ಸಿಇಟಿ ಪ್ರಕರಣದಲ್ಲಿ ಯಾರಿಗೂ ಅನ್ಯಾಯ ಆಗಲು ಬಿಡಲ್ಲ: ಸಿಎಂ ಬೊಮ್ಮಾಯಿ

By Govindaraj SFirst Published Sep 5, 2022, 3:45 AM IST
Highlights

ವೃತ್ತಿ ಶಿಕ್ಷಣ ಕೋರ್ಸ್‌ಗೆ ಪಿಯುಸಿ ಮತ್ತು ಸಿಇಟಿ ಪರೀಕ್ಷೆಯ ಶೇ.50 ಅಂಕ ಪರಿಗಣನೆ ವಿಚಾರವಾಗಿ ಕೋರ್ಟ್‌ ಆದೇಶದ ಅಧ್ಯಯನ ಮಾಡಲಾಗುವುದು. ಯಾರು ನೈಜವಾಗಿ ಪರೀಕ್ಷೆ ಬರೆದು ಸಿಇಟಿಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೋ ಅವರಿಗೆ ಅನ್ಯಾಯ ಆಗಲು ಬಿಡಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿ (ಸೆ.05): ವೃತ್ತಿ ಶಿಕ್ಷಣ ಕೋರ್ಸ್‌ಗೆ ಪಿಯುಸಿ ಮತ್ತು ಸಿಇಟಿ ಪರೀಕ್ಷೆಯ ಶೇ.50 ಅಂಕ ಪರಿಗಣನೆ ವಿಚಾರವಾಗಿ ಕೋರ್ಟ್‌ ಆದೇಶದ ಅಧ್ಯಯನ ಮಾಡಲಾಗುವುದು. ಯಾರು ನೈಜವಾಗಿ ಪರೀಕ್ಷೆ ಬರೆದು ಸಿಇಟಿಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೋ ಅವರಿಗೆ ಅನ್ಯಾಯ ಆಗಲು ಬಿಡಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಆದೇಶ ಜಾರಿಗೆ ತರುವ ಮುನ್ನ ಸಮಗ್ರ ಅಧ್ಯಯನ ಮಾಡುತ್ತೇವೆ. ಈ ಕುರಿತು ಅಡ್ವೋಕೇಟ್‌ ಜನರಲ್‌ಗೆ ವರದಿ ಕೊಡಲು ಹೇಳಿದ್ದೇನೆ. ನಾನು ಮತ್ತು ಉನ್ನತ ಶಿಕ್ಷಣ ಸಚಿವರು ಅಡ್ವೊಕೇಟ್‌ ಅವರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದೇ ವೇಳೆ ರಾಜ್ಯದಲ್ಲಿ ಔರಾದ್ಕರ್‌ ವರದಿ ಜಾರಿಗೆ ತಂದಿದ್ದೇವೆ ಎಂದ ಅವರು, ಕಂಪ್ಯೂಟರ್‌ ಕಲಿಯುವುದು ಕಡ್ಡಾಯ ಎಲ್ಲ ಇಲಾಖೆಗೂ ಅನ್ವಯ. ಹೀಗಾಗಿ ಪೊಲೀಸ್‌ ಇಲಾಖೆಯವರೂ ಈ ವಿಚಾರದಲ್ಲಿ ಅಪ್‌ಡೇಟ್‌ ಆಗುವುದು ಅನಿವಾರ್ಯ ಎಂದರು.

ಸೆ.5ಕ್ಕೆ ಸಿಇಟಿ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ ಸಾಧ್ಯತೆ? ಸೆ.15ರ ವೇಳೆಗೆ ಕೌನ್ಸೆಲಿಂಗ್‌ ಸಂಭವ

ಸಿಇಟಿ ರ್ಯಾಂಕ್‌ ಪಟ್ಟಿ ರದ್ದು: ಮರುಪರೀಕ್ಷೆ ಬರೆದ ಅಭ್ಯರ್ಥಿಗಳ ಪ್ರಸಕ್ತ ಸಾಲಿನ ಸಿಇಟಿ ಅಂಕಗಳ ಜೊತೆ ಕಳೆದ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಹೊಸ ಸಿಇಟಿ ರ್ಯಾಂಕಿಂಗ್‌ ಪಟ್ಟಿಪ್ರಕಟಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಚ್‌ ನಿರ್ದೇಶನ ನೀಡಿದೆ.

ಕಳೆದ ಜುಲೈ 30ರಂದು ಹೊರಡಿಸಲಾಗಿದ್ದ 2021-2022ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ರದ್ದುಪಡಿಸಿರುವ ಹೈಕೋರ್ಚ್‌, ಕೋರ್ಸ್‌ಗಳ ಪ್ರವೇಶಾತಿಗೆ ಮರು ಪರೀಕ್ಷೆ (ಸಿಇಟಿ) ಬರೆದ ಎಲ್ಲ ವಿದ್ಯಾರ್ಥಿಗಳ ಪಿಯುಸಿ ಪರೀಕ್ಷೆಯ ಶೇ. 50 ಅಂಕ ಹಾಗೂ ಸಿಇಟಿಯಲ್ಲಿ ಪಡೆದಿರುವ ಶೇ. 50 ಅಂಕ ಪರಿಗಣಿಸಿ ಹೊಸದಾಗಿ ರ್ಯಾಂಕ್‌ ಪಟ್ಟಿಪ್ರಕಟಿಸುವಂತೆ ಆದೇಶಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ 2020-21ರ ಸಾಲಿನ ಸುಮಾರು 21 ಸಾವಿರ ಮರು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಅದೇ ರೀತಿ 2021-2022ರ ಸಾಲಿನ ಸಿಇಟಿ ರ್ಯಾಂಕಿಂಗ್‌ನಲ್ಲಿ ಭಾರಿ ಏರುಪೇರಾಗುವ ಸಾಧ್ಯತೆಯಿದೆ.

ಮಹತ್ವದ ಆದೇಶ: 2020-21ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸುವುದಿಲ್ಲ ಎಂದು ಕೆಇಎ ಹೊರಡಿಸಿದ್ದ ಟಿಪ್ಪಣಿಯನ್ನು ಪ್ರಶ್ನಿಸಿ ಪ್ರತ್ಯೇಕವಾಗಿ ಸಲ್ಲಿಕೆಯಾಗಿದ್ದ ಏಳು ಅರ್ಜಿಗಳನ್ನು ಒಟ್ಟು ಸೇರಿಸಿ ವಿಚಾರಣೆ ನಡೆಸಿದ ನ್ಯಾ. ಎಸ್‌. ಆರ್‌. ಕೃಷ್ಣ ಕುಮಾರ್‌ ಅವರ ಏಕಸದಸ್ಯ ನ್ಯಾಯಪೀಠವು ಈ ಮಹತ್ವದ ಆದೇಶ ಪ್ರಕಟಿಸಿದೆ. 2021ರಲ್ಲಿ ಪಿಯುಸಿಯಲ್ಲಿ ಪಡೆದ ಅಂಕಗಳನ್ನು 2022-23ರ ಸಾಲಿನ ಇನ್ನಿತರ ಪದವಿಗಳ ಪ್ರವೇಶಕ್ಕೆ ಪರಿಗಣಿಸಲಾಗಿದೆ. 

CET: ಅತಿವೃಷ್ಟಿಯಿಂದ ವಿದ್ಯುತ್ ಅಡಚಣೆ; ದಾಖಲಾತಿಗಳ ಪರಿಶೀಲನೆಗೆ ಮತ್ತಷ್ಟು ಅವಕಾಶ

ಆದರೆ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕೋರ್ಸ್‌ಗಳಿಗೆ ಪರಿಗಣಿಸುವುದಿಲ್ಲ ಎಂಬ ಕೆಇಎಯ ಟಿಪ್ಪಣಿ ವಿವೇಚನಾ ರಹಿತ, ಅತಾರ್ಕಿಕ ಮತ್ತು ನ್ಯಾಯಸಮ್ಮತವಾಗಿಲ್ಲ ಎಂದು ಹೈಕೋರ್ಚ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. 2021ನೇ ಸಾಲಿನ ಪಿಯು ಅಂಕಗಳನ್ನು ಈ ಬಾರಿ ರ್ಯಾಂಕಿಂಗ್‌ಗೆ ಪರಿಗಣಿಸುವುದಿಲ್ಲ ಎಂದು ಕೆಇಎಯು ಸಿಇಟಿ ರ್ಯಾಂಕಿಂಗ್‌ ಪ್ರಕಟಿಸುವಾಗ ಟಿಪ್ಪಣಿ ಹೊರಡಿಸಿದೆ. ಇದು ಸರಿಯಲ್ಲ. ಆಯ್ಕೆ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ಹೊಸ ಮಾನದಂಡವನ್ನು ಘೋಷಿಸುವಂತಿಲ್ಲ. 2022ರ ಏ.18ರಿಂದ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಜು.30ರಂದು ಮುಕ್ತಾಯ ಹಂತದಲ್ಲಿದ್ದಾಗ ಈ ಘೋಷಣೆ ಮಾಡಿದ್ದು ಕಾನೂನುಬಾಹಿರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

click me!