ಬೆಂಗಳೂರು ಉತ್ತರ ವಿವಿ ಪ್ರಶ್ನೆಪತ್ರಿಕೆ ಸೋರಿಕೆ: ಪರೀಕ್ಷೆ ರದ್ದು

By Kannadaprabha News  |  First Published May 31, 2022, 5:29 AM IST

*  ಕೊನೆ ಕ್ಷಣದಲ್ಲಿ ರದ್ದಾದ ಪರೀಕ್ಷೆ
*  ಬರೀಗೈಯಲ್ಲಿ ವಾಪಸ್ಸಾದ ವಿದ್ಯಾರ್ಥಿಗಳು
*  ಪೊಲೀಸರಿಗೆ ದೂರು
 


ಚಿಕ್ಕಬಳ್ಳಾಪುರ(ಮೇ.31): ರಾಜ್ಯಾದ್ಯಂತ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲೇ ಇದೇ ಮೊದಲ ಬಾರಿಗೆ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಬಿ.ಕಾಂ ಪದವಿ ಪರೀಕ್ಷೆಯ ಗಣಿತ ವಿಷಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ವಾಟ್ಸ್‌ಆಪ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಹರಿದಾಡಿದೆ.

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯವು ಹೊಸ ಶಿಕ್ಷಣ ನೀತಿಯ ಪಠ್ಯಕ್ರಮದಂತೆ ಸೋಮವಾರ ನಡೆಯಬೇಕಿದ್ದ ಮೊದಲ ವರ್ಷದ ಬಿ.ಕಾಂ ಪದವಿ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಲ್‌ ಆಫ್‌ ಮಾರ್ಕೆಟಿಂಗ್‌ ಹಾಗೂ ಬಿಸಿಎ ವಿದ್ಯಾರ್ಥಿಗಳಿಗೆ ಬಿಸಿನೆಸ್‌ ಮ್ಯಾಥ್ಸ್‌ ಎರಡು ಪ್ರಶ್ನೆ ಪತ್ರಿಕೆಗಳು ಸೋರಿಕೆಗೊಂಡಿವೆಯೆಂದು ತಿಳಿದು ಬಂದಿದೆ.

Tap to resize

Latest Videos

BC Nagesh: ನಾಡಗೀತೆ ವಿವಾದ: ಚುಂಚಶ್ರೀಗೆ ನಾಗೇಶ್‌ ವಿವರಣೆ!

ಪರೀಕ್ಷೆ ರದ್ದು:

ಹೀಗಾಗಿ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಯ ಸುಮಾರು 400 ಕ್ಕೂ ಹೆಚ್ಚು ಪದವಿ ಕಾಲೇಜುಗಳಲ್ಲಿ ಸೋಮವಾರ ನಡೆಯಬೇಕಿದ್ದ ಬಿ.ಕಾಂ ಪರೀಕ್ಷೆಯನ್ನು ವಿವಿ ಕೊನೆ ಕ್ಷಣದಲ್ಲಿ ರದ್ದುಗೊಳಿಸಿದ ಪರಿಣಾಮ ಪರೀಕ್ಷೆಯನ್ನು ಬರೆಯಲು ಉತ್ಸಾಹದೊಂದಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ನಿರಾಸೆಯಿಂದ ಹಿಂತಿರುಗಿದರು.

ರಾಜ್ಯದಲ್ಲಿ ಕೆಲ ವಿಶ್ವ ವಿದ್ಯಾಲಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದರ ಪರಿಣಾಮ ಇದೇ ಮೊದಲ ಬಾರಿ ಬೆಂಗಳೂರು ಉತ್ತರ ವಿವಿಯು ಭದ್ರತೆ ದೃಷ್ಟಿಯಿಂದ ಯುಸಿಎಂಎಸ್‌ನಲ್ಲಿ ವಾಣಿಜ್ಯ ಪದವಿ ಪರೀಕ್ಷೆಯನ್ನು ನಡೆಸಲು ತಯಾರಿ ನಡೆಸಿಕೊಂಡಿತ್ತು. ಆದರೆ ಇದೇ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ಸಾಕಷ್ಟುಚರ್ಚೆ ಹಾಗೂ ಅನುಮಾನಕ್ಕೆ ಕಾರಣವಾಗಿದ್ದು ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ವಿವಿಯಲ್ಲಿ ಕೆಲಸ ಮಾಡುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಥವ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದವರ ಕೈವಾಡ ಇರುವ ಶಂಕೆ ಇದೆ ಎನ್ನಲಾಗುತ್ತಿದೆ.

ಜಾಲತಾಣಗಳಲ್ಲಿ ಹರಿದಾಡಿತು:

ಸೋಮವಾರ ಬೆಳಗ್ಗೆ 8 ಗಂಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ವಾಟ್ಸ್‌ಆಪ್‌ನಲ್ಲಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಈ ವಿಚಾರವನ್ನು ವಿವಿ ರಿಜಿಸ್ಟ್ರಾರ್‌ ನನ್ನ ಗಮನಕ್ಕೆ ತಂದ ತಕ್ಷಣ ನಾವು ಪರೀಕ್ಷೆ ಮುಂದೂಡುವ ನಿರ್ಧಾರ ಕೈಗೊಂಡಿದ್ದೇವೆ. ಮುಂದೆ ಪರೀಕ್ಷೆ ನಡೆಸುವ ದಿನಾಂಕವನ್ನು ಪ್ರಕಟಿಸುತ್ತೇವೆಂದರು. ಪ್ರಶ್ನೆ ಪತ್ರಿಕೆಗಳಿಗೆ ಸಾಕಷ್ಟುಭದ್ರತೆ ಮಾಡಿದ್ದವು. ಆದರೂ ಹೇಗೆ ಸೋರಿಕೆ ಆಯಿತು ಎನ್ನುವುದು ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆಯೆಂದು ವಿವಿ ಉಪ ಕುಲಪತಿ ಪ್ರೊ.ನಿರಂಜನ ವಾನಳ್ಳಿ ತಿಳಿಸಿದರು.

ಪೊಲೀಸರಿಗೆ ದೂರು

ಬೆಂಗಳೂರು ಉತ್ತರ ವಿವಿಯ ವಾಣಿಜ್ಯ ಪದವಿ ವಿಭಾಗದ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ಬಗ್ಗೆ ತನಿಖೆ ನಡೆಸುವಂತೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆಯೆಂದು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಕನ್ನಡಪ್ರಭಗೆ ತಿಳಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ವಿವಿ ಗಂಭೀರವಾಗಿ ಪರಿಗಣಿಸಿದೆ. ನನ್ನ ಹೆಸರಿಗೆ ಅಥವಾ ವಿವಿಗೆ ಕಳಂಕ ತರಲು ಇದರ ಹಿಂದೆ ಕೆಲವರ ಕೋಚೋದ್ಯ ಇರಬಹುದು. ರಾಜ್ಯದಲ್ಲಿ ಇಷ್ಟೇಲ್ಲಾ ಪರೀಕ್ಷೆಗಳ ಬಗ್ಗೆ ರದ್ದಾಂತ ನಡೆಯುತ್ತಿದ್ದರೂ ಮತ್ತೆ ಪ್ರಶ್ನೆ ಪತ್ರಿಕೆಗಳ ಸೋರಿಕೆ ಮಾಡುತ್ತಾರೆ ಅಂದರೆ ಇದರ ಹಿಂದೆ ದುರುದ್ದೇಶ ಇದೆಯೆಂದು ಅವರು ತಿಳಿಸಿದರು.

ವಿವಿ ಪ್ರಶ್ನೆಪತ್ರಿಕೆ ಸೋರಿಕೆಗೆ ಜಾಮೀನಿಲ್ಲ?

ಬೆಂಗಳೂರು: ವಿಶ್ವವಿದ್ಯಾಲಯಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ಜಾಮೀನು ರಹಿತ ಅಪರಾಧವನ್ನಾಗಿ ಮಾಡಲು ಕಠಿಣ ಕಾನೂನು ತಿದ್ದುಪಡಿ ತರಲಿದ್ದು, ತಪ್ಪಿತಸ್ಥರಿಗೆ ಗಂಭೀರ ರೀತಿಯ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಶ್ನೆ ಪತ್ರಿಕೆ ಸೋರಿಕೆಯ ಘಟನೆಗಳಿಗೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುತ್ತದೆ. ಜಾಮೀನು ರಹಿತ ಅಪರಾಧವನ್ನಾಗಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಇನ್ನು, ಸಿಇಟಿ ಪರೀಕ್ಷೆಯಲ್ಲಿ ನೀಟ್‌ ಮಾದರಿಯ ಮಾರ್ಗಸೂಚಿ ಇರಲಿದೆ. ಅದನ್ನು ಅನುಸರಿಸಲಾಗುವುದು ಎಂದು ತಿಳಿಸಿದರು.

ಪಠ್ಯ ಪರಿಷ್ಕರಣೆ ವಿವಾದ: ಅನುಮತಿ ಹಿಂಪಡೆದ ಇನ್ನೊಬ್ಬ ಸಾಹಿತಿ!

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಣದ ವಿಚಾರವಾಗಿ ಅವ್ಯವಹಾರ ಆಗಿಲ್ಲ. ಸಿಂಡಿಕೇಟ್‌ ಒಪ್ಪಿಗೆ ಪಡೆದೇ ಹಣ ಬಿಡುಗಡೆ ಮಾಡಲಾಗಿದೆ. ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ವಿಶ್ವವಿದ್ಯಾಲಯ ಬಳಕೆಗಾಗಿಯೇ ಹಣ ಬಿಡುಗಡೆ ಮಾಡಲಾಗಿದೆ. ಇದನ್ನು ರಾಜಕೀಯ ಮಾಡಬಾರದು. ಯಾವುದೇ ಗೊಂದಲವಾಗಲಿ, ಸಮಸ್ಯೆಯಾಗಲಿ ಇಲ್ಲ ಎಂದು ಹೇಳಿದ ಅವರು, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ವಿಷಯದಲ್ಲಿ ಮುಕ್ತ ತನಿಖೆ ನಡೆಯುತ್ತಿದೆ. ನಮ್ಮ ಸರ್ಕಾರದಲ್ಲಿ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಯಾವುದಕ್ಕೂ ರಕ್ಷಣೆ ಕೊಡುವ ಪ್ರಶ್ನೆ ಇಲ್ಲ. ಮುಕ್ತ ಮತ್ತು ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎಂದರು.

ಇದೇ ವೇಳೆ ಆರ್‌ಎಸ್‌ಎಸ್‌ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸುತ್ತೇವೆ. ಇದು ಅವರಿಗೆ ಶೋಭೆ ತರುವುದಿಲ್ಲ. ರಾಜ್ಯದ ಜನರಿಗೆ ಅವಮಾನ ಮಾಡಿದ್ದು, ಆರ್‌ಎಸ್‌ಎಸ್‌ ಕುರಿತು ಮನಬಂದಂತೆ ಹೇಳಿಕೆ ನೀಡಬಾರದು ಎಂದು ಕಿಡಿಕಾರಿದರು.
 

click me!