ಶಾಲೆ ಪುನರಾರಂಭ: ವಿದ್ಯಾರ್ಥಿಗಳಲ್ಲಿ ಆನ್‌ಲೈನ್‌ ರಗಳೆಯಿಂದ ಪಾರಾದ ಖುಷಿ

By Kannadaprabha NewsFirst Published Aug 24, 2021, 9:10 AM IST
Highlights

* ಅಂತು ನಮ್ಮ ಶಾಲೆಗಳು ಮತ್ತೆ ಪ್ರಾರಂಭವಾಗಿವೆ
* ಈ ಕಾಲ ಬರುತ್ತದೆಯೋ ಇಲ್ಲವೋ ಎಂದುಕೊಂಡಿದ್ದೆವು 
* ಕರುಣಾಜನಕ ಕತೆಗಳನ್ನು ಹೊರಹಾಕಿದ ವಿದ್ಯಾರ್ಥಿಗಳು 
 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಆ.24): ಸಂಭಾಷಣೆ 1: ಅದ್ಯಾ ಆನ್‌ಲೈನ್‌ ಕ್ಲಾಸ್ಲೇ, ದೋಸ್ತಾ ಸಿಗಂಗಿಲ್ಲ, ಗುದ್ದಿ ಮಾತನಾಡ್ಸಂಗಿಲ್ಲ. ಅಯ್ಯೋ ಮಾರಾಯ, ಅದೊಂದು ರೀತಿ ಆನ್‌ಲೈನ್‌ ಪಂಜದ ಇದ್ದಾಂಗ ಆಗಿತ್ತು ನೋಡ್ಲೆ, ಕೊನೆಗೂ ಅದರಿಂದ ಪಾರಾದ್ವೆಪಾ.

ಸಂಭಾಷಣೆ 2

ಅಬ್ಬಾ .. ಅಂತೂ ಸಾಲಿ ಪ್ರಾರಂಭ ಅದಾವ್ಲೆ. ಈ ಟೈಮ್‌ ಬರತೈತಿನ ಇಲ್ಲ ಅಂದುಕೊಂಡಿದ್ದೆ. ಆದರೂ ಬಂತಪಾ. ಆ ಹಾಳಾದ ಕೋವಿಡ್‌ ನಮ್ಮ ವಿದ್ಯಾರ್ಥಿ ಬದುಕನ್ನೇ ಕಿತ್ತುಕೊಂಡಿತ್ತು. ಸಾಲ್ಯಾಗ್‌ ಇರು ಮಜಾನಾ ಬ್ಯಾರೆ ಅಲ್ಲೇನೋ.
2 ವರ್ಷಗಳ ಬಳಿಕ ಪ್ರಾರಂಭವಾದ ಶಾಲೆ ಮತ್ತು ಕಾಲೇಜಿನ ಮೈದಾನದಲ್ಲಿ ಸೋಮವಾರ ಒಂದೊಂದು ರೀತಿಯಲ್ಲಿ ಸಂಭಾಷಣೆ ನಡೆಯುತ್ತಿರುವುದು ಕಂಡು ಬಂದಿತು. ಆ ವಿದ್ಯಾರ್ಥಿಗಳು ಮಾತನಾಡುತ್ತಿರುವುದನ್ನು ಹಾಗೆ ಸುಮ್ಮನೇ ಕೇಳಿದರೆ ಸಾಕು ಕೊರೋನಾ ವಿದ್ಯಾರ್ಥಿಗಳಿಗೆ ಎಷ್ಟು ಹಿಂಸೆ ನೀಡಿದೆ ಎನ್ನುವುದು ಗೊತ್ತಾಗುತ್ತದೆ.

ತಾತ ತೀರಿ ಹೋದ ಕತೆಯನ್ನು ಓರ್ವ ವಿದ್ಯಾರ್ಥಿ ಹೇಳಿದರೆ, ಅಣ್ಣನನ್ನು ಕಳೆದುಕೊಂಡ ಕತೆಯನ್ನು ಹೇಳುತ್ತಲೇ ಮತ್ತೊಬ್ಬ ವಿದ್ಯಾರ್ಥಿ ಕಣ್ಣೀರಾದ. ಅಷ್ಟೇ ಅಲ್ಲ, ಈ ಮಹಾಮಾರಿ ತಮ್ಮ ಪಾಲಕರ ಬದುಕು ಕಿತ್ತುಕೊಂಡು, ಅನುಭವಿಸುತ್ತಿರುವ ಯಾತನೆಯನ್ನು ತಮ್ಮ ತಮ್ಮ ಇತಿಮಿತಿಯಲ್ಲಿಯೇ ಮಾತನಾಡುತ್ತಲೇ ಅನೇಕ ಕರುಣಾಜನಕ ಕತೆಗಳನ್ನು ವಿದ್ಯಾರ್ಥಿಗಳು ಹೊರಹಾಕಿರುವುದು ಕಂಡು ಬಂತು.

ಶಾಲಾ ಮಕ್ಕಳಿಗೆ ಮಾಜಿ ಸಚಿವ ಸುರೇಶ್‌ ಧೈರ್ಯ

ಅಯ್ಯೋ ಇದಿನ್ನು ಹೋಗಿಲ್ವಂತೆ. ಮೂರನೇ ಅಲೆ ಬರುತ್ತದೆ. ಅದು ಮಕ್ಕಳ ಮೇಲೇಯೇ ಪರಿಣಾಮ ಬೀರುತ್ತದೆ ಎನ್ನುವ ಸುದ್ದಿ ಟಿವಿಯಲ್ಲಿ ಬರುತ್ತಿದೆ ಎಂದು ವಿದ್ಯಾರ್ಥಿಯೋರ್ವ ಹೇಳುತ್ತಿದ್ದಂತೆ ಪಕ್ಕದಲ್ಲಿಯೇ ಇದ್ದ ವಿದ್ಯಾರ್ಥಿಯೋರ್ವ ಹೌದ್ಲೆ, ಅದ್ಕೆ ನಮ್ಮ ಪಕ್ಕದ ಮನೆಯವರು ನಮ್ಮ ದೋಸ್ತನ್‌ ಸಾಲಿಗೆ ಕಳುಹಿಸಿಲ್ಲ ಎಂದು ಆತಂಕದಿಂದಲೇ ಹೇಳಿದ.

ನಗರದ ಅನೇಕ ಶಾಲೆ, ಕಾಲೇಜುಗಳನ್ನು ಸುತ್ತಿದಾಗ ಇಂಥ ಅನೇಕ ಸಂಭಾಷಣೆಗಳು ನಡೆದಿರುವುದು ಕಂಡು ಬಂದಿತು. ಅದರಲ್ಲೂ ವಿದ್ಯಾರ್ಥಿಗಳು ಒಂದು ರೀತಿಯಲ್ಲಿ ಮಾತನಾಡಿದರೆ ವಿದ್ಯಾರ್ಥಿನಿಯರು ಮತ್ತೊಂದು ರೀತಿಯಲ್ಲಿ ಮಾತನಾಡುತ್ತಿದ್ದರು.

ಸ್ನೇಹಿತರಿಲ್ಲದ ಬದುಕು ಬದುಕೇ ಅಲ್ಲಾ, ಅದರಲ್ಲೂ ನಾವು ಮೊಬೈಲ್‌ನಲ್ಲಿ ಕಾಂಟ್ಯಾಕ್ಟ್ ಆದರೂ ಹಿಂಗ ಎದುರಿಗೆ ಕಂಡಾಗ ಸಿಗುವ ಸಂತೋಷ ಸಿಗುವುದಿಲ್ಲ ನೋಡು ಎನ್ನುತ್ತಿದ್ದರು. ಆನ್‌ಲೈನ್‌ ಕ್ಲಾಸ್‌ ನಡೆಯುತ್ತಿರುವಾಗ ಏನಾದರೂ ಯಾರ ಬಳಿಯಾದರೂ ಹಂಚಿಕೊಳ್ಳಬೇಕು ಎಂದರೂ ಆಗಂಗಿಲ್ಲ. ಇನ್ನು ಅಮ್ಮ, ಅಪ್ಪನ್ನೇ ಕೇಳಬೇಕು. ಕೇಳಿದರೂ ಅವರು ಸರಿಯಾಗಿ ಉತ್ತರಿಸುವುದೇ ಇಲ್ಲ. ನಮ್ಮನ್ನು ಗದರಿಸಿ, ಕೂಡ್ರಸ್ತಾರ. ನಮಗೆ ಏನಾರ್‌ ಆಗಲಿ, ಆ ಕೊರೋನಾ ದೂರಾಗಿ ಸಾಲಿಗಳು ನಡೆಬೇಕು ನೋಡ್ಲೆ. ಇಲ್ಲದಿದ್ದರೆ ನಾವು ಎಲ್ಲ ಇದ್ದೂ ಖುಷಿ ಇಲ್ಲದಂಗೆ ಇರುವ ಪಂಜರದಲ್ಲಿನ ಗಿಳಿ ಇದ್ದಂತೆ. ಈಗ ಅದರಿಂದ ಪಾರ್‌ ಆಗಿವಿ. ಮತ್ತೆ ಮರಳಿ ಕೊರೋನಾ ಬಾರದಿರಲಿ, ನಮ್ಮ ತರಗತಿಗಳು ನಡೆಯುತ್ತಿರಲಿ ಎಂದರು.

ಸಾಲ್ಯಾಗ್‌ ಮಾಸ್ಟ್ರ ಬೈದರೂ ಚಿಂತೆ ಇಲ್ಲ, ನಾವು ತಪ್ಪದೇ ಕ್ಲಾಸಿಗೆ ಬರ್ತಿವೆ. ನಮಗೆ ಬೋರಾಗೋ ಪ್ರಶ್ನೆಯೇ ಇಲ್ಲ. ನಮ್ಮನ್ನು ಮತ್ತೆ ಸಂಕಷ್ಟಕ್ಕೆ ಸಿಲುಕುವಂತೆ ಆಗದಿರಲಿ ಎಂದು ಆಡಿಕೊಳ್ಳುತ್ತಿರುವುದು ಕೇಳಿ ಬಂದಿತು.
ಯಾವುದೇ ಶಾಲೆಯಲ್ಲಿ ಸುತ್ತಾಡಿದರೂ ಇಂಥದ್ದೆ ಸಂಭಾಷಣೆಗಳು ನಡೆದಿದ್ದವು. ಶಾಲೆ ಮತ್ತು ಕಾಲೇಜು ಪ್ರಾರಂಭವಾಗಿರುವುದಕ್ಕೆ ವಿದ್ಯಾರ್ಥಿಗಳು ಬೇಸರ ಮಾಡಿಕೊಂಡಿಲ್ಲ, ಬದಲಾಗಿ ಖುಷಿಯಾಗಿರುವುದು ಕಂಡು ಬಂದಿತು.
ಶಾಲೆಯಲ್ಲಿನ ಕಲಿಕೆಯೇ ಕಲಿಕೆ, ಮನೆಯಲ್ಲಿನ ಆನ್‌ಲೈನ್‌ ಕಲಿಕೆಯಿಂದ ಇದೆಲ್ಲವೂ ಸಾಧ್ಯವಿಲ್ಲ ಎನ್ನುವ ವಿಶ್ಲೇಷಣೆ ವಿದ್ಯಾರ್ಥಿಗಳ ಸಂಭಾಷಣೆಯಲ್ಲಿ ವೇದ್ಯ ಆಗುತ್ತಿತ್ತು.

ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಈ ವರ್ಷ ದಾಖಲಾಗುವ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್

ನನಗಂತೂ ತುಂಬಾ ಖುಷಿಯಾಗಿದೆ. ಶಾಲೆ ಇದ್ದರೆ ಚಲೋ ಸಾರ್‌, ಶಾಲೆ ಇಲ್ಲದಿದ್ದರೆ ಏನ್‌ ಚಲೋ. ಬಹಳ ಸಂತೋಷವಾಗಿದೆ ಎಂದು ಸರ್ಕಾರಿ ಪ್ರೌಢಶಾಲೆ ಹಿರೇಸಿಂದೋಗಿಯ 10ನೇ ತರಗತಿ ವಿದ್ಯಾರ್ಥಿ ಕಾರ್ತಿಕ್‌ ಪತ್ತಾರ ತಿಳಿಸಿದ್ದಾರೆ.  

ಬಹಳ ಖುಷಿಯಾಗಿದೆ. ಫ್ರೆಂಡ್ಸ್‌ ಸಿಕ್ಕರು, ಟೀಚರ್ಸ್‌ ಸಿಕ್ಕರು. ಅವರ ಜೊತೆ ಮಾತನಾಡಿದೆವು. ಬಹಳ ಖುಷಿಯಾಗಿದೆ. ಮತ್ತೆ ಶಾಲೆ ಆರಂಭವಾಗಿದ್ದರಿಂದ ನಮಗೆ ಇದೆಲ್ಲಾ ಸಂತೋಷ ಸಿಗುವಂತೆ ಆಗಿದೆ ಎಂದು ಸರ್ಕಾರಿ ಪ್ರೌಢ ಶಾಲೆ ಹಿರೇಸಿಂದೋಗಿ 10ನೇ ತರಗತಿ ವಿದ್ಯಾರ್ಥಿನಿ ಅರ್ಪಿತಾ ದ್ಯಾಮನಗೌಡ್ರ ಹೇಳಿದ್ದಾರೆ. 
 

click me!