೆ, ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಅಭ್ಯಾಸ ಬೆಳೆಸಬೇಕು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಿಎಂ ಒತ್ತಾಯಿಸಿದರು.
ಶಿಕ್ಷಕರು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತವಾಗಿ ಬೆಳೆಸಬೇಕು. ಸಮಾಜದಲ್ಲಿ ಮೂಡನಂಬಿಕೆ, ಅಸಮಾನತೆ, ಜಾತಿ ಭೇದ ಇತ್ಯಾದಿ ಇನ್ನೂ ಬೇರೂರಿರುವುದನ್ನು ಉಲ್ಲೇಖಿಸಿದ ಸಿಎಂ, ಶಿಕ್ಷಕರು ವೈಜ್ಞಾನಿಕ ಚಿಂತನೆ ಬೆಳೆಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದರು. ಅವರ ಪ್ರಕಾರ, ಶಿಕ್ಷಕರು ವಿದ್ಯೆ ನೀಡುವವರು, ಅನ್ನದಾತರು ಅನ್ನ ನೀಡುವವರು, ಸೈನಿಕರು ದೇಶವನ್ನು ಕಾಯುವವರು – ಈ ಮೂವರು ಸಮಾಜದ ಅತ್ಯಂತ ಪ್ರಮುಖರು.
ಶಿಕ್ಷಣ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ಪ್ರತಿಯೊಬ್ಬ ಶಿಕ್ಷಕರು 25–30 ವರ್ಷ ಸೇವೆ ಮಾಡಿದ ಬಳಿಕ ಆತ್ಮಾವಲೋಕನ ಮಾಡಿಕೊಳ್ಳಬೇಕು. "ನಾನು ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದೀನೆಯಾ?" ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳಬೇಕು. ಮಕ್ಕಳಿಗೆ ಮೊಬೈಲ್‌ನಿಂದ ದೂರವಿಟ್ಟು ಪುಸ್ತಕ ಓದಿಸುವಂತೆ ಮಾರ್ಗದರ್ಶನ ನೀಡಬೇಕು.
ಸಮಾಜದಲ್ಲಿ ಅಸಮಾನತೆ ಹುಟ್ಟಿದ್ದು ಶಿಕ್ಷಣದ ಕೊರತೆಯಿಂದಲೇ. ವಿದ್ಯೆ ಯಾರೊಬ್ಬರ ಸ್ವತ್ತಲ್ಲ. ಜಾತಿ ವ್ಯವಸ್ಥೆ ಗಟ್ಟಿ ನೆಲಸಿರುವುದರಿಂದ ಅದು ಚಲನೆಯಿಲ್ಲದ ನೀರಿನಂತಾಗಿದೆ. ಆದರೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಶಕ್ತಿ ದೊರಕಿದಾಗ ಮಾತ್ರ ಜಾತಿ ವ್ಯವಸ್ಥೆಗೆ ಚಲನೆ ಬರುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.