ಮಗು ಮನೆ ಜವಾಬ್ದಾರಿ ನಿರ್ವಹಿಸುತ್ತಲೇ ಮೊದಲ ಯತ್ನದಲ್ಲೇ UGC NET exam ಪಾಸು ಮಾಡಿದ ನೀತು

Published : Jul 24, 2025, 11:41 AM ISTUpdated : Jul 24, 2025, 11:45 AM IST
24-year-old housewife cracks UGC NET exam in first attempt

ಸಾರಾಂಶ

ಇಲ್ಲೊಬ್ಬರು 24ರ ಹರೆಯದ ಗೃಹಿಣಿ ಮನೆ ನಿರ್ವಹಿಸುವ, ಮಗುವನ್ನು ಬೆಳೆಸುವ ಜವಾಬ್ದಾರಿಯ ಜೊತೆಗೆ ಯುಜಿಸಿ ನೆಟ್ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಪಾಸು ಮಾಡಿದ್ದಾರೆ. ಅವರ ಈ ಸಾಧನೆ ಈಗ ದೇಶದೆಲ್ಲೆಡೆ ಸುದ್ದಿಯಾಗುತ್ತಿದ್ದು, ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ.

ನೀಟ್ ಪರೀಕ್ಷೆ ಪಾಸು ಮಾಡುವುದಕ್ಕಾಗಿ ವಿದ್ಯಾರ್ಥಿಗಳು ಹಗಲು ರಾತ್ರಿಯೆನ್ನದೇ ಓದುತ್ತಾರೆ. ಕೋಚಿಂಗ್ ತೆಗೆದುಕೊಳ್ಳುತ್ತಾರೆ. ಮನೆ ಮಠ ಬಿಟ್ಟು ಹಾಸ್ಟೆಲ್ ಸೇರುತ್ತಾರೆ. ಆದರೂ ಕೆಲವರಿಗೆ ನೀಟ್ ಪರೀಕ್ಷೆ ಪಾಸು ಮಾಡಲಾಗದೇ ಕಷ್ಟ ಪಡುತ್ತಾರೆ. ಆದರೆ ಇಲ್ಲೊಬ್ಬರು 24ರ ಹರೆಯದ ಗೃಹಿಣಿ ಮನೆ ನಿರ್ವಹಿಸುವ, ಮಗುವನ್ನು ಬೆಳೆಸುವ ಜವಾಬ್ದಾರಿಯ ಜೊತೆಗೆ ಯುಜಿಸಿ ನೀಟ್ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಪಾಸು ಮಾಡಿದ್ದಾರೆ. ಅವರ ಈ ಸಾಧನೆ ಈಗ ದೇಶದೆಲ್ಲೆಡೆ ಸುದ್ದಿಯಾಗುತ್ತಿದ್ದು, ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ.

ಅಂದಹಾಗೆ ಬಿಹಾರದ ಮಾದೇಪುರ ಜಿಲ್ಲೆಯ ದೂರದ ಹಳ್ಳಿಯಾದ ರಾಮನಗರ ಮಹೇಶ್‌ನ ಎಂಬ ಊರಿನ ನಿವಾಸಿಯಾದ 24 ವರ್ಷದ ನೀತು ಕುಮಾರಿ ಎಂಬುವವರು ಈ ಸಾಧನೆ ಮಾಡಿದ ಗೃಹಿಣಿ. ಇವರು 2025ರ ಜೂನ್‌ನಲ್ಲಿ ನೀಟ್ ಯುಜಿಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸು ಮಾಡಿದ್ದಾರೆ. ಮದುವೆಯಾದ ನಂತರವೂ ಓದಬೇಕು ಉದ್ಯೋಗ ಪಡೆದು ಸ್ವಾಭಿಮಾನದಿಂದ ಬದುಕಬೇಕು, ಕುಟುಂಬಕ್ಕೆ ನೆರವಾಗಬೇಕು ಎಂದು ಬಯಸುವ ಅನೇಕ ಹೆಂಗೆಳೆಯರಿಗೆ ಈಗ ನೀತು ಕುಮಾರಿ ಸ್ಪೂರ್ತಿಯಾಗಿದ್ದಾರೆ.

ನೀತು ಕುಮಾರಿ ಹಿಂದಿ ವಿಷಯದಲ್ಲಿ 76.91 ಶೇಕಡಾ ಅಂಕಗಳನ್ನು ಗಳಿಸಿದ್ದಾರೆ. ಅವರು ಸಹಾಯಕ ಪ್ರಾಧ್ಯಾಪಕಿ, ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್ಎಫ್) ಮತ್ತು ಪಿಎಚ್‌ಡಿ ಅರ್ಹತೆಗಾಗಿ ಅರ್ಜಿ ಸಲ್ಲಿಸಿದ್ದರು. ಈಗ ಅವರು ತಮ್ಮ ಸಾಧನೆಯ ಬಗ್ಗೆ ಅಂಗ್ಲ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಮನೆ ಕೆಲಸ ಮಗುವಿನ ನಿರ್ವಹಣೆಯ ಜೊತೆ ಓದಿಗೆ ಸಮಯ ನಿಭಾಯಿಸಿದ್ದು ಹೇಗೆ?

ನಾನು ಪ್ರತಿದಿನ ನನ್ನ ಅಧ್ಯಯನದ ಸಮಯವನ್ನು ಮೂರು ಭಾಗಗಳಾಗಿ ವಿಭಾಗಿಸಿದ್ದೆ. ಬೆಳಗಿನ ಜಾವದ ಮನೆ ಕೆಲಸಗಳನ್ನು ಬೆಳಗ್ಗೆ 7 ಗಂಟೆಗೆ ಮುಗಿಸಿ ನಂತರ 9 ಗಂಟೆಯವರೆಗೆ ಅಧ್ಯಯನ ಮಾಡ್ತಿದೆ. ಇದಾದ ನಂತರ ಮಧ್ಯಾಹ್ನ ಊಟ ಮತ್ತು ಸ್ವಲ್ಪ ವಿಶ್ರಾಂತಿಯ ನಂತರ, ನಾನು ಮಧ್ಯಾಹ್ನ 1 ರಿಂದ ಸಂಜೆ 4 ರವರೆಗೆ ಮತ್ತೆ ಓದಿನಲ್ಲಿ ತೊಡಗುತ್ತಿದೆ. ನಂತರ ರಾತ್ರಿ ಎಲ್ಲಾ ಮನೆಕೆಲಸಗಳನ್ನು ಮುಗಿಸಿ ನನ್ನ ಮಗುವನ್ನು ಮಲಗಿಸಿದ ನಂತರ, ರಾತ್ರಿ 8 ರಿಂದ ರಾತ್ರಿ 10 ರವರೆಗೆ ಮತ್ತೆ ಅಧ್ಯಯನ ಮಾಡ್ತಿದೆ. ಹೀಗಾಗಿ ದಿನವೂ 6 ರಿಂದ 7 ಗಂಟೆಗಳ ಕಾಲ ಅಧ್ಯಯನ ಮಾಡಲು ಸಮಯ ಸಿಗುತ್ತಿತ್ತು.

ಯುಜಿಸಿ ನೀಟ್‌ ಪರೀಕ್ಷೆಗೆ ನೀವು ಅಧ್ಯಯನ ಮಾಡಿದ ಪುಸ್ತಕ ಯಾವುದು?

ನಾನು ಯಾವುದೇ ಪ್ರಮಾಣಿತ ಪುಸ್ತಕಗಳನ್ನು ಅವಲಂಬಿಸಿಲ್ಲ. ನನ್ನ ಶಿಕ್ಷಕರು ಒದಗಿಸಿದ ನೋಟ್ಸ್‌ ಮೇಲೆಯೇ ನಾನು ಸಂಪೂರ್ಣ ಗಮನಹರಿಸಿದೆ. ಶಿಕ್ಷಕರ ಉಪನ್ಯಾಸಗಳಿಂದ ಸಂಕ್ಷಿಪ್ತ ಟಿಪ್ಪಣಿಗಳನ್ನು ಸಿದ್ಧಪಡಿಸುತ್ತಿದ್ದೆ ಮತ್ತು ಅವುಗಳನ್ನು ನಿಯಮಿತವಾಗಿ ರಿವೈಸ್‌ ಮಾಡುತ್ತಿದ್ದೆ. ಅಧ್ಯಯನದಲ್ಲಿ ಸ್ಥಿರತೆ ಮುಖ್ಯವಾಗಿತ್ತು.

ಕೋಚಿಂಗ್ ಪಡೆದಿದ್ದೀರಾ?

ಹೌದು, ನಾನು ಒಂದು ಮೊಬೈಲ್ ಆಪ್ ಮೂಲಕ ಆನ್‌ಲೈನ್ ತರಗತಿಗಳಿಗೆ ಸೇರಿಕೊಂಡೆ. ಪೇಪರ್ 1 ಮತ್ತು ಪೇಪರ್ 2 ಗಾಗಿ, ನಾನು ಡಾ. ಲೋಕೇಶ್ ಬಾಲಿ ಸರ್ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದೆ. ಅವರ ಮಾರ್ಗದರ್ಶನ ನನ್ನ ಪರೀಕ್ಷಾ ತಯಾರಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

ಅತ್ತೆ ಮಾವನ ಜೊತೆ ವಾಸಿಸುತ್ತಾ ಅಧ್ಯಯನ ಮಾಡುವಾಗ ಏನಾದರೂ ಸವಾಲುಗಳಿತ್ತ?

ಹಳ್ಳಿಯಲ್ಲಿ ಅತ್ತೆ ಮಾವನ ಜೊತೆ ವಾಸಿಸುತ್ತಾ ಯುಜಿಸಿ ನೀಟ್‌ಗೆ ತಯಾರಿ ನಡೆಸುವುದು ಖಂಡಿತವಾಗಿಯೂ ಒಂದು ಸವಾಲಾಗಿತ್ತು. ಆದರೆ ಆ ಕಷ್ಟಗಳನ್ನು ನಾನು ಮೇಲೆ ಏರಲು ಬೇಕಾದ ಮೆಟ್ಟಿಲುಗಳಂತೆ ನೋಡಿದೆ. ಅವುಗಳನ್ನು ನಿವಾರಿಸಿಕೊಂಡು ಮುಂದೆ ಹೋಗುವುದು ನನ್ನ ಪ್ರಯಾಣದ ಒಂದು ಭಾಗವಾಯಿತು ಹಾಗೂ ಇದುವೇ ನನ್ನ ಯಶಸ್ಸಿನ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಈ ಕಷ್ಟಕರ ಪರೀಕ್ಷೆ ಪಾಸು ಮಾಡುವುದಕ್ಕೆ ನಿಮಗೆ ಸ್ಪೂರ್ತಿ ಏನು?

ನನ್ನ ಪತಿ ಸುಮಿತ್ ಠಾಕೂರ್ ಅವರ ಬೆಂಬಲ ಹಾಗೂ ನನ್ನ ತಾಯಿಯ ತಂದೆ (ನಾನಾ ಜಿ) ಅವರಿಂದ ನನಗೆ ದೊಡ್ಡ ಸ್ಫೂರ್ತಿ ಸಿಕ್ಕಿತು, ಅವರಿಬ್ಬರೂ ಯಾವಾಗಲೂ ನನ್ನನ್ನು ಬೆಂಬಲಿಸುತ್ತಿದ್ದರು ಮತ್ತು ನನ್ನ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟಿದ್ದರು. ಅವರ ಪ್ರೋತ್ಸಾಹವು ನನ್ನನ್ನು ಉನ್ನತ ಗುರಿ ಸಾಧಿಸಲು ಮತ್ತು ಎಂದಿಗೂ ಸೋಲದಂತೆ ಪ್ರೇರೇಪಿಸಿತು.

UGC NET ಗೆ ತಯಾರಿ ನಡೆಸುವುದು ಕಷ್ಟವಾಗಿತ್ತೇ?

ಹೌದು ಇದು ಖಂಡಿತವಾಗಿಯೂ ಕಷ್ಟವಾಗಿತ್ತು. ಆದರೆ ಅನುಕೂಲಕರ ವಿಚಾರ ಎಂದರೆ ನೀಟ್‌ನ ಪೇಪರ್ 2 ನಾವು ಸ್ನಾತಕೋತ್ತರದಲ್ಲಿ ಕಲಿತ ವಿಷಯಕ್ಕೆ ಹೊಂದಿಕೆಯಾಗುತ್ತದೆ, ಆದ್ದರಿಂದ ನಾನು ಎರಡನ್ನೂ ಒಟ್ಟಿಗೆ ಸಿದ್ಧಪಡಿಸಬಹುದಿತ್ತು ನಾನು ಡಿಸೆಂಬರ್‌ನಲ್ಲಿ ನನ್ನ ಮೊದಲ ವರ್ಷದ ಪಿಜಿ ಪರೀಕ್ಷೆಗೆ ಹಾಜರಾದೆ ಮತ್ತು ನಂತರ ಫೆಬ್ರವರಿಯಿಂದ ನೀಟ್ ಪರೀಕ್ಷೆಗೆ ತಯಾರಿ ನಡೆಸಿದೆ. ಪತ್ರಿಕೆ 1 ಜನರಲ್ ಆಗಿದ್ದರಿಂದ ನಾನು ಅದಕ್ಕೆ ಹೆಚ್ಚುವರಿ ಸಮಯ ಮೀಸಲಿಟ್ಟೆ.

ನಿಮ್ಮ ಯಶಸ್ಸಿನ ಮಂತ್ರ ಯಾವುದು?

ನನ್ನ ಮಂತ್ರ ಸರಳವಾಗಿದೆ: ನಿಮ್ಮ ಮೇಲೆ ನಿಮಗೆ ನಂಬಿಕೆ, ಶಿಸ್ತು ಮತ್ತು ಸ್ಥಿರವಾದ ಅಭ್ಯಾಸ. ಒಬ್ಬರ ತಪ್ಪುಗಳಿಂದ ಕಲಿಯುವುದು ಕೂಡ ಅಷ್ಟೇ ಮುಖ್ಯ. ನಾನು ನಿಜವಾಗಿಯೂ ಈ ಮಾತನ್ನು ನಂಬುತ್ತೇನೆ, ನೀವು ನಿಮ್ಮ ಮನಸ್ಸಿನಲ್ಲಿ ಸೋತಿದ್ದೀರಿ ಎಂದು ಭಾವಿಸಿದರೆ, ನೀವು ಸೋತಿದ್ದೀರಿ. ಆದರೆ ನೀವು ಗೆಲ್ಲಬಹುದು ಎಂದು ಭಾವಿಸಿದರೆ, ನೀವು ಗೆಲ್ಲುತ್ತೀರಿ.

ಮೊದಲ ಬಾರಿಗೆ UGC NET ಬರೆಯುವವರಿಗೆ ನಿಮ್ಮ ಸಲಹೆ ಏನು?

ಮೊದಲನೆಯದಾಗಿ, ನಿಮ್ಮ ಮೇಲೆ ನೀವು ನಂಬಿಕೆ ಇಡಿ. ಈ ಪರೀಕ್ಷೆಯಲ್ಲಿ ನೀವು ಉತ್ತೀರ್ಣರಾಗಬಹುದು ಎಂಬ ವಿಶ್ವಾಸ ಹೊಂದಿರಿ. ಹಲವು ಪುಸ್ತಕಗಳ ಮಧ್ಯೆ ಓಡುವುದನ್ನು ನಿಲ್ಲಿಸಿ. ಒಬ್ಬ ಉತ್ತಮ ಶಿಕ್ಷಕ ಅಥವಾ ಮಾರ್ಗದರ್ಶಿಯನ್ನು ಆರಿಸಿ ಅವರ ಸಲಹೆಗಳನ್ನು ಪಾಲಿಸಿ, ನಿಮ್ಮ ಪಠ್ಯಕ್ರಮದ ಬಗ್ಗೆ ಸ್ನೇಹ ಬೆಳೆಸಿಕೊಳ್ಳಿ ಮತ್ತು ಕನಿಷ್ಠ ಐದು ವರ್ಷಗಳ ಹಿಂದಿನ ವರ್ಗಳ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ನಡೆಸಿ. ಸ್ಥಿರವಾದ ಪ್ರಯತ್ನವು ಅತ್ಯಂತ ಮೂರ್ಖನನ್ನೂ ಪ್ರತಿಭಾವಂತನಾಗಿ ಮಾಡುತ್ತದೆ.

ಮುಂದಿನ ಪ್ಲಾನ್ ಏನು?

ನಾನು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗುವ ಆಸೆ ಹೊಂದಿದ್ದೇನೆ. ಸಾಹಿತ್ಯ ಮತ್ತು ಸಮಾಜಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆಯಲು ಬಯಸುತ್ತೇನೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ