ಕೋವಿಡ್‌ ನಂತರ ಶಿಕ್ಷಕರ ವೃತ್ತಿ, ಬದುಕು ಹೇಗೆ ಬದಲಾಗಿದೆ? ಇವರು ಯಾವ ಯೋಧರಿಗೂ ಕಮ್ಮಿಯಿಲ್ಲ!

By Suvarna News  |  First Published Sep 5, 2021, 9:29 AM IST

ಇಷ್ಟುದಿನ ಶಾಲೆಗಳು ಬಂದ್‌ ಇದ್ದಿದ್ದರಿಂದ ಆನ್‌ಲೈನ್‌ ಶಿಕ್ಷಣವೇ ಅನಿವಾರ್ಯವಾಗಿತ್ತು. ಆದರೆ ರಾಜ್ಯದಲ್ಲಿ 31.27 ಲಕ್ಷ ಮಕ್ಕಳ ಕೈಲಿ ಮೊಬೈಲ್‌ ಇರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಬಡ ಮಕ್ಕಳಿಗೆ ಆನ್‌ಲೈನ್‌ ಕಲಿಕೆ ಕಬ್ಬಿಣದ ಕಡಲೆ.


ಕೋವಿಡ್‌ ಸಂಕಷ್ಟದ ಸಮಯದಲ್ಲೇ ಮತ್ತೊಮ್ಮೆ ಶಿಕ್ಷಕರ ದಿನಾಚರಣೆ ಎದುರಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಶಿಕ್ಷಣ ವ್ಯವಸ್ಥೆ ಎಂದೂ ಇಂಥ ಸವಾಲನ್ನು ಎದುರಿಸಿರಲಿಲ್ಲ. ಮಕ್ಕಳನ್ನು ಶಾಲೆಗೆ ಕರೆಸದೆ ಕೋವಿಡ್‌-19 ವೈರಸ್‌ನಿಂದ ರಕ್ಷಣೆ ನೀಡುತ್ತಲೇ ಅವರಿಗೆ ಶಿಕ್ಷಣ ಒದಗಿಸಬೇಕಾದಂಥ ಕ್ಲಿಷ್ಟಸನ್ನಿವೇಶದಲ್ಲಿ ಶಿಕ್ಷಕರಿದ್ದಾರೆ. ಆದಾಗ್ಯೂ ವೃತ್ತಿ ಬದ್ಧತೆಯನ್ನು ಮರೆಯದೆ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಶೈಕ್ಷಣಿಕ ಯೋಧರಿಗೆ ಎದುರಾದ ಸವಾಲುಗಳೇನು, ಕೊರೋನಾದಿಂದ ಶಿಕ್ಷಕ ವೃತ್ತಿ ಹೇಗೆ ಬದಲಾಗಿದೆ ಈ ಕುರಿತ ಕಿರು ಮಾಹಿತಿ ಇಲ್ಲಿದೆ.

ಆನ್‌ಲೈನ್‌ ಶಿಕ್ಷಣದ ಸವಾಲು

Tap to resize

Latest Videos

undefined

ನಾಲ್ಕು ಗೋಡೆಗಳ ನಡುವೆ ಕಲಿಕೆಯಲ್ಲಿ ತೊಡಗುವಂತಿದ್ದ ಶಿಕ್ಷಣ ವ್ಯವಸ್ಥೆಯನ್ನು ಮಹಾಮಾರಿ ಕೊರೋನಾ ಬದಲಾಯಿಸಿಬಿಟ್ಟಿದೆ. ಕೊಠಡಿ ಬಿಟ್ಟು ಶಿಕ್ಷಕರು ಝೂಮ್‌ ಆ್ಯಪ್‌, ವೆಬಿನಾರ್‌ಗಳ ಮೊರೆ ಹೋಗಬೇಕಾಯಿತು. ಇದುವರೆಗಿನ ಶಿಕ್ಷಣ ಪದ್ಧತಿ ಬಿಟ್ಟು ಹಠಾತ್‌ ಇನ್ನೊದು ವ್ಯವಸ್ಥೆಗೆ ಹೊಂದಿಕೊಳ್ಳುವುದು ಶಿಕ್ಷಕರಿಗೂ ಕಷ್ಟವಾಗಿತ್ತು.

ಮಕ್ಕಳಿರಲಿ ಕೆಲ ಶಿಕ್ಷಕರ ಬಳಿಯೂ ಸ್ಮಾರ್ಟ್‌ಫೋನ್‌ ಇರಲಿಲ್ಲ. ಹೊಸ ತಂತ್ರಜ್ಞಾನದ ಅರಿವು ಇರಲಿಲ್ಲ. ತರಬೇತಿ ನೀಡುವವರೂ ಇರಲಿಲ್ಲ. ಈ ನೂತನ ವಿಧಾನಕ್ಕೆ ಹೊಂದಿಕೊಂಡು ಅದನ್ನು ಮಕ್ಕಳಿಗೂ ಹೇಳಿಕೊಟ್ಟು, ಅವರನ್ನೂ ಆನ್‌ಲೈನ್‌ ತರಗತಿಗೆ ಹೊಂದಿಕೊಳ್ಳುವಂತೆ ಮಾಡುವುದು ಬಹುದೊಡ್ಡ ಸವಾಲಾಗಿತ್ತು. ಅದನ್ನು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಶಿಕ್ಷಕರು ಯಶಸ್ವಿಯಾಗಿ ಎದುರಿಸಿದ್ದಾರೆ.

ಪ್ರಾಥಮಿಕ ಶಾಲಾ ಪಠ್ಯಕ್ಕೆ ನಲಿ-ಕಲಿ ಹೆಜ್ಜೆ: ಗಮನ ಸೆಳೆದ ಮಂಗಳೂರು ಶಿಕ್ಷಕಿ

ನೆಟ್‌ವರ್ಕ್ ಸಮಸ್ಯೆ

ಸ್ಮಾರ್ಟ್‌ಫೋನ್‌, ನೆಟ್ವರ್ಕ್ ಸಮಸ್ಯೆ ಕೇವಲ ಮಕ್ಕಳಿಗಲ್ಲ, ಶಿಕ್ಷಕರಿಗೂ ಇತ್ತು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರೂ ನೆಟ್ವರ್ಕ್ ಹುಡುಕಿಕೊಂಡು ಹೋಗಿ ಪಾಠ ಮಾಡುತ್ತಾರೆ. ಜೊತೆಗೆ ಸಾಮಾನ್ಯ ತರಗತಿಗಳಂತೆ ಆನ್‌ಲೈನ್‌ ತರಗತಿಗಳಲ್ಲಿ ಮಕ್ಕಳನ್ನು ಕೂರಿಸುವುದು ಸಾಧ್ಯವಾಗುತ್ತಿಲ್ಲ. ಬಲವಂತಕ್ಕೆ ಆನ್‌ಲೈನ್‌ ಕ್ಲಾಸ್‌ ಎಂಬಂತಾಗಿದೆ. ಈ ನಡುವೆ ಮಕ್ಕಳ ಕಲಿಕೆಗೂ ಆಸಕ್ತಿ ಹುಟ್ಟಿಸುವುದು ಸವಾಲಿನ ಕೆಲಸ.

ವೃತ್ತಿಪರತೆ ಮರೆಯದ ಶಿಕ್ಷಕರು

ಸರ್ಕಾರ ಶಾಲೆಗಳನ್ನು ತೆರೆಯದಿದ್ದರೂ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಹಳ್ಳಿಹಳ್ಳಿಗೂ ಶಿಕ್ಷಕರೇ ಹೋಗಿ ಮಕ್ಕಳನ್ನು ಒಂದೆÜಡೆ ಸೇರಿಸಿ ಪಾಠ ಮಾಡುವ ‘ವಿದ್ಯಾಗಮ’ ಎಂಬ ವಿನೂತನ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿ ಮಾಡಿದ್ದು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿತ್ತು. ಶಿಕ್ಷಕರು ಮನೆ ಭೇಟಿ ಹಾಗೂ ಫೋನ್‌ ಕರೆಯ ಮೂಲಕ ವಿದ್ಯಾರ್ಥಿಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ.

ಆದರೆ ಗ್ರಾಮೀಣ ಪ್ರದೇಶದಲ್ಲಿ ಸೀಮಿತ ಸಂಖ್ಯೆಯ ಮಕ್ಕಳಿರುವ ಪ್ರದೇಶಕ್ಕೆ ತೆರಳುವ ಶಿಕ್ಷಕರು ಪ್ರತಿ ಮಕ್ಕಳಿಗೂ ಪ್ರತ್ಯೇಕವಾಗಿ ಪಾಠ ಹೇಳಿಕೊಡಬೇಕಾಗಿದ್ದರಿಂದ ಶಿಕ್ಷಕರ ಮೇಲೆ ಹೊರೆಯೂ ಹೆಚ್ಚಿದೆ. ಜೊತೆಗೆ ವಿದ್ಯಾರ್ಥಿಗಳು ಇರುವ ಪ್ರದೇಶಕ್ಕೆ ತೆರಳಿದಾಗ ಹಲವು ಸಮಸ್ಯೆಗಳು ಎದುರಾಗಿವೆ. ಸಮಯಕ್ಕೆ ವಿದ್ಯಾರ್ಥಿಗಳು ಇಲ್ಲದಿರುವುದು, ಕೃಷಿ ಮತ್ತಿತರ ಕೆಲಸಕ್ಕೆ ಪೋಷಕರು ಮಕ್ಕಳನ್ನೂ ಕರೆದುಕೊಂಡು ಹೋಗಿರುತ್ತಾರೆ. ಇನ್ನೂ ಕೆಲವೆಡೆ ಜಾತಿ ತಾರತಮ್ಯದ ಹಿನ್ನೆಲೆಯಲ್ಲಿ ಪೋಷಕರೇ ತಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ. ಇದರ ಹೊರತಾಗಿಯೂ ವಿದ್ಯಾಗಮ ಯಶಸ್ಸಿಗೆ ಶಿಕ್ಷಕರ ಕೊಡುಗೆ ಅಪಾರ.

268 ಶಿಕ್ಷಕರು ಕೋವಿಡ್‌ಗೆ ಬಲಿ

ಕೋವಿಡ್‌ನಿಂದಾಗಿ ಶಾಲಾ-ಕಾಲೇಜುಗಳು ಬಂದ್‌ ಆಗಿದ್ದರೂ ಖಾಸಗಿ ಶಾಲೆಗಳ ಶಿಕ್ಷಕರು ಆನ್‌ಲೈನ್‌ ಮೂಲಕ, ಸರ್ಕಾರಿ ಶಾಲಾ ಶಿಕ್ಷಕರು ವಿದ್ಯಾಗಮ ಮೂಲಕ ಪಾಠ ಹೇಳಿಕೊಡುವ ಅನಿವಾರ‍್ಯತೆ ಸೃಷ್ಟಿಯಾಗಿದೆ. ಹೀಗಾಗಿ ಹಳ್ಳಿಹಳ್ಳಿಗೆ ಹೋಗಿ ಪಾಠ ಹೇಳಿಕೊಡುವ ಅಸಂಖ್ಯಾತ ಶಿಕ್ಷಕರಿಗೂ ಸೋಂಕು ದೃಢಪಡುತ್ತಿದೆ. ಇವರಲ್ಲಿ ಕೆಲ ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ. ಕರ್ನಾಟಕವೊಂದರಲ್ಲೇ ಕಳೆದ ಮಾಚ್‌ರ್‍ 2020ರಿಂದ 2021ರ ಮೇ ತಿಂಗಳ ವರೆಗೆ 268 ಶಿಕ್ಷಕರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಎಲ್ಲ ಮಕ್ಕಳಲ್ಲಿ ಮೊಬೈಲ್‌ ಇಲ್ಲ

ಇಷ್ಟುದಿನ ಶಾಲೆಗಳು ಬಂದ್‌ ಇದ್ದಿದ್ದರಿಂದ ಆನ್‌ಲೈನ್‌ ಶಿಕ್ಷಣವೇ ಅನಿವಾರ್ಯವಾಗಿತ್ತು. ಆದರೆ ರಾಜ್ಯದಲ್ಲಿ 31.27 ಲಕ್ಷ ಮಕ್ಕಳ ಕೈಲಿ ಮೊಬೈಲ್‌ ಇರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಬಡ ಮಕ್ಕಳಿಗೆ ಆನ್‌ಲೈನ್‌ ಕಲಿಕೆ ಕಬ್ಬಿಣದ ಕಡಲೆ. ಇದು ಶಿಕ್ಷಕರಿಗೂ ಸಂಕಷ್ಟತಂದೊಡ್ಡಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಆನ್‌ಲೈನ್‌ ಕ್ಲಾಸೂ ಇಲ್ಲದ ಕಡೆಗಳಲ್ಲಿ ಮಕ್ಕಳಿಗೆ ತಾವು ಯಾವ ತರಗತಿಯಲ್ಲಿದ್ದೇವೆ ಎಂಬುದೂ ಮರೆತುಹೋಗಿದೆ. ಹೀಗಾಗಿ ಪುನಃ ಶಾಲೆ ಆರಂಭವಾದ ಬಳಿಕ ಶಿಕ್ಷಕರು ಮಕ್ಕಳಿಗೆ ಅ, ಆ, ಇ, ಈ ಯಿಂದ ಹಿಡಿದು ಈವರೆಗೆ ಕಲಿಸಿದ್ದನ್ನಲ್ಲಾ ಮತ್ತೊಮ್ಮೆ ಕಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಕೂಲಿಗೆ ಇಳಿದ ಖಾಸಗಿ ಶಿಕ್ಷಕರು!

ಕೋವಿಡ್‌ ಕಾರಣದಿಂದ ಶಾಲೆಗಳು ಕಳೆದೆರಡು ವರ್ಷಗಳಿಂದ ಮುಚ್ಚಿವೆ. ಇದರ ನೇರ ಪರಿಣಾಮವಾಗುತ್ತಿರುವುದು ಅಥಿತಿ ಶಿಕ್ಷಕರು ಮತ್ತು ಖಾಸಗಿ ಶಾಲಾ ಶಿಕ್ಷಕರ ಮೇಲೆ. ಈ ಶಿಕ್ಷಕರು ಉದ್ಯೋಗ ಭದ್ರತೆ ಇಲ್ಲದ ಕಾರಣ ವೇತನ ದೊರೆಯದೆ ನಿತ್ಯ ಜೀವನಕ್ಕೂ ಪರದಾಡಬೇಕಾದಂಥ ಸ್ಥಿತಿ ನಿರ್ಮಾಣವಾಗಿದೆ. ನಗರಗಳ ಖಾಸಗಿ ಶಾಲೆಗಳಲ್ಲಿ ಆನ್‌ಲೈನ್‌ ಪಾಠ ಮಾಡಲು ಅರ್ಧ ವೇತನ ನೀಡಲಾಗುತ್ತಿದೆ. ಅತಿಥಿ ಶಿಕ್ಷಕರಿಗೆ ಅದೂ ಇಲ್ಲ. ದಿನನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿರುವ ಈ ಕಾಲದಲ್ಲಿ ಜೀವನ ನಿಭಾಯಿಸಲು ಸಾಧ್ಯವಾಗದೆ ಕೆಲ ಶಿಕ್ಷಕರು ಜೀವನಾಧಾರಕ್ಕಾಗಿ ತರಕಾರಿ, ಹೂವು ಮಾರಾಟದಂಥ ಕೆಲಸ, ಕೂಲಿ ಕೆಲಸಕ್ಕೂ ಇಳಿದಿರುವ ಬಗ್ಗೆ ವರದಿಯಾಗಿದೆ.

ಪೋಲಿಗಳ ಕಾಟದ ಜೊತೆ ಪಠ್ಯೇತರ ಕೆಲಸದ ಹೊರೆ

ಶಾಲೆಯ ಹೊರಗೆ ಪಾಠ ಮಾಡುವ ಪರಿಸರದಲ್ಲಿ ದುವ್ರ್ಯಸನಿಗಳು, ಪೋಲಿಗಳು ಶಿಕ್ಷಕಿಯರನ್ನು ಗೇಲಿ ಮಾಡುವಂತಹ ಹಾವಳಿಯಿಂದ ಅಭದ್ರತೆಯೂ ಉಂಟಾಗಿದೆ. ಈ ನಡುವೆ ಸರ್ಕಾರ ರೂಪಿಸಿದ ನಿಯಮಗಳ ಫಾಮ್‌ರ್‍ ಭರ್ತಿ ಮಾಡುವಲ್ಲೇ ಶಿಕ್ಷಕರು ಸುಸ್ತಾಗುತ್ತಿದ್ದಾರೆ. ದೇಶದ ಭಾವಿ ಪ್ರಜೆಗಳನ್ನು ರೂಪಿಸುವ ಹೊಣೆ ಶಿಕ್ಷಕರದ್ದು. ಆದರೆ ಶಿಕ್ಷಕರಿಗೆ ಮಕ್ಕಳ ಭವಿಷ್ಯ ರೂಪಿಸುವ ಕೆಲಸಕ್ಕಿಂತ ಬೇರೆ ಬೇರೆ ಕೆಲಸಗಳೇ ಹೆಚ್ಚಿವೆ. ಮನೆ ಮನೆಗೆ ಹೋಗಿ ಮಕ್ಕಳನ್ನು ಸೇರಿಸಿ ಸಾರ್ವಜನಿಕ ಜಾಗ, ಗುಡಿ-ಗುಂಡಾರದಲ್ಲಿ ಪಾಠ ಮಾಡುವಂತಾಗಿದೆ. ಜೊತೆಗೆ ಕೋವಿಡ್‌ ಜಾಗೃತಿ, ಸೋಂಕಿತರ ಪತ್ತೆ ಹೀಗೆ ಎಲ್ಲ ಕಾರ‍್ಯದಲ್ಲೂ ಶಿಕ್ಷಕರೇ ಮುಂಚೂಣಿ ಕಾರ‍್ಯಕರ್ತರ ಕೆಲಸವನ್ನೂ ಮಾಡುತ್ತಿದ್ದಾರೆ. ಸಮೀಕ್ಷೆ, ಜಾಗೃತಿ ಕಾರ‍್ಯದಲ್ಲೇ ಶಿಕ್ಷಕರ ಬಹುಪಾಲು ಸಮಯ ಹೋಗುತ್ತಿದೆ. ಈ ನಡುವೆ ಉಪ ಚುನಾವಣೆಗಳು ಬಂದು ಆ ಕೆಲಸಕ್ಕೂ ಶಿಕ್ಷಕರೇ ತೆರಳುತ್ತಿರುವುದಿಂದ ಶಿಕ್ಷಕರ ಮೇಲೆ ಹೊರೆ ಹೆಚ್ಚುತ್ತಿದೆ.

35% ಮಕ್ಕಳು ಕಲಿಕೆಯಿಂದ ಹೊರಗೆ

ಕಳೆದೆರಡು ವರ್ಷಗಳಿಂದ ಆನ್‌ಲೈನ್‌ ಶಿಕ್ಷಣ ಜಾರಿಯಲ್ಲಿದ್ದರೂ ಅಂದುಕೊಂಡಷ್ಟುಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಪಾಠ ಅರ್ಥವಾಗುತ್ತಿಲ್ಲ. ಶೇ.35ಕ್ಕೂ ಹೆಚ್ಚು ಮಕ್ಕಳು ಕಲಿಕೆಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿ ಸವಾಲನ್ನು ಸೃಷ್ಟಿಸಿದ್ದರೂ ಅದರ ನೇರ ಹೊಣೆ ಶಿಕ್ಷಕರೇ ಹೊರಬೇಕಾದ ಸ್ಥಿತಿ ಇದೆ.

ಮೂರನೇ ಅಲೆ ಭೀತಿ, ಹೊಸ ಶಿಕ್ಷಣ ನೀತಿ

ಕೊರೋನಾ 3ನೇ ಅಲೆ ಭೀತಿ ನಡುವೆಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನವಾಗಿದೆ. ಹೊಸ ಶಿಕ್ಷಣ ನೀತಿಯ ಬಗ್ಗೆ ಮಕ್ಕಳು, ಪೋಷಕರಿಗೆ ಇರಲಿ, ಶಿಕ್ಷಕರಿಗೇ ಸರಿಯಾದ ಮಾಹಿತಿ ಇಲ್ಲ. ನೂತನ ಶೈಕ್ಷಣಿಕ ವರ್ಷ ಆರಂಭವಾಗುವ ಹೊತ್ತಿನಲ್ಲಿ ಶಿಕ್ಷಕರೇ ಪೋಷಕರ ಆತಂಕವನ್ನು ನಿವಾರಿಸಬೇಕಾದ ಅನಿವಾರ‍್ಯತೆ ಸೃಷ್ಟಿಯಾಗಲಿದೆ. ಆದರೆ ಕೋವಿಡ್‌ ಮೂರನೇ ಅಲೆಯ ಭೀತಿಯಿಂದ ಶಿಕ್ಷಕರಿಗೆ ಅದೂ ಮೊತ್ತೊಂದು ರೀತಿಯ ಸವಾಲನ್ನು ಸೃಷ್ಟಿಸಲಿದೆ.

- ಕೀರ್ತಿ ತೀರ್ಥಹಳ್ಳಿ

click me!