* ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಶಿಕ್ಷಣ ಸಚಿವ ನಾಗೇಶ್
* ಈ ವರ್ಷ ಶಾಲಾ ಮಕ್ಕಳಿಗೆ ಹಾಜರಾತಿ ಕಡ್ಡಾಯ ಇಲ್ಲ
* ಪಿಯುಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಿಲ್ಲ
ಬೆಂಗಳೂರು, (ಜ.27): ಈ ವರ್ಷ ಶಾಲಾ(School) ಮಕ್ಕಳಿಗೆ (Students Attendance) ಹಾಜರಾತಿ ಕಡ್ಡಾಯ ಇಲ್ಲ ಹಾಗೂ ಯಾವ ಮಕ್ಕಳಿಗೂ ಶಾಲೆಗೆ ಬರಲು ಬಲವಂತ ಇಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (BC Nagesh) ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಇಂದು(ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಮಕ್ಕಳಿಗೆ ಹಾಜರಾತಿ ಕಡ್ಡಾಯ ಇಲ್ಲ. ಪರೀಕ್ಷೆಗೂ 75% ಹಾಜರಾತಿ ಕಡ್ಡಾಯ ಮಾಡುವುದಿಲ್ಲ. ಎಸ್‌ಎಸ್‌ಎಲ್ ಮತ್ತು ಪಿಯುಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
Covid 3rd Wave: ಜ.31 ರಿಂದ ಶಾಲೆ ಪುನಾರಂಭ: ಸಚಿವ ನಾಗೇಶ್ ಹೇಳಿದ್ದಿಷ್ಟು
ಇನ್ನು ಬೆಂಗಳೂರಿನಲ್ಲಿ 1 ರಿಂದ 9 ನೇ ತರಗತಿಯ ಬಗ್ಗೆ ತಜ್ಞರ ಸಲಹೆ ಮೇರೆಗೆ ಶಾಲೆ ಆರಂಭದ ಕುರಿತು ನಿರ್ಧಾರ ಮಾಡುತ್ತೇವೆ. ತಜ್ಞರು ಒಪ್ಪಿಗೆ ನೀಡಿದರೆ ಸೋಮವಾರದಿಂದ ಶಾಲೆ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.
ಒಂದರಿಂದ ಒಂಬತ್ತನೆ ತರಗತಿಗಳವರೆಗಿನ ಭೌತಿಕ ತರಗತಿಗಳನ್ನು ನಗರದಲ್ಲಿ ಪುನರಾರಂಭಿಸುವ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲು ಶಿಕ್ಷಣ ಇಲಾಖೆ ಮುಂದಾಗಿದೆ.
ಜನವರಿ ಅಂತ್ಯದವರೆಗೂ ಬೆಂಗಳೂರಿನಲ್ಲಿ ಶಾಲೆಗಳು ಬಂದ್ ಆಗಿರಲಿವೆ. ಫೆಬ್ರವರಿಯಿಂದ ತರಗತಿಗಳನ್ನು ಮರು ಆರಂಭಿಸುವ ಬಗ್ಗೆ ಸಿದ್ಧತೆ ನಡೆಸಲಾಗಿದೆ. ಆದರೆ, ಶಾಲೆ ಆರಂಭವಾಗುವುದು ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಯನ್ನು ಆಧರಿಸಿದೆ.
1 ರಿಂದ 9ರ ವರೆಗಿನ ಭೌತಿಕ ತರಗತಿ ಆರಂಭಿಸಲು ಸಾಧ್ಯವಾಗದಿದ್ದರೆ 5 ರಿಂದ 9ನೆ ತರಗತಿಯನ್ನಾದರೂ ಪ್ರಾರಂಭಿಸುವ ಬಗ್ಗೆ ಶಿಕ್ಷಣ ಇಲಾಖೆ ಒಲವು ತಳೆದಿದೆ. ಪರಿಣಿತ ತಜ್ಞರ ಅಭಿಪ್ರಾಯ ಪಡೆದು ಆನಂತರ ಶಾಲೆ ಪುನರಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮುಚ್ಚಲಾಗಿರುವ 1 ರಿಂದ 9ನೆ ತರಗತಿ ಪುನರಾರಂಭದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಹೀಗಾಗಿ ತಾಂತ್ರಿಕ ಸಲಹಾ ಸಮಿತಿ ನೀಡುವ ಅಭಿಪ್ರಾಯದ ಮೇಲೆ ನಗರದಲ್ಲಿ ಶಾಲೆ ಮರು ಆರಂಭದ ನಿರ್ಧಾರ ಅವಲಂಬಿತವಾಗಿದೆ.
ಪಿಯುಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಿಲ್ಲ
ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನಿಗದಿಗೊಳಿಸಿ ಕಡ್ಡಾಯಗೊಳಿಸಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ನಿಗದಿಗೊಳಿಸಿರುವ ಸಮವಸ್ತ್ರ ಅಥವಾ ವಸ್ತ್ರ ಸಂಹಿತೆ ಮಿತಿ ವಿಷಯದಲ್ಲಿ ಯಥಾಸ್ಥಿತಿಯನ್ನು ಮುಂದುವರೆಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಈ ಸಂಬಂಧ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ. ಆಯ್ಕೆಯ ವಸ್ತ್ರವನ್ನು ಧರಿಸಿ ಬರಲು ಅನುಮತಿ ನೀಡುವಂತೆ ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ನಿಯರು ಕಾಲೇಜಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ನಿಗದಿ ಮಾಡಿದ ಸಮವಸ್ತ್ರದ ಬಗ್ಗೆ ಮಾಹಿತಿ ಇದ್ದು, ಅದನ್ನು ಸ್ವ ಇಚ್ಛೆಯಿಂದ ಒಪ್ಪಿ ದಾಖಲಾಗಿರುತ್ತಾರೆ. ಇಷ್ಟು ದಿನ ಇಲ್ಲದ ಗೊಂದಲವನ್ನು ಈಗ ಹೊಸದಾಗಿ ಸೃಷ್ಟಿಸುತ್ತಿರುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಒಳಿತಲ್ಲ ಎಂದು ತಿಳಿಸಲಾಗಿದೆ.
ಪದವಿ ಪೂರ್ವ ತರಗತಿಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಜಾರಿ ಮಾಡುವ ಸಂಬಂಧ ಸುಪ್ರೀಂಕೋರ್ಟ್ ಹಾಗೂ ವಿವಿಧ ರಾಜ್ಯಗಳ ಹೈಕೋರ್ಟ್ ನೀಡಿರುವ ತೀರ್ಪುಗಳನ್ನು ಅವಲೋಕಿಸಿ ರಾಜ್ಯದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ನಿಗದಿಗೊಳಿಸುವ ಕುರಿತಂತೆ ಚಿಂತನ-ಮಂಥನ ನಡೆಸಲು ಒಂದು ಉನ್ನತ ಮಟ್ಟದ ಸಮಿತಿ ರಚಿಸುವ ಅಗತ್ಯವಿದೆ.
ಸಮಿತಿ ಅಧ್ಯಯನ ನಡೆಸಿ ಸಲ್ಲಿಸಲಾಗುವ ಶಿಫಾರಸುಗಳನ್ನು ಪರಿಶೀಲಿಸಿದ ನಂತರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಈ ಪ್ರಕ್ರಿಯೆ ಮುಗಿಯುವವರೆಗೂ ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಯಥಾಸ್ಥಿತಿ ಮುಂದುವರಿಸಲು ಪತ್ರದಲ್ಲಿ ಸೂಚಿಸಲಾಗಿದೆ.