
ದೊಡ್ಡವರಾದ್ಮೇಲೆ ಏನಾಗ್ತೀರಾ ಅಂತ ಯಾವುದೇ ಮಕ್ಕಳನ್ನು ಕೇಳಿ, ಇಂಜಿನಿಯರ್ (Engineer), ಡಾಕ್ಟರ್ (Doctor) ಎನ್ನುವ ವೃತ್ತಿಯೇ ಕೇಳಿ ಬರುತ್ತೆ. ಒಂದ್ವೇಳೆ ಮಕ್ಕಳು ಬೇರೆ ವೃತ್ತಿ ಹೆಸರು ಹೇಳಿದ್ರೂ ಪಾಲಕರು ಅವ್ರನ್ನು ಬದಲಾಯಿಸ್ತಾರೆ. ಇಂಜಿನಿಯರ್ ಓದುವ ಮಕ್ಕಳ ಸಂಖ್ಯೆ ಮಿತಿ ಮೀರಿದೆ. ಒಂದೇ ಕ್ಷೇತ್ರದಲ್ಲಿ ಜನಸಂಖ್ಯಾ ಸ್ಪೋಟವಾಗ್ತಿದೆ. ಹಾಗಾಗಿಯೇ ಇಂಜಿನಿಯರ್ ಓದಿದ ಅದೆಷ್ಟೋ ಯುವಕರಿಗೆ ಕೆಲ್ಸ ಇಲ್ಲ. ಎಷ್ಟೇ ಇಂಟರ್ವ್ಯೂ ನೀಡಿದ್ರೂ ಸೂಕ್ತ ಜಾಬ್ ಸಿಗ್ತಿಲ್ಲ. ಮನೆಯಲ್ಲಿ ಇರೋ ಒಂದೋ ಎರಡೋ ಮಕ್ಕಳೂ ಇಂಜಿನಿಯರ್, ಡಾಕ್ಟರ್ ಆದ್ರೆ ಉಳಿದ ಕೆಲ್ಸ ಮಾಡೋರು ಯಾರು? ಬಾತ್ ರೂಮಿನ ನಲ್ಲಿ ಹಾಳಾಗಿದೆ, ಮನೆ ಬಾಗಿಲು ಸರಿಯಾಗಿ ಹಾಕೋಕೆ ಬರ್ತಿಲ್ಲ, ಕರೆಂಟ್ ಸ್ವಿಚ್ ವರ್ಕ್ ಆಗ್ತಿಲ್ಲ ಅಂದ್ರೆ ಸರಿ ಮಾಡೋರು ಯಾರು? ಇದಕ್ಕೆಲ್ಲ ನಾವು ಪ್ಲಂಬರ್, ಕಾರ್ಪೆಂಟರ್, ಎಲೆಕ್ಟ್ರಿಷಿನ್ ಕರೀಬೇಕು.
ಆ ವೃತ್ತಿ ಮಾಡೋರೇ ಇಲ್ಲ ಎಂದಾಗ ಸಹಜವಾಗಿಯೇ ಅದಕ್ಕೆ ಡಿಮ್ಯಾಂಡ್ ಹೆಚ್ಚಾಗುತ್ತೆ. ಸಂಬಳ ಕೂಡ ಕೈತುಂಬ ಸಿಗುತ್ತೆ. ಅಮೆರಿಕಾಕ್ಕೆ ಈ ವಾಸ್ತವ ಅರಿವಾಗಿದೆ. ಮಕ್ಕಳಿಗೆ ಬೇರೆ ಸ್ಕಿಲ್ ಕಲಿಸುವ ಪ್ರಯತ್ನ ಶುರು ಮಾಡಿದೆ. ಅಮೆರಿಕಾದಲ್ಲಿ ಅನೇಕ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಈ ಸ್ಕಿಲ್ ಕಲಿಯಲು ಶುರು ಮಾಡಿದ್ದಾರೆ. ಪ್ಲಂಬಿಂಗ್ (Plumbing), ಕಾರ್ಪೆಂಟರ್, ಎಲೆಕ್ಟ್ರಿಷಿಯನ್ (Electrician) ಕೆಲ್ಸವನ್ನು ಕಲಿಯುತ್ತಿದ್ದಾರೆ.
ಎಂಜಿನಿಯರ್ ಅಥವಾ ಸಾಫ್ಟ್ ವೇರ್ ಎಂಜಿನಿಯರ್ ಮಾಡಿದೋರು ಇದ್ದೇ ಇರ್ತಾರೆ. ಒಂದ್ವೇಳೆ ಇಲ್ಲ ಅಂದ್ರೆ ಆ ಕೆಲ್ಸವನ್ನು ಟೆಕ್ನಾಲಜಿ ಮಾಡುತ್ತೆ. ಆದ್ರೆ ಬಾತ್ ರೂಮ್ ಲೀಕ್ ಆದಾಗ ಅಲ್ಲಿಗೆ ಎಐ ಬರೋದಿಲ್ಲ. ಪ್ಲಂಬರ್ ಬರ್ಬೇಕು. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಈ ಸ್ಕಿಲ್ ಕೆಲಸಗಾರರು ಒಳ್ಳೆ ಸಂಪಾದನೆ ಮಾಡ್ತಿದ್ದಾರೆ. ಅಲ್ಲದೆ ಈ ಕೆಲ್ಸ ಮಾಡೋರಿಗೆ ಒಳ್ಳೆ ರಿಸ್ಪೆಕ್ಟ್ ಕೂಡ ಸಿಗ್ತಿದೆ. ಇನ್ನು ಅರ್ಬನ್ ನಂತ ಅಪ್ಲಿಕೇಷನ್ ಕಂಪನಿಗಳು ವಿಶೇಷ ಸ್ಕಿಲ್ ಹೊಂದಿರುವ ಜನರಿಗೆ ಕೆಲ್ಸ ನೀಡ್ತಿದೆ. ಅಮೆರಿಕಾದಲ್ಲಿ ವಿದ್ಯಾರ್ಥಿಗಳು ಈ ಆಪ್ ಗಳನ್ನು ಬಳಸಿಕೊಂಡು, ವೀಕೆಂಡ್ ನಲ್ಲಿ ಕೆಲ್ಸ ಮಾಡ್ತಿದ್ದಾರೆ.
ಬರೀ ಅಮೆರಿಕಾದಲ್ಲಿ ಮಾತ್ರವಲ್ಲ ಭಾರತದಲ್ಲೂ ಈ ವೃತ್ತಪರರ ಸಂಖ್ಯೆ ಕಡಿಮೆಯಾಗಿದೆ. ಇಂಜಿನಿಯರ್ ಸಿಕ್ಕಿದಷ್ಟು ಸುಲಭವಾಗಿ ಪ್ಲಂಬರ್, ಕಾರ್ಪೆಂಟರ್ ಸಿಗ್ತಿಲ್ಲ. ಅದಕ್ಕೆ ಭಾರತೀಯರ ಮನೋಭಾವ ಮುಖ್ಯ ಕಾರಣವಾಗಿದೆ. ಇಂಜಿನಿಯರ್ ಮಾತ್ರ ಕೆಲ್ಸಗಾರ ಎನ್ನುವ ದೃಷ್ಟಿಯಲ್ಲಿ ಇಲ್ಲಿನ ಜನ ನೋಡ್ತಿದ್ದಾರೆ. ನಮ್ಮ ದೃಷ್ಟಿಕೋನ ಬದಲಾಗ್ದೆ ಹೋದ್ರೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅಗತ್ಯ, ನಿತ್ಯದ ಕೆಲಸಕ್ಕೆ ಜನ ಸಿಗದೆ ಹೋಗ್ಬಹುದು.
ಅಧ್ಯಯನ ಒಂದರ ಪ್ರಕಾರ, ದಶಕಗಳಿಂದ, ಸಮಾಜ ವೈಟ್ ಕಾಲರ್ ಉದ್ಯೋಗವನ್ನು ಮಾತ್ರ ಉನ್ನತವಾಗಿ ನೋಡ್ತಿದೆ. ಕೌಶಲ್ಯಪೂರ್ಣ ವ್ಯಾಪಾರಗಳನ್ನು ಹೆಚ್ಚಾಗಿ ಎರಡನೇ ಹಂತದ ಕೆಲಸವೆಂದು ಪರಿಗಣಿಸಲಾಗ್ತಿದೆ. ಆದರೆ 2035 ರ ಹೊತ್ತಿಗೆ ಈ ಆಲೋಚನೆ ಬದಲಾಗಲಿದೆ. ಪ್ಲಂಬಿಂಗ್, ಮರಗೆಲಸ, ವಿದ್ಯುತ್ ಕೆಲಸ, ವೆಲ್ಡಿಂಗ್ ಮತ್ತು HVAC ನಿರ್ವಹಣೆಯಂತಹ ಕೌಶಲ್ಯಪೂರ್ಣ ವ್ಯಾಪಾರಗಳು ಬೃಹತ್ ಪುನರುಜ್ಜೀವನಕ್ಕೆ ಒಳಗಾಗಲಿವೆ. ಸದ್ಯ ಇರುವ ಈ ವ್ಯಾಪಾರಸ್ಥರಿಗೆ ವಯಸ್ಸಾಗಲಿದೆ. ಈ ಕೆಲ್ಸ ಮಾಡಲು ಯುವಕರ ಅಗತ್ಯ ಬೀಳುತ್ತದೆ. ಭಾರತದಲ್ಲಿ ಸದ್ಯ ಪ್ರಮಾಣೀಕೃತ ಎಲೆಕ್ಟ್ರಿಷಿಯನ್ ಅಥವಾ ಪ್ಲಂಬರ್ ಮೆಟ್ರೋ ನಗರಗಳಲ್ಲಿ ತಿಂಗಳಿಗೆ 40,000 ರಿಂದ 75,000 ಸಾವಿರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. 2030 ರ ವೇಳೆಗೆ ಬೇಡಿಕೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಯುಎಸ್ನಲ್ಲಿ ಅನೇಕ ವ್ಯಾಪಾರಿಗಳು ಈಗ 70 ಸಾವಿರ ಪ್ಲಸ್ ಸಂಭಾವನೆಯನ್ನು ಆರಂಭಿಕ ಪ್ಯಾಕೇಜ್ ಆಗಿ ನೀಡಲಾಗ್ತಿದೆ. ಹೆಚ್ಚುವರಿ ಸಮಯ ಮತ್ತು ಸ್ವಯಂ ಉದ್ಯೋಗಕ್ಕೆ ಇಲ್ಲಿ ಅವಕಾಶವಿದೆ.