ನೆರೆಯ ಮಹಾರಾಷ್ಟ್ರದ ಸರ್ಕಾರಿ 4ನೇ ತರಗತಿ ಪಠ್ಯದಲ್ಲಿ ಬೆಳವಡಿಯ ರಾಣಿ ಮಲ್ಲಮ್ಮನ ಕುರಿತು ಮಕ್ಕಳಿಗೆ ಪಠ್ಯ ಬೋಧಿಸಲಾಗುತ್ತಿದೆ.
ಶ್ರೀಶೈಲ ಮಠದ
ಬೆಳಗಾವಿ(ಜು.14): ಕನ್ನಡನಾಡಿನ ವೀರವನಿತೆ ಬೆಳವಡಿ ರಾಣಿ ಮಲ್ಲಮ್ಮನ ಕುರಿತಾಗಿ ಮಹಾರಾಷ್ಟ್ರದ ಸರ್ಕಾರಿ ನಾಲ್ಕನೇ ತರಗತಿ ಪಠ್ಯದಲ್ಲಿ ಪ್ರಕಟವಾಗಿದೆ. ಆದರೆ, ಮಲ್ಲಮ್ಮನ ಇತಿಹಾಸ ಸಾರುವ ಪಠ್ಯದ ಬದಲಾಗಿ, ಶಿವಾಜಿ ಮಹಾರಾಜ ಮಹಿಳೆಯರೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿಗೆ ಬೆಳವಡಿ ಮಲ್ಲಮ್ಮಳ ಉದಾಹರಣೆ ನೀಡಿದ್ದಾರೆ. ನೆರೆಯ ಮಹಾರಾಷ್ಟ್ರದ ಸರ್ಕಾರಿ 4ನೇ ತರಗತಿ ಪಠ್ಯದಲ್ಲಿ ಬೆಳವಡಿಯ ರಾಣಿ ಮಲ್ಲಮ್ಮನ ಕುರಿತು ಮಕ್ಕಳಿಗೆ ಪಠ್ಯ ಬೋಧಿಸಲಾಗುತ್ತಿದೆ. ಮಹಾರಾಷ್ಟ್ರ ರಾಜ್ಯ ಬೋರ್ಡ್ ವತಿಯಿಂದ ಪ್ರಕಟಿಸಲಾದ ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಇಂಗ್ಲಿಷ್ ಭಾಗ-2, ಅಧ್ಯಾಯ 18ರಲ್ಲಿ ಬೆಳವಡಿ ರಾಣಿ ಮಲ್ಲಮ್ಮನ ಬಗ್ಗೆ ತಿಳಿಸಲಾಗಿದೆ.
ಏನಿದೆ ತರಗತಿಯಲ್ಲಿ?:
ಮಹಾರಾಷ್ಟ್ರ ಸರ್ಕಾರಿ ಪ್ರಾಥಮಿಕ ಶಾಲೆ 4ನೇ ತರಗತಿ ಪಠ್ಯದಲ್ಲಿ ಶಿವಾಜಿ ಮಹಾರಾಜರ ಕುರಿತಾಗಿ ‘ಮ್ಯಾನೇಜ್‌ಮೆಂಟ್ ಆಫ್ ದಿ ವೆಲ್‌ಫೇರ್ ಸ್ಟೇಟ್ ಆಫ್ ಸ್ವರಾಜ್’ ಎಂಬ ಪಠ್ಯವನ್ನು ಅಳವಡಿಸಲಾಗಿದೆ. ಅದರಲ್ಲಿ ಶಿವಾಜಿ ಮಹಾರಾಜರ ಸಾಹಸ, ಇತಿಹಾಸ, ಆಡಳಿತ ವೈಖರಿ ಮತ್ತು ನಡವಳಿಕೆಯ ಬಗ್ಗೆ ವಿವರಿಸಲಾಗಿದೆ. ಈ ವೇಳೆ ಶಿವಾಜಿಯು ಮಹಿಳೆಯರಿಗೆ ಗೌರವ ಆದರವಾಗಿ ಮರ್ಯಾದೆ ನೀಡುತ್ತಿದ್ದರು ಎನ್ನುವುದನ್ನು ಬೆಳವಡಿ ಮಲ್ಲಮ್ಮನೊಂದಿಗೆ ನಡೆದುಕೊಂಡ ರೀತಿಯನ್ನು ಉಲ್ಲೇಖಿಸಲಾಗಿದೆ.
1500 ಮಾದರಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ ನಾಗೇಶ್
ಬೆಳವಡಿಯ ಕೋಟೆಗೆ ಮರಾಠಾ ಸೇನೆಯು ಮುನ್ನುಗ್ಗಿ ಮಲ್ಲಮ್ಮಳ ಸೇನೆಯನ್ನು ಸೋಲಿಸುತ್ತದೆ. ಆದರೆ, ಮಲ್ಲಮ್ಮಳ ಧೈರ್ಯ, ಸಾಹಸ, ಶೌರ್ಯವನ್ನು ಶಿವಾಜಿ ಮಹಾರಾಜ ಮೆಚ್ಚುತ್ತಾನೆ. ಅದಕ್ಕಾಗಿ ಮಲ್ಲಮ್ಮನ ಸಹೋದರಿಯನ್ನು ತನ್ನ ಅರಮೆಗೆ ಶಿವಾಜಿ ಕರೆಸಿಕೊಂಡು ಗೌರವಾದರ ಬಗ್ಗೆ ನೀಡಿ ಸನ್ಮಾನಿಸುತ್ತಾನೆ. ಮಾತ್ರವಲ್ಲ, ಬೆಳವಡಿಯ ಕೋಟೆಗೆ ಭದ್ರತೆಯೊಂದಿಗೆ ಮರಳಿ ಕಳುಹಿಸುತ್ತಾನೆ. ಜತೆಗೆ ಮಲ್ಲಮ್ಮನ ಸಹೋದರಿಗೆ ಸಾವಿತ್ರಿ ಎಂಬ ಬಿರುದನ್ನು ನೀಡುತ್ತಾನೆ ಎಂದು ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.
ಮಾತ್ರವಲ್ಲ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಹತ್ತಿರ ಇರುವ ಯಾದವಾಡದಲ್ಲಿ ಮಲ್ಲಮ್ಮನ ಸಾಹಸ, ಶೌರ್ಯವನ್ನು ಬಿಂಬಿಸುವ ವೀರಗಲ್ಲುಗಳಿವೆ. ಈ ವೀರುಗಲ್ಲುಗಳ ಫೋಟೊಗಳನ್ನು ಕೂಡ ಮಹಾರಾಷ್ಟ್ರ ಸರ್ಕಾರ ಈ ಪಠ್ಯದಲ್ಲಿ ಅಳವಡಿಸಿ, ಮಕ್ಕಳಿಗೆ ಬೋಧಿಸುತ್ತಿರುವುದು ಕರ್ನಾಟಕದ ಹೆಮ್ಮೆಯೇ ಸರಿ.
ಕರ್ನಾಟಕದಲ್ಲಿಯೇ ಇಲ್ಲ:
ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆಯ ವಾದ ವಿವಾದಗಳು ನಡೆದಿವೆ. ಇದರ ನಡುವೆಯೇ ಇಂತಹ ಧೀರ ಮಹಿಳೆಯ ಪಾಠವನ್ನು ಸೇರಿಸಬಹುದಿತ್ತು ಎಂದು ಇತಿಹಾಸಕಾರರು ವಾದಿಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕೊನೆಪಕ್ಷ ಶಿವಾಜಿ ಮಹಾರಾಜರ ಕುರಿತಾದ ಪಠ್ಯದಲ್ಲಿಯಾದರೂ ಬೆಳವಡಿ ಮಲ್ಲಮ್ಮಳ ಕುರಿತು ಉಲ್ಲೇಖ ಮಾಡಿದ್ದಾರೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಯಾವುದನ್ನೂ ಮಾಡಿಲ್ಲ ಎಂಬ ನೋವು ಇವರದ್ದು. ಕಿತ್ತೂರು ರಾಣಿ ಚನ್ನಮ್ಮನಿಗೆ ಸಿಕ್ಕ ಸ್ಥಾನ ಬೆಳವಡಿ ರಾಣಿ ಮಲ್ಲಮ್ಮನಿಗೆ ಸಿಗಬೇಕು ಎಂದು ಬೆಳವಡಿ ಮಾತ್ರವಲ, ಇತಿಹಾಸಕಾರರ ಒತ್ತಾಯವೂ ಇದೆ. ಇತ್ತೀಚೆಗಷ್ಟೇ ಬೆಳವಡಿ ಗ್ರಾಮಸ್ಥರು ಬೆಳವಡಿ ರಾಣಿ ಮಲ್ಲಮ್ಮನ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆಯೂ ಒತ್ತಾಯಿಸಿ, ಬೆಳವಡಿ ಬಂದ್‌ಗೂ ಕರೆ ಕೊಟ್ಟಿದ್ದರು. ಅಲ್ಲದೇ, ಹಲವಾರು ಸಂಘಟನೆಗಳು ಕೂಡ ಈ ಬಗ್ಗೆ ಧ್ವನಿ ಎತ್ತಿವೆ ನಿಜ. ಆದರೆ, ಮಲ್ಲಮ್ಮನ ನೈಜ ಇತಿಹಾಸವನ್ನು ಕನ್ನಡ ನಾಡಿನಲ್ಲೇ ಪ್ರಚಾರಪಡಿಸದಿರುವುದು ದುರಂತದ ಸಂಗತಿ.
ಬೆಳವಡಿ ಅಭಿವೃದ್ಧಿ ಪಾಧಿಕಾರ ರಚನೆಯಾಬೇಕು. ಪಠ್ಯ ಪುಸ್ತಕದಲ್ಲಿ ರಾಣಿ ಮಲ್ಲಮ್ಮನ ಪಾಠ ಅಳವಡಿಸಬೇಕು. ಇವಲ್ಲದೆ ಬೆಳವಡಿ ರಾಣಿ ಮಲ್ಲಮ್ಮನ ಅಧ್ಯಯನಪೀಠ ಸ್ಥಾಪಿಸುವ ಕುರಿತು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಕಳುಹಿಸಿದ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ 3-4 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಈ ಪೀಠ ಕೂಡ ಸ್ಥಾಪನೆಯಾಗಬೇಕು ಅಂತ ಬೆಳಗಾವಿ ಸಾಹಿತಿ ಯ.ರು. ಪಾಟೀಲ ತಿಳಿಸಿದ್ದಾರೆ.