ಕಲಬುರಗಿಯಲ್ಲಿ ಸಂವಾದ: ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವಿವರಿಸಿದ ಅಶ್ವತ್ಥ ನಾರಾಯಣ

By Suvarna News  |  First Published Aug 24, 2021, 8:43 PM IST

* ಕಲಬುರಗಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಂವಾದ
* ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸಾಹಿತಿಗಳೊಂದಿಗೆ ಸಚಿವರ ಸಂವಾದ
* ಎನ್.ಇ.ಪಿ.ಯಿಂದ ಶೈಕ್ಷಣಿಕ ಸ್ವಾಯತ್ತತೆ, ಆಡಳಿತ ವಿಕೇಂದ್ರೀಕರಣ: ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪ್ರತಿಪಾದನೆ 


ಕಲಬುರಗಿ, (ಆ.24): ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್.ಇ.ಪಿ.-2020) ಶೈಕ್ಷಣಿಕ ಸಂಸ್ಥೆಗಳ ಸ್ವಾಯತ್ತತೆಯ ಜೊತೆಗೆ ಸಂಬಂಧಿಸಿದ ಆಡಳಿತಾತ್ಮಕ ವಿಕೇಂದ್ರಕರಣಕ್ಕೂ ಒತ್ತು ನೀಡುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು. 

ಇಂದು (ಆ.24) ಕಲಬುರಗಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎನ್.ಇ.ಪಿ. ಕುರಿತು ಸಾಹಿತಿಗಳೊಂದಿಗೆ ಸಂವಾದ ನಡೆಸಿದ ಅವರು, ಜಾಗತಿಕ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದೇ ಈ ಸ್ವಾಯತ್ತತೆ ಮತ್ತು ವಿಕೇಂದ್ರಕರಣದ ಆಶಯವಾಗಿದೆ ಎಂದು ವಿವರಿಸಿದರು. 

Tap to resize

Latest Videos

ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಈ ವರ್ಷ ದಾಖಲಾಗುವ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್

ಸುಮಾರು ಐದೂವರೆ ವರ್ಷಗಳ ದೀರ್ಘಕಾಲದ ಸಮಾಲೋಚನೆ ಹಾಗೂ 3 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಕ್ರೋಡೀಕರಿಸಿ ಎನ್.ಇ.ಪಿ. ಕರಡು ರೂಪಿಸಲಾಗಿದೆ. ಇದು ನಮ್ಮ ತನವನ್ನು ಉಳಿಸಿಕೊಂಡೇ ಜಾಗತಿಕ ಪೈಪೋಟಿಯಲ್ಲಿ ಯಶಸ್ವಿಯಾಗಬೇಕೆಂಬ ಆಶಯ ಹೊಂದಿದೆ. ಕನ್ನಡ ಭಾಷೆಗಾಗಲೀ ಅಥವಾ  ನಮ್ಮ ಭಾರತದ ಇನ್ನಿತರ ಭಾಷೆಗಾಗಲೀ ಇದರಿಂದ ಧಕ್ಕೆಯಾಗುವುದಿಲ್ಲ. ಪದವಿ ಹಂತದಲ್ಲಿ ಎರಡು ವರ್ಷಗಳ ಅವಧಿಗೆ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿರುವುದರ ಜೊತೆಗೆ ಉನ್ನತ ಶಿಕ್ಷಣದ ಕೋರ್ಸ್ ಗಳನ್ನು ಪ್ರಾದೇಶಿಕ ಭಾಷೆಯಲ್ಲೂ ಕಲಿಸುವ ವ್ಯವಸ್ಥೆ ಜಾರಿಗೊಳ್ಳಲಿದೆ. ಈ ಕ್ರಮಗಳಿಂದಾಗಿ, ನಮ್ಮ ಭಾಷೆಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಸರ್ಕಾರಿ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ  ಈ ನೀತಿಯು ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶಗಳನ್ನು ಹೆಚ್ಚಿಸುತ್ತದೆ. ಹಾಗೆಯೇ ಬೋಧಕರಿಗೆ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲೂ ಚಲನಶೀಲತೆಯನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳಲ್ಲಿ ಜ್ಞಾನದ ಜೊತೆಗೆ ಕೌಶಲಗಳನ್ನು ಬೆಳೆಸಲು ಸಹಕಾರಿ. ಒಟ್ಟಾರೆ ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿಸುವ ಆಶಯ ಹೊಂದಿದ ಸಮಗ್ರ ದೃಷ್ಟಿಕೋನದ ನೀತಿ ಇದಾಗಿದೆ ಎಂದರು.

ಇದೇ ವೇಳೆ ಸಾಹಿತಿಗಳು ಕೆಲವು ಬೇಡಿಕೆಗಳಿರುವ ಮನವಿ ಪತ್ರವನ್ನು ಸಚಿವರಿಗೆ ನೀಡಿದರು. ವಿಕ್ರಮ ವಿಸಾಜಿ, ಶಂಕರಯ್ಯ ಆರ್.ಘಂಟಿ, ಬಸವರಾಜ ಡೋಣೂರ, ಎಚ್.ಟಿ.ಪೋತೆ, ಪ್ರಭಾಕರ ಜೋಶಿ, ಡಾ.ಸುಜಾತಾ ಜಂಗಮಶೆಟ್ಟಿ ಮತ್ತಿತರರು ಇದ್ದರು.
 

click me!