ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌, ಪಿಸಿ ವಿತರಿಸಿದ ಸಿಎಂ ಯಡಿಯೂರಪ್ಪ

By Suvarna News  |  First Published Jun 23, 2021, 4:01 PM IST

* ರಾಜ್ಯದ ಮಹಾತ್ವಾಕಾಂಕ್ಷಿ ಯೋಜನೆಗೆ ಯಡಿಯೂರಪ್ಪ ಚಾಲನೆ
* 2,500 ಸ್ಮಾರ್ಟ್‌ಕ್ಲಾಸ್‌ರೂಂ ಶುಭಾರಂಭ
* ಸ್ಮಾರ್ಟ್‌ಕ್ಲಾಸ್‌ ರೂಂನಲ್ಲಿ ವಿದ್ಯಾರ್ಥಿಯಾದ ಡಿಸಿಎಂ
 


ಬೆಂಗಳೂರು(ಜೂ.23): ಕೋವಿಡ್‌ ಸಂಕಷ್ಟ ಕಾಲದಲ್ಲಿ ಉನ್ನತ ಶಿಕ್ಷಣ ಕಲಿಕೆಯನ್ನು ವಿದ್ಯಾರ್ಥಿಗಳು ಅತ್ಯಂತ ಸರಳ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌, ಪಿಸಿಗಳನ್ನು ವಿತರಣೆ ಮಾಡುವ ರಾಜ್ಯದ ಮಹಾತ್ವಾಕಾಂಕ್ಷಿ ಯೋಜನೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. 

ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ʼಕಲಿಕಾ ನಿರ್ವಹಣಾ ವ್ಯವಸ್ಥೆʼಯ ಮೂಲಕ ಬೋಧನೆ- ಕಲಿಕೆಗಾಗಿ ಟ್ಯಾಬ್ಲೆಟ್‌, ಪಿಸಿಗಳನ್ನು ನೀಡಲಾಗಿದ್ದು, ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಇಂದು(ಬುಧವಾರ) ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಹತ್ತು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್‌ ಪಿಸಿಗಳನ್ನು ವಿತರಿಸಿದ್ದಾರೆ. 

Tap to resize

Latest Videos

ಏಕಕಾಲದಲ್ಲೇ ರಾಜ್ಯದ ವಿವಿಧ ಜಿಲ್ಲೆಗಳ ಕಾಲೇಜುಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಬ್ಲಾಂಕ್ವೆಟ್‌ ಹಾಲ್ ವೇದಿಕೆಗೆ ವರ್ಚುಯಲ್‌ ಮೂಲಕ ಲಿಂಕ್‌ ಆಗಿ ಟ್ಯಾಬ್‌ಗಳನ್ನು ವಿತರಣೆ ಮಾಡಿದರು. ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು, ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ್‌, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರೂ ಆನ್‌ಲೈನ್‌ ವೇದಿಕೆ ಮೂಲಕ ಟ್ಯಾಬ್‌ಗಳನ್ನು ವಿತರಣೆ ಮಾಡಿದರು. 

ಪರೀಕ್ಷೆಯಿಂದ ಒಂದು ಸಾವಾದರೂ ಆಂಧ್ರ ಸರ್ಕಾರ ಹೊಣೆ: ಸುಪ್ರೀಂ ವಾರ್ನಿಂಗ್!

ಸ್ಮಾರ್ಟ್‌ಕ್ಲಾಸ್‌ರೂಂ ಲೋಕಾರ್ಪಣೆ 

ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸ್ಥಾಪಿಸಲಾಗಿದ್ದ ಮಾದರಿ ಸ್ಮಾಟ್‌ಕ್ಲಾಸ್‌ ರೂಂ ಅನ್ನು ಸಿಎಂ ಬಿಎಸ್‌ವೈ ಉದ್ಘಾಟನೆ ಮಾಡಿ ಅದರ ವ್ಯವಸ್ಥೆ ವೀಕ್ಷಿಸಿದರು.  ಅದರ ಮೂಲಕ ವಿದ್ಯಾರ್ಥಿಗಳು ಹೇಗೆ ಕಲಿಯುತ್ತಾರೆ ಎಂಬುದನ್ನು ಅವರು ಗಮನಿಸಿದರಲ್ಲದೆ  ಈ ಕುರಿತ ಮಾಹಿತಿಯನ್ನು ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರಿಂದ ಪಡೆದುಕೊಂಡರು. ಸ್ಮಾರ್ಟ್‌ಕ್ಲಾಸ್‌ ರೂಂನ ತಾಂತ್ರಿಕ ನೈಪುಣ್ಯತೆ ಹಾಗೂ ಬೋಧನೆ-ಕಲಿಕೆ ವಿಧಾನದ ಬಗ್ಗೆ ಯಡಿಯೂರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

ಕೋವಿಡ್‌ ಸಂಕಷ್ಟ ಕಾಲದಲ್ಲಿ ತಮ್ಮ ನೆರವಿಗೆ ಬಂದ ಕಲಿಕಾ ನಿರ್ವಹಣಾ ವ್ಯವಸ್ಥೆ, ಟ್ಯಾಬ್‌ಗಳು ಹಾಗೂ ಸ್ಮಾರ್ಟ್‌ಕ್ಲಾಸ್‌ ರೂಂಗಳ ಉಪಯೋಗದ ಬಗ್ಗೆ ಇಬ್ಬರು ವಿದ್ಯಾರ್ಥಿಗಳು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸಮಕ್ಷಮದಲ್ಲಿ ಅಭಿಪ್ರಾಯ ಹಂಚಿಕೊಂಡರು. 

163 ಕೋಟಿ ರೂ. ವೆಚ್ಚ: ಸಿಎಂ 

ರಾಜ್ಯದಲ್ಲಿನ 430 ಸರಕಾರಿ ಪ್ರಥಮ ದರ್ಜೆ ಕಾಲೇಜು, 87 ಸರಕಾರಿ ಪಾಲಿಟೆಕ್ನಿಕ್ ಹಾಗೂ 14 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 1.55 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ಪಿಸಿಗಳನ್ನು ಉಚಿತವಾಗಿ ನೀಡಲಾಗಿದೆ. ಈ ಯೋಜನೆಗೆ ಸರಕಾರ 163 ಕೋಟಿ ರೂ. ವೆಚ್ಚ ಮಾಡಿದೆ ಎಂದು ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. 

ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ನಗರ- ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಾರತಮ್ಯ ನಿವಾರಿಸುವುದು, ಅವರ ನಡುವೆ ಡಿಜಿಟಲ್‌ ಅಂತರವನ್ನು ಅಳಿಸಿಹಾಕುವ ಮತ್ತೂ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಇಂಥ ಉತ್ತಮ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿಗಳು ನುಡಿದರು. 

ಅಲ್ಲದೆ 27.77 ಕೋಟಿ ರೂ. ವೆಚ್ಚದಲ್ಲಿ ಕಲಿಕಾ ನಿರ್ವಹಣೆ ವ್ಯವಸ್ಥೆ ವಿದ್ಯಾರ್ಥಿಗಳು ಕಲಿಯುವುದಕ್ಕೆ ಅನುವಾಗುವಂತೆ 2,500  ಸ್ಮಾರ್ಟ್‌ಕ್ಲಾಸ್‌ರೂಂಗಳನ್ನು ರಾಜ್ಯಾದ್ಯಂತ ಸ್ಥಾಪಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚು ಪೂರಕವಾಗಲಿದೆ ಎಂದು ಅವರು ನುಡಿದರು. 

ಶಾಲೆ ಸದ್ಯಕ್ಕಿಲ್ಲ, ಕಾಲೇಜು ಶೀಘ್ರದಲ್ಲೇ ಪುನಾರಂಭ?

ಇಡೀ ದೇಶದಲ್ಲಿಯೇ ಮೊದಲ ಉಪಕ್ರಮ: ಡಿಸಿಎಂ 

ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ಗಳ ಮೂಲಕ ಕಲಿಕಾ ನಿರ್ವಹಣಾ ವ್ಯವಸ್ಥೆ ಮಾಡಿರುವ ರಾಜ್ಯದ ಕ್ರಮ ದೇಶದಲ್ಲೇ ಪ್ರಥಮ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಹೇಳಿದರು.  ಇದೊಂದು ಉದಾತ್ತ ಕಾರ್ಯಕ್ರಮ. ಇದರಲ್ಲಿ ಉನ್ನತ ಶಿಕ್ಷಣ ಇಲಾಖೆಯ ಜತೆಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಕೈಜೋಡಿಸಿವೆ. ಮೂರು ಇಲಾಖೆಗಳ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದರು. 

ರಾಜ್ಯದ ಉನ್ನತ ಶಿಕ್ಷಣದಲ್ಲಿ ಸುಧಾರಣೆಗಳ ಪರ್ವವೇ ಆರಂಭವಾಗಿದೆ. ಈ ವರ್ಷವೇ ರಾಷ್ಟ್ರೀಯ ಶಿಕ್ಷಣ ನೀತಿಯೂ ಜಾರಿಗೆ ಬರುತ್ತದೆ. ಅದಕ್ಕೆ ಮೊದಲೇ ಕಲಿಕಾ ನಿರ್ವಹಣೆ ವ್ಯವಸ್ಥೆ ಜಾರಿಗೆ ಬಂದಿದ್ದು, ಅದನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ಪಿಸಿಗಳನ್ನು ಕೋಡಲಾಗಿದೆ. ಜಾಗತಿಕ ಮಟ್ಟದ ಆಧುನಿಕ ಕಲಿಕಾ ಮಟ್ಟಕ್ಕೆ ತಕ್ಕಂತೆ ಕಲಿಕೆಯನ್ನು ನಿರಂತರವಾಗಿ ಮುಂದುವರಿಸುವುದು ಹಾಗೂ ಆನ್‌ಲೈನ್‌ಮೂಲಕವೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ಗಳು ನೆರವಾಗುತ್ತವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಪ್ರಭಾಕರ್‌ ಟ್ಯಾಬ್ಲೆಟ್‌, ಪಿಸಿಗಳ ಬಗ್ಗೆ ಮಾಹಿತಿ ಹಾಗೂ ಅವುಗಳ ಮೂಲಕ ಸಮಗ್ರ ಕಲಿಕಾ ವ್ಯವಸ್ಥೆ ಕಲಿಕೆ-ಬೋಧನೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. 

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌, ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ನಾಗಲಾಂಬಿಕೆ ದೇವಿ, ಉನ್ನತ ಶಿಕ್ಷಣ ಪರಿಷತ್‌ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಗುಡ್‌ನ್ಯೂಸ್: ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರ ಆಯ್ಕೆಗೆ ವಿದ್ಯಾರ್ಥಿಗಳಿಗೆ ಅವಕಾಶ

ಸ್ಮಾರ್ಟ್‌ಕ್ಲಾಸ್‌ ರೂಂನಲ್ಲಿ ವಿದ್ಯಾರ್ಥಿಯಾದ ಡಿಸಿಎಂ

ಮುಖ್ಯಮಂತ್ರಿ ಯಡಿಯೂರಪ್ಪ ಸ್ಮಾರ್ಟ್‌ಕ್ಲಾಸ್‌ರೂಂ ಉದ್ಘಾಟಿಸಿ ನಿರ್ಗಮಿಸಿದ ನಂತರ, ಪುನಾ ಅಲ್ಲಿಗೆ ಆಗಮಿಸಿದ ಡಿಸಿಎಂ ಡಾ.ಅಶ್ವತ್ಥನಾರಾಯಣ, ಸ್ಮಾರ್ಟ್‌ಕ್ಲಾಸ್‌ ರೂಂನಲ್ಲಿ ಪಾಠ ಕೇಳಿದರು.  ಈ ವೇಳೆಯಲ್ಲಿ ಕನ್ನಡ ಪ್ರಾಧ್ಯಾಪಕರೊಬ್ಬರು ಸ್ಮಾರ್ಟ್‌ಕ್ಲಾಸ್‌ ರೂಂನಿದಲೇ ಮೊದಲ ಪಾಠ ಆರಂಭಿಸಿದರು. ಹೈಸ್ಪೀಡ್‌ ಇಂಟರ್‌ನೆಟ್‌, ಆಧುನಿಕ ಫಿಚರ್‌ಗಳುಳ್ಳ ಟ್ಯಾಬ್ಲೆಟ್‌, ಪಿಸಿ ಮೂಲಕ ಕಲಿಕಾ ನಿರ್ವಹಣಾ ವ್ಯವಸ್ಥೆ ಅಡಿಯಲ್ಲಿ ನಡೆದ ಈ ಬೋಧನೆ- ಕಲಿಕೆಯ ಮಾದರಿಯನ್ನು ಅವರು ನೇರವಾಗಿ ವಿದ್ಯಾರ್ಥಿಯಂತೆಯೇ ವೀಕ್ಷಿಸಿದರು. 

ವಿದ್ಯಾರ್ಥಿಗಳ ಜತೆಯಲ್ಲಿ ಪಾಠವನ್ನು ಆಸಕ್ತಿಯಿಂದ ಕೇಳಿದ ಡಿಸಿಎಂ, ತಂತ್ರಜ್ಞಾನದ ಮೂಲಕ ಕನ್ನಡ ಪಾಠ ಕೇಳಿ ಚಕಿತರಾದರು. ಅಲ್ಲದೆ, ಸ್ಮಾರ್ಟ್‌ಕ್ಲಾಸ್‌ ರೂಂನ ಪರಿಣಾಮಕಾರಿ ದಕ್ಷತೆಯನ್ನು ವೀಕ್ಷಿಸಿ ಸಂತಸಪಟ್ಟರು. ಬೋಧನೆಗೆ ಈ ವ್ಯವಸ್ಥೆ ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂದು ಬೋಧಕರಿಂದಲೇ ಮಾಹಿತಿ ಪಡೆದರಲ್ಲದೆ, ತಮ್ಮ ಜತೆ ಕೂತು ಪಾಠ ಕೇಳಿದ ವಿದ್ಯಾರ್ಥಿಗಳ ಜತೆಗೂ ಸಂವಾದ ನಡೆಸಿದರು. 

ಕೋಲಾರ ಜಿಲ್ಲೆಯ ಮಾಲೂರಿನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಈ ವೇಳೆ ಪಾಠ ಮಾಡಿದರು. ನಂತರ ಮಹಾರಾಣಿ ಅಮ್ಮಣ್ಣಿ ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ಶಾಲಿನಿ ಅವರು ರಾಸಾಯನ ಶಾಸ್ತ್ರ ಕ್ಲಾಸ್‌ನಡೆಸಿಕೊಟ್ಟರು. ಉನ್ನತ ಶಿಕ್ಷಣ ಪರಿಷತ್‌ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್‌ ಅವರೂ ಪಾಠ ಕೇಳಿಸಿಕೊಂಡರು.
 

click me!