6, 7, 8ನೇ ಕ್ಲಾಸ್‌ ಆರಂಭಕ್ಕೆ ಕ್ಷಣಗಣನೆ : ಬ್ಯಾಚ್‌ಗಳಲ್ಲಿ ಕ್ಲಾಸ್‌

By Kannadaprabha News  |  First Published Sep 5, 2021, 8:25 AM IST
  • ಸರ್ಕಾರದ ಆದೇಶದಂತೆ ಸೋಮವಾರದಿಂದ (ಸೆ.6) 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೂ ಶಾಲೆಗಳಲ್ಲಿ ಭೌತಿಕ ತರಗತಿ
  • ಮೂರೂ ತರಗತಿ ಮಕ್ಕಳನ್ನು ಸ್ವಾಗತಿಸಲು ಶಾಲೆಗಳು ಅಗತ್ಯ ಸಿದ್ಧತೆ

  ಬೆಂಗಳೂರು (ಸೆ.05): ಸರ್ಕಾರದ ಆದೇಶದಂತೆ ಸೋಮವಾರದಿಂದ (ಸೆ.6) 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೂ ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಲಿದ್ದು, ಈ ಮೂರೂ ತರಗತಿ ಮಕ್ಕಳನ್ನು ಸ್ವಾಗತಿಸಲು ಶಾಲೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ.

ಮೊದಲ ಹಂತದಲ್ಲಿ ಆ.23ರಿಂದ 9ರಿಂದ 12ನೇ ತರಗತಿ ಮಕ್ಕಳಿಗೆ ಶಾಲೆಗಳನ್ನು ಆರಂಭಿಸಿದ ಸರ್ಕಾರ ಎರಡನೇ ಹಂತದಲ್ಲಿ 6ರಿಂದ 8ನೇ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಿದೆ. ಅದರಂತೆ ಕೋವಿಡ್‌ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ (ಕೇರಳ ಗಡಿ ಭಾಗದ ತಾಲ್ಲೂಕುಗಳನ್ನು ಹೊರತುಪಡಿಸಿ) ಎಲ್ಲಾ ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲಿ 6ರಿಂದ 8ನೇ ತರಗತಿ ಆರಂಭವಾಗಲಿವೆ. ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಈ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಲಿದ್ದು, ಮಕ್ಕಳನ್ನು ಬರಮಾಡಿಕೊಳ್ಳಲು ಆಯಾ ಶಾಲಾ ಶಿಕ್ಷಕರು, ಆಡಳಿತ ಮಂಡಳಿಗಳು ಸಕಲ ಸಿದ್ಧತೆ ನಡೆಸಿವೆ.

Tap to resize

Latest Videos

ಕೋವಿಡ್‌ ಮಾರ್ಗಸೂಚಿ ಅನುಸಾರ ಶಾಲಾ ಆವರಣ, ಪ್ರತಿ ಕೊಠಡಿ, ಪ್ರಯೋಗಾಲಯ ಎಲ್ಲವನ್ನೂ ಸ್ವಚ್ಛಗೊಳಿಸಿ ಸ್ಯಾನಿಟೈಸ್‌ ಮಾಡಿರುವ ಆಡಳಿತ ಮಂಡಳಿಗಳು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಡಿಯೋ ಸಹಿತ ಮಾಹಿತಿಯನ್ನು ಪೋಷಕರಿಗೆ ರವಾನಿಸುತ್ತಿರುವುದು ಕೆಲವೆಡೆ ಕಂಡುಬಂದಿದೆ.

ಸೆ. 6ರಿಂದ 6-8ನೇ ತರಗತಿಗಳು ಆರಂಭ: ವೇಳಾಪಟ್ಟಿ, ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

ತನ್ಮೂಲಕ ಶಾಲೆಗಳಲ್ಲಿ ಮಕ್ಕಳು ಸುರಕ್ಷಿತವಾಗಿರಲಿದ್ದು ನಿರ್ಭಯವಾಗಿ ಭೌತಿಕ ತರಗತಿಗೆ ಕಳುಹಿಸುವಂತೆ ಮನವಿ ಮಾಡುತ್ತಿವೆ. ಕೆಲ ಶಾಲಾ ಆಡಳಿತ ಮಂಡಳಿಗಳು ಪೋಷಕರ ಸಭೆ ನಡೆಸಿ ವಾಸ್ತವತೆಯನ್ನು ವಿವರಿಸಿ ಮಕ್ಕಳನ್ನು ಕಳುಹಿಸುವಂತೆ ಜಾಗೃತಿ ಮೂಡಿಸುತ್ತಿವೆ. ಕೋವಿಡ್‌ 3ನೇ ಅಲೆ ಆತಂಕದ ನಡುವೆ ಈಗಾಗಲೇ ಆರಂಭವಾಗಿರುವ 9ರಿಂದ 12ನೇ ತರಗತಿಗೆ ಶೇ.65ರಷ್ಟುವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಇದೀಗ 6ರಿಂದ 8ನೇ ತರಗತಿಯ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಎಷ್ಟರ ಮಟ್ಟಿಗೆ ಒಪ್ಪುತ್ತಾರೆ? ಎಷ್ಟುಪ್ರಮಾಣದಲ್ಲಿ ವಿದ್ಯಾರ್ಥಿಗಳು ಹಾಜರಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಮಕ್ಕಳ ತಂಡ ರಚನೆ: ಮಕ್ಕಳ ಭೌತಿಕ ತರಗತಿ ಹಾಜರಾತಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ. ಪ್ರತಿ ತರಗತಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ 15ರಿಂದ 20 ಮಂದಿಯ ಗರಿಷ್ಠ 8 ತಂಡಗಳನ್ನು ರಚಿಸಿ ಪ್ರತಿ ತಂಡಕ್ಕೂ ಪ್ರತ್ಯೇಕ ಕೊಠಡಿಯಲ್ಲಿ ತರಗತಿ ನಡೆಸುವುದು. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿಗಳಿಗೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ತಲಾ 40 ನಿಮಿಷಗಳ ಐದು ಪೀರಿಯಡ್‌ ತರಗತಿ ನಡೆಸಬೇಕು. ಪ್ರಾಥಮಿಕ ಹಾಗೂ ಹಿರಿಯ ಪಾಥಮಿಕ ಶಾಲೆಗಳಿಲ್ಲದ ಪ್ರೌಢ ಶಾಲೆಗಳಲ್ಲಿ ಮಧ್ಯಾಹ್ನದ ಅವಧಿಯಲ್ಲಿ 8ನೇ ತರಗತಿ ನಡೆಯಬೇಕು. ಈ ಶಾಲೆಗಳಲ್ಲಿ ಈಗಾಗಲೇ ಬೆಳಗಿನ ಅವಧಿಯಲ್ಲಿ 9 ಮತ್ತು 10ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ನಡೆಯುತ್ತಿದೆ. ಹೀಗಾಗಿ, 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 2 ರಿಂದ ಸಂಜೆ 4.30ವರೆಗೆ ಪ್ರತಿ ದಿನ ಮೂರು ಪೀರಿಯಡ್‌ ತರಗತಿ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

ಸರ್ಕಾರದ ಸೂಚನೆಯಂತೆ ಸೆ.6ರಿಂದ 6ರಿಂದ 8ನೇ ತರಗತಿ ಮಕ್ಕಳಿಗೂ ಭೌತಿಕ ತರಗತಿ ಆರಂಭಿಸಲು ನಮ್ಮ ಶಾಲೆಯಲ್ಲಿ ಎಲ್ಲ ಅಗತ್ಯ ಸಿದ್ಧತೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರಲ್ಲಿ ಮನವಿ ಮಾಡಿದ್ದೇವೆ. ಎಷ್ಟೇ ಮಕ್ಕಳು ಬಂದರೂ ಭೌತಿಕ ತರಗತಿ ಆರಂಭಿಸುತ್ತೇವೆ. ದಿನ ಕಳೆದಂತೆ ಒಬ್ಬರನ್ನು ನೋಡಿಕೊಂಡು ಇನ್ನೊಬ್ಬರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ ಎಂಬ ವಿಶ್ವಾಸವಿದೆ. ಶಾಲೆಗೆ ಬರದ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣವನ್ನೂ ಮುಂದುವರೆಸುತ್ತೇವೆ.

- ಗಾಯತ್ರಿ, ಲಿಟ್ಲ್ ಫ್ಲವರ್‌ ಶಾಲೆಯ ಪ್ರಾಂಶುಪಾಲರು, ಬೆಂಗಳೂರು

click me!