
ಕುಂದಾಪುರ (ಏ.09): ಕೂಲಿ ಮಾಡುವ ಕುಟುಂಬದಲ್ಲಿ, ಗುಡಿಸಲಿನಂತಹ ಮನೆಯಲ್ಲಿಯೂ ಪ್ರತಿಭೆಗಳಿರುತ್ತವೆ ಎಂದು ತೋರಿಸಿದ್ದಾಳೆ ಮಂದಾರ್ತಿಯ ಮಾನ್ಯ ಪೂಜಾರಿ. ಇಲ್ಲಿನ ಶ್ರೀ ದುರ್ಗಪರಮೇಶ್ವರಿ ಟೆಂಪಲ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮಾನ್ಯ ಎಸ್. ಪೂಜಾರಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95.16 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಮಾನ್ಯ, ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡವಳು. ತಾಯಿ ವಿನೋದಾ, ಮನೆ ಸಮೀಪದ ಗೇರು ಬೀಜ ಕಾರ್ಖಾನೆಯಲ್ಲಿ ದಿನಗೂಲಿ ಮಾಡುತ್ತಾರೆ.
ಅವರು ತನಗೆ ಎಷ್ಟೇ ಕಷ್ಟವಾದರೂ ಪರವಾಗಿಲ್ಲ, ತನ್ನಿಬ್ಬರು ಮಕ್ಕಳನ್ನು ಅವರು ಬಯಸುವಷ್ಟು ಓದಿಸಬೇಕು ಎಂಬಾಸೆಯಿಂದ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಅವರಾಸೆಯನ್ನು ನಿರಾಸೆ ಮಾಡದ ಮಾನ್ಯ, ಯಾವುದೇ ಟ್ಯೂಷನ್ ಪಡೆಯುವುದಕ್ಕೆ ಆಗದಿದ್ದರೂ, ತನ್ನ ಪ್ರಾಧ್ಯಾಪಕರಿಂದಲೇ ಸಹಾಯ ಪಡೆದು, ಶ್ರದ್ಧೆಯಿಂದ ಓದಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿ, ತಾಯಿಯ ಮುಖದಲ್ಲಿ ಸಂತಸವರಳಿಸಿದ್ದಾಳೆ, ಕಾಲೇಜಿಗೂ ಹೆಮ್ಮೆಯನ್ನುಂಟು ಮಾಡಿದ್ದಾಳೆ. ಮುಂದೆ ಲೆಕ್ಕಪರಿಶೋಧಕಿ (ಚಾರ್ಟೆಡ್ ಅಕೌಂಟೆಂಟ್) ಆಗಬೇಕು ಎನ್ನುವ ಆಕಾಂಕ್ಷೆಯಿಂದ ಮಾನ್ಯ, ಸಿದ್ಧತೆ ಮಾಡಿಕೊಂಡಿದ್ದಾಳೆ.
Karnataka 2nd PUC Result 2025: ಲಾರಿ ಚಾಲಕನ ಪುತ್ರಿ ರಾಜ್ಯಕ್ಕೆ ಟಾಪರ್!
ಸಂತ ಅನ್ನಮ್ಮ ಪಿಯು ಕಾಲೇಜು ಉತ್ತಮ ಫಲಿತಾಂಶ: ದ್ವಿತೀಯ ಪಿ. ಯು. ಫಲಿತಾಂಶ ಪ್ರಕಟಗೊಂಡಿದ್ದು ವಿರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪಿ. ಯು. ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ನೀಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಅನುಷಾ ಕೆ. ಜಿ. 575 ಅಂಕಗಳನ್ನು ಪಡೆದುಕೊಂಡು ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಕೀರ್ತಿ ಬಿ. ಎಸ್. 574 ಅಂಕಗಳನ್ನು ಪಡೆದು ದ್ವಿತೀಯ, ಹಾಗೂ ಆನನ್ ಮೆಂಡೋಂಜಾ 558 ಅಂಕಗಳನ್ನು ಪಡೆದು ವಿಜ್ಞಾನ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಕಾಲೇಜಿಗೆ ಪಡೆದುಕೊಂಡಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಮಾನ್ಯ ದೇಚಮ್ಮ ಜೆ. ಪಿ. 576 ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ಪ್ರಥಮ, ತಪಸ್ವಿ ಪಿ. ಎಸ್. 572 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ, ಹಾಗೂ ವಿಭಿನ್ಯ ಸಿ. ಪಿ. 563 ಅಂಕಗಳನ್ನು ಪಡೆದು ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ 28 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 76 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ 31 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 84 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಎಂದು ಸಂತ ಅನ್ನಮ್ಮ ಪಿ. ಯು. ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ಮಾಹಿತಿಯನ್ನು ನೀಡಿದ್ದಾರೆ.