
ತಾವು ಕಲಿತ ಶಾಲೆ ಎಂದರೆ ಮಕ್ಕಳಿಗೆ ಅದೇನೋ ಅಭಿಮಾನವಿರುತ್ತದೆ. ತಾವು ಕಲಿತು ಹೋದ ನಂತರವೂ ಮತ್ತೆ ಮತ್ತೆ ತಮ್ಮ ಹಳೆಯ ಶಾಲೆಗೆ ಹೋಗಿ ಅಲ್ಲಿ ತಾವು ಕಳೆದ ಬಾಲ್ಯದ ನೆನಪುಗಳನ್ನು ದೊಡ್ಡವರಾದ ನಂತರವೂ ಮೆಲುಕು ಹಾಕುತ್ತಾರೆ. ಪ್ರಾಥಮಿಕ ಶಾಲೆಯ ಜೊತೆಗಿನ ಬಾಂಧವ್ಯ, ಅದರ ಮೇಲಿರುವ ಪ್ರೀತಿ ಅಂತಹದ್ದು, ಶಾಲೆಯನ್ನು ತೊರೆದು ಉನ್ನತ ಶಿಕ್ಷಣಕ್ಕಾಗಿ ದೂರ ಹೋಗುವ ವೇಳೆ ತಾವು ಕಲಿತ ಬ್ಯಾಚ್‌ನ ನೆನಪು ಶಾಶ್ವತವಾಗಿರಲೆಂದು ಮಕ್ಕಳೆಲ್ಲಾ ಸೇರಿ ಏನಾದರೊಂದು ನೆನಪಿನ ಕಾಣಿಕೆಯನ್ನು ಶಾಲೆಗೆ ನೀಡಿ ಹೋಗುತ್ತಾರೆ. ಆದರೆ ಇಲ್ಲೊಂದು ಕಡೆ 10ನೇ ತೆರಗತಿ ದಾಟಿದ ವಿದ್ಯಾರ್ಥಿಗಳು ಮಾಡಿದ ಕೆಲಸ ಇಡೀ ವಿದ್ಯಾರ್ಥಿ ಸಮುದಾಯವೇ ತಲೆತಗ್ಗಿಸುವಂತೆ ಮಾಡಿದೆ. ಶಿಕ್ಷಣದ ನಂತರವೂ ಮಕ್ಕಳು ಇಂತಹ ಹೀನಾಯವಾದ ಕೆಲಸ ಮಾಡುವುದಾದರೆ ಈ ಮಕ್ಕಳು ಆ ಶಾಲೆಯಲ್ಲಿ ಕಲಿತಿದ್ದಾದರು ಏನು? ಎಂಬ ಪ್ರಶ್ನೆ ನೋಡುಗರಲ್ಲಿ ಮೂಡುವಂತೆ ಮಾಡಿದೆ. ಹಾಗಿದ್ದರೆ ಈ ಕಿಡಿಗೇಡಿ ಮಕ್ಕಳು ಮಾಡಿದ್ದೇನು ನೋಡಿ...
ಅಂದಹಾಗೆ ಇಂತಹ ಘಟನೆ ನಡೆದಿರುವುದು ಅಸ್ಸಾಂನ ಸಿಲ್ಚಾರ್‌ನಲ್ಲಿ ಆದರೆ ಖಾಸಗಿ ಶಾಲೆಯೂ ಸರ್ಕಾರಿ ಶಾಲೆಯೋ ಎಂಬ ಮಾಹಿತಿ ಇಲ್ಲ, ಇಲ್ಲಿ 10ನೇ ಕ್ಲಾಸ್ ಅಧ್ಯಯನ ಮುಗಿದ ವಿದ್ಯಾರ್ಥಿಗಳು, ತಮ್ಮ ಬೀಳ್ಕೊಡುಗೆ ಕಾರ್ಯಕ್ರಮದ ನಂತರ ಶಾಲೆಯ ತಮ್ಮ ತರಗತಿಯಲ್ಲಿದ್ದ ಪೀಠೋಪಕರಣಗಳು, ಫ್ಯಾನ್‌ಗಳು, ಶಾಲೆಯಲ್ಲಿ ತಮಗೆ ಪಾಠ ಮಾಡಲು ಬಳಸುತ್ತಿದ್ದ ಕಪ್ಪು ಹಲಗೆ, ಚೇರ್‌ಗಳು, ಬಲ್ಬ್‌ಗಳು ಹೀಗೆ ಎಲ್ಲವನ್ನು ವಿದ್ಯಾರ್ಥಿಗಳು ರೌಡಿಗಳಂತೆ ಧ್ವಂಸ ಮಾಡಿ ಹಾಕಿದ್ದು, ಈ ವಿಧ್ವಂಸಕವೆನಿಸುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ವಿದ್ಯಾರ್ಥಿಗಳು ಬೆಂಚ್‌ನ ಮೇಲೆ ಹತ್ತಿ ಫ್ಯಾನ್‌ನ ರೆಕ್ಕೆಗಳನ್ನು ಮುರಿಯುತ್ತಿರುವುದು, ಬಲ್ಬ್‌ಗಳನ್ನು ತೆಗೆದು ನೆಲಕ್ಕೆ ಹೊಡೆಯುತ್ತಿರುವುದು, ಕಪ್ಪು ಹಲಗೆಯನ್ನು ಕೆಳಗೆ ಬೀಳಿಸುವುದು, ತಾವು ಇಷ್ಟು ದಿನ ಕುಳಿತ ಬೆಂಚನ್ನು ಕೂಡ ಮೇಲಿನಿಂದ ಎತ್ತಿ ಹಾಕಿ ಕಾಲನ್ನು ಮುರಿಯುತ್ತಿರುವುದು ಕಂಡು ಬಂದಿದೆ. ಈ ಎಲ್ಲಾ ದೃಶ್ಯಗಳು ಕ್ಲಾಸ್ ರೂಮ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವೀಡಿಯೋ ನೋಡಿದ ಅನೇಕರು ಎಳೆಯ ಪ್ರಾಯದ ವಿದ್ಯಾರ್ಥಿಗಳ ಈ ಕೃತ್ಯ ನೋಡಿ ಬೇಸರದ ಜೊತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ಇವರಿಗೆ ಶಿಕ್ಷಣ ಕೊಟ್ಟ ಉಪಯೋಗವೇನು? ಇವರಿಗೆ ನೀಡಿದ ಶಿಕ್ಷಣದ ವೈಫಲ್ಯವಿದು ಎಂದು ಪ್ರತಿಕ್ರಿಯಿಸಿದ್ದಾರೆ. ಇಂತಹ ಮಕ್ಕಳನ್ನು ಸುಮ್ಮನೆ ಬಿಡಬೇಡಿ, ಇವರ ಪರೀಕ್ಷಾ ಫಲಿತಾಂಶವನ್ನು ತಡೆ ಹಿಡಿಯಿರಿ ಹಾಗೂ ಇದಕ್ಕಾಗಿ ಅವರು ಬೇಡುವಂತೆ ಮಾಡಿ. ಈ ಎಲ್ಲಾ ಹಾನಿಗಳನ್ನು ಅವರ ಕೈಯಿಂದಲೇ ಭರಿಸಿಕೊಳ್ಳಿ, ಭರಿಸಿದ ನಂತರವೂ ಅವರನ್ನು ಸುಮ್ಮನೇ ಬಿಡಬೇಡಿ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವೆಲ್ಲಾ, ನಮ್ಮ ತರಗತಿಯನ್ನು ಅಲಂಕಾರ ಮಾಡಲು ಹಣ ಸಂಗ್ರಹಿಸುತ್ತಿದ್ದೆವು. ಹಾಗೆಯೇ ನಮ್ಮ ತರಗತಿಯ ಬಗ್ಗೆ ಅತೀ ಸುಂದರವಾದ ತರಗತಿ ಎಂಬ ಹೆಮ್ಮೆ ನಮಗಿತ್ತು. ಆದರೆ ಈ ವೀಡಿಯೋ ನೋಡಿ ತುಂಬಾ ಬೇಸರವಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇಂತಹವರನ್ನು ವಿದೇಶಕ್ಕೆ ತೆರಳಲು ಬಿಡಬೇಡಿ ಇಂತಹವರು ಹೊರದೇಶದಲ್ಲಿ ನಮ್ಮ ದೇಶಕ್ಕೆ ಅಪಖ್ಯಾತಿ ತರುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಈ ನಡೇ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.