NCPಯನ್ನು ನಾಗಪುರ ಎಜ್ಯುಕೇಷನ್ ಪಾಲಿಸಿ ಎಂದ ಡಿಕೆಶಿ ವಿರುದ್ಧ ಅಶ್ವತ್ಥನಾರಾಯಣ ವಾಗ್ದಾಳಿ

By Suvarna NewsFirst Published Sep 5, 2021, 6:10 PM IST
Highlights

* ಡಿಕೆಶಿ ವಿರುದ್ಧ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಾಗ್ದಾಳಿ
* ಡಿಕೆಶಿಯಿಂದ ಶಿಕ್ಷಣ ನೀತಿ ರೂಪಿಸಿದ ತಜ್ಞರಿಗೆ, ಶಿಕ್ಷಕರಿಗೆ ಅಪಮಾನ
* ಎನ್ಇಪಿಯನ್ನು ನಾಗಪುರ ಎಜ್ಯುಕೇಷನ್ ಪಾಲಿಸಿ ಎಂದಿರುವ ಡಿಕೆ ಶಿವಕುಮಾರ್ 

ಬೆಂಗಳೂರು, (ಸೆ.04): ಎನ್ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ)ಯನ್ನು ನಾಗಪುರ ಎಜ್ಯುಕೇಷನ್ ಪಾಲಿಸಿ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿ ಮತ್ತು ಹೊಣೆಗೇಡಿತನದಿಂದ ಕೂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು. 

ಬೆಂಗಳೂರಿನಲ್ಲಿ ಭಾನುವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಶಿಕ್ಷಣ ನೀತಿಯ ಬಗ್ಗೆ ತಿಳಿದವರು, ಅದರ ಬಗ್ಗೆ ಅಧ್ಯಯನ ಮಾಡಿದವರು ಹೀಗೆ ಮಾತನಾಡುವುದಿಲ್ಲ. ಅರಿವು, ತಿಳಿವಳಿಕೆ ಇರುವವರು ಹೀಗೆ ಮಾತನಾಡಲು ಸಾಧ್ಯವೇ ಇಲ್ಲ. ಕೇವಲ ರಾಜಕೀಯ ಉದ್ದೇಶಕ್ಕಾಗಿ ಮಾತ್ರ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಟೀಕಾ ಪ್ರಹಾರ ನಡೆಸಿದರು. 

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ವಿರೋಧಿಸಿ ಸಿದ್ದರಾಮಯ್ಯ ಪತ್ರ

ನಮ್ಮ ದೇಶದ ಮಹಾನ್ ಜ್ಞಾನಿಗಳು, ವಿದ್ವಾಂಸರು, ಶಿಕ್ಷಣ ತಜ್ಞರು ರೂಪಿಸಿರುವ ಈ ನೀತಿಯನ್ನು ಡಿ.ಕೆ.ಶಿವಕುಮಾರ್ ಅವರು ನಾಗಪುರ ಎಜ್ಯುಕೇಷನ್ ಪಾಲಿಸಿ ಎಂದು ಕರೆಯಬಾರದಿತ್ತು. ಶಿಕ್ಷಕರ ದಿನಾಚರಣೆ ವೇಳೆಯಲ್ಲಿ ಹಾಗೆ ಕರೆಯುವ ಮೂಲಕ ಜ್ಞಾನಕ್ಕೆ, ಅದನ್ನು ಬೋಧಿಸುವ ಶಿಕ್ಷಕ ಸಮುದಾಯಕ್ಕೆ, ಶಿಕ್ಷಣ ನೀತಿಯನ್ನು ವರ್ಷಗಳ ಕಾಲ ಶ್ರಮಿಸಿ ರೂಪಿಸಿದವರಿಗೆ ಅಪಮಾನ ಮಾಡಿದ್ದಾರೆ. ಅವರು ಹೇಳಿಕೆ ನೀಡುವ ಮುನ್ನ ಒಮ್ಮೆ ಆಲೋಚನೆ ಮಾಡಬೇಕು. ಇಲ್ಲವಾದರೆ ಅವರ ಟೀಕೆಗಳು ಅವರಿಗೇ ತಿರುಗುಬಾಣವಾಗುತ್ತವೆ ಎಂದು ಸಚಿವರು ಅಭಿಪ್ರಾಯಪಟ್ಟರು. 

ಕೆಪಿಸಿಸಿ ಅಧ್ಯಕ್ಷರ ಟೀಕೆ, ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಶಿಕ್ಷಣ ನೀತಿಯಲ್ಲಿ ಏನಾದರೂ ನ್ಯೂನತೆ ಇದ್ದರೆ ಎತ್ತಿ ತೋರಿಸುವ ಕೆಲಸವನ್ನು ಅವರು ಮಾಡಬೇಕಿತ್ತು. ಅದರಲ್ಲಿ ನ್ಯೂನತೆ ಇದ್ದರೆ ತಾನೇ ಅವರು ಹೇಳಲಿಕ್ಕೆ. ಆದರೆ, ಅವರು ಅನಗತ್ಯ ಅಂಶಗಳನ್ನು ಪ್ರಸ್ತಾವನೆ ಮಾಡುವ ಮೂಲಕ ತಮಗೆ ತಿಳಿವಳಿಕೆ ಕೊರತೆ ಇದೆ ಎಂಬುದನ್ನು ತೋರಿಸಿಕೊಂಡಿದ್ದಾರೆ. ಹಿಂದಿ ಹೇರುವ ಹುನ್ನಾರ ಎನ್ನುವುದು ಕೂಡ ಬಾಲಿಶ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 

ಡಿ.ಕೆ.ಶಿವಕುಮಾರ್ ಶಿಕ್ಷಣ ನೀತಿಯ ಬಗ್ಗೆ ಯಾರಿಂದಲಾದರೂ ಮಾಹಿತಿ ಪಡೆದುಕೊಂಡು ಮಾತನಾಡಲಿ. ಇಲ್ಲವೇ ನಾನೇ ಮಾಹಿತಿ ಕೊಡುತ್ತೇನೆ ಎಂದ ಸಚಿವರು, ಶಿಕ್ಷಣ ನೀತಿಯಂಥ ದೇಶ ಕಟ್ಟುವ ವಿಷಯಗಳ ಬಗ್ಗೆ ರಾಜಕೀಯ ಮಾಡಬಾರದು ಎಂದು ಕೋರಿದರು.

click me!