ಕೋವಿಡ್ ಪಾಸ್: ಕೆಇಎ ತೀರ್ಮಾನಕ್ಕೆ ಸರ್ಕಾರ ಬದ್ಧ, ಅಶ್ವತ್ಥನಾರಾಯಣ ಸ್ಪಷ್ಟ

By Suvarna NewsFirst Published Aug 2, 2022, 10:16 PM IST
Highlights

ಸಿಇಟಿ ಪರೀಕ್ಷೆ ಸಂಬಂಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಆದ್ರೆ, ಇದಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿದ್ದು,  ಕೋವಿಡ್ ಪಾಸ್: ಕೆಇಎ ತೀರ್ಮಾನಕ್ಕೆ ಸರ್ಕಾರ ಬದ್ಧ ಎಂದಿದ್ದಾರೆ.

ಬೆಂಗಳೂರು, (ಆಗಸ್ಟ್.02): 2021-22ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿ ಈ ವರ್ಷವೂ ಪುನಃ ಸಿಇಟಿ ಬರೆದಿರುವ 24 ಸಾವಿರ ವಿದ್ಯಾರ್ಥಿಗಳಿಗೆ ಪಿಯುಸಿ ಅಂಕಗಳನ್ನು ಪರಿಗಣಿಸುವುದು ಸಾಧ್ಯವಿಲ್ಲ. ಈ ವಿಷಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ  ಸ್ಪಷ್ಟಪಡಿಸಿದರು.

ಈ 24,000 ವಿದ್ಯಾರ್ಥಿಗಳಿಗೆ ಈಗ ಪಿಯುಸಿ ಅಂಕಗಳನ್ನು ಪರಿಗಣಿಸಿ, ರಾಂಕಿಂಗ್ ಕೊಟ್ಟರೆ ಒಟ್ಟು 3 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇವರಲ್ಲಿ ಒಂದುವರೆ ಲಕ್ಷ ವಿದ್ಯಾರ್ಥಿಗಳು ಹೋದ ವರ್ಷವೇ ಸಿಇಟಿ ಬರೆದಿರುವವರು ಹಾಗೂ ಈ ವರ್ಷದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಅವರು ವಿವರಿಸಿದರು.

Bengaluru: ಕೆಇಎ ಎದುರು ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳಿಂದ ಮುಂದುವರಿದ ಪ್ರತಿಭಟನೆ

ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ‌ ಮಹೇಶ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ಸಭೆ ಬಳಿಕ ಸಚಿವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಇದಲ್ಲದೆ, ಕಳೆದ ವರ್ಷದ ಐಸಿಎಸ್ಇ ಪಠ್ಯಕ್ರಮದ 64 ಮತ್ತು ಸಿಬಿಎಸ್ಇ ಪಠ್ಯಕ್ರಮದ 600 ವಿದ್ಯಾರ್ಥಿಗಳು ಕೂಡ ಈ ಬಾರಿ ಸಿಇಟಿ ಬರೆದಿದ್ದು ಅವರದ್ದನ್ನು ಕೂಡ ಕೇವಲ ಸಿಇಟಿ ಅಂಕದ ಮೇಲೆ ರಾಂಕಿಂಗ್ ಕೊಡಲಾಗಿದೆ. ಈ ವಿಷಯದಲ್ಲಿ ಗೊಂದಲ ಬೇಡ ಎಂದು ಅವರು ನುಡಿದರು.

ಈ ವಿದ್ಯಾರ್ಥಿಗಳಿಗೆ ಯಾವ ರೀತಿ ಸಹಾಯ ಮಾಡಬಹುದು ಎಂಬುದರ ಬಗ್ಗೆ ಸುದೀರ್ಘ ವಾಗಿ ಚರ್ಚಿಸಲಾಯಿತು. ಏನೇ ಮಾಡಿದರೆ ಇತರ ದೊಡ್ಡ ಸಂಖ್ಯೆಯ ‌ಹಾಗೂ ಎರಡೂ ಪರೀಕ್ಷೆಗಳನ್ನು ಬರೆದವರಿಗೆ‌ ಅನ್ಯಾಯ ಆಗುತ್ತದೆ. ಅವರ ರಾಂಕಿಂಗ್ ನಲ್ಲಿ ಬಹಳ ವ್ಯತ್ಯಾಸ ಆಗುತ್ತದೆ. ಹೀಗಾಗಿ ಕೆಇಎ ತೆಗೆದುಕೊಂಡು ನಿಲುವುದು ಸರಿ‌ ಇದೆ ಎನ್ನುವುದರ ತೀರ್ಮಾನಕ್ಕೆ ಬರಲಾಯಿತು ಎಂದರು.

ಈ‌ ವಿಷಯ ವನ್ನು ಮುಖ್ಯ ಮಂತ್ರಿ ಬಸವರಾಜ‌ ಬೊಮ್ಮಾಯಿ ಅವರ‌ ಗಮನಕ್ಕೂ ತರಲಾಗಿದೆ ಎಂದು ಸಚಿವರು ವಿವರಿಸಿದರು.

2021-22 ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಆಗಿರಲಿಲ್ಲ. ಹೀಗಾಗಿ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ನೀಡಲಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

ನನ್ನ ಪ್ರಕಾರ ಈ‌ 24 ಸಾವಿರ ವಿದ್ಯಾರ್ಥಿಗಳಿಗೂ ವಿವಿಧ ಕಾಲೇಜುಗಳಲ್ಲಿ ಸೀಟು ಸಿಗುತ್ತದೆ. ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಚಿವರು ಮನವಿ ಮಾಡಿದ್ದಾರೆ. ಇವರಿಗೆಲ್ಲ ಈಗಾಗಲೆ ಒಮ್ಮೆ ಅವಕಾಶ ನೀಡಲಾಗಿದೆ ಎಂಬುದನ್ನು ಸಚಿವರು ಸ್ಪಷ್ಟವಾಗಿ ತಿಳಿಸಿದರು.

click me!