ಕೊಳಗೇರಿ ಮಕ್ಕಳಿಗಾಗಿ ‘ಮನೆ ಬಾಗಿಲಿಗೆ ಶಾಲೆ’

Kannadaprabha News   | Asianet News
Published : Oct 08, 2021, 01:21 PM IST
ಕೊಳಗೇರಿ ಮಕ್ಕಳಿಗಾಗಿ ‘ಮನೆ ಬಾಗಿಲಿಗೆ ಶಾಲೆ’

ಸಾರಾಂಶ

*  ಪ್ರಾಯೋಗಿಕ ಜಾರಿಗೆ ಬಿಬಿಎಂಪಿ ಸಿದ್ಧತೆ *  ದೊಡ್ಡಗೊಲ್ಲರಹಟ್ಟಿ, ಹೊಸಕೆರೆಹಳ್ಳಿ ಕೊಳಗೇರಿಯಲ್ಲಿ ಶಾಲೆ ಆರಂಭ *  6 ರಿಂದ 14 ವರ್ಷದ ಮಕ್ಕಳಿಗೆ ಬಸ್‌ನಲ್ಲಿ ಶಿಕ್ಷಣ  

ಮೋಹನ ಹಂಡ್ರಂಗಿ

ಬೆಂಗಳೂರು(ಅ.08): ಪಾಲಿಕೆ ವ್ಯಾಪ್ತಿಯಲ್ಲಿ ಶಿಕ್ಷಣದಿಂದ ವಂಚಿತವಾಗಿರುವ ಕೊಳಗೇರಿ ಹಾಗೂ ವಲಸಿಗರ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬಿಬಿಎಂಪಿ ರೂಪಿಸಿರುವ ‘ಸ್ಕೂಲ್‌ ಆನ್‌ ವೀಲ್ಹ್‌’ (ಮನೆ ಬಾಗಿಲಿಗೆ ಶಾಲೆ)(School on Wheel) ಯೋಜನೆಯ ಪ್ರಾಯೋಗಿಕ ಜಾರಿಗೆ ಸಿದ್ಧತೆ ನಡೆಸಿದೆ.

ಶಿಕ್ಷಣದಿಂದ ವಂಚಿತವಾಗಿರುವ ಹಾಗೂ ಶಾಲೆಯನ್ನು ತೊರೆದಿರುವ 6ರಿಂದ 14 ವರ್ಷದೊಳಗಿನ ಕೊಳಗೇರಿ(Slum) ಮತ್ತು ವಲಸಿಗರ ಮಕ್ಕಳಿಗೆ(Children) ಸಂಚಾರಿ ವಾಹನದಲ್ಲಿ ಶಿಕ್ಷಣ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಮೊದಲಿಗೆ ರಾಜರಾಜೇಶ್ವರಿ ನಗರ ವಲಯದ ದೊಡ್ಡಗೊಲ್ಲರಹಟ್ಟಿಹಾಗೂ ದಕ್ಷಿಣ ವಲಯದ ಹೊಸಕೆರೆಹಳ್ಳಿ ಕೊಳಗೇರಿಯನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ.

ಕಳೆದ ಏಪ್ರಿಲ್‌ನಲ್ಲೇ ಪಾಲಿಕೆ ಈ ಯೋಜನೆ ರೂಪಿಸಿತ್ತು. ಆದರೆ, ರಾಜ್ಯ ಸರ್ಕಾರ ಕೊರೋನಾ(Coronavirus) ಹಿನ್ನೆಲೆಯಲ್ಲಿ 1ರಿಂದ 5ನೇ ತರಗತಿ ಪುನರಾರಂಭಕ್ಕೆ ಅನುಮತಿಸದ ಹಿನ್ನೆಲೆಯಲ್ಲಿ ಸ್ಥಗಿತವಾಗಿತ್ತು. ಇದೀಗ ಕೊರೋನಾ ಸೋಂಕು ಬಹುತೇಕ ತಗ್ಗಿರುವುದರಿಂದ ರಾಜ್ಯ ಸರ್ಕಾರ ದಸರಾ ಬಳಿಕ ಪ್ರಾಥಮಿಕ ಶಾಲೆ(School) ಪುನರ್‌ ಆರಂಭಕ್ಕೆ ಅನುಮತಿ ನೀಡುವ ಸಾಧ್ಯತೆಯಿದೆ. ಹೀಗಾಗಿ ಮನೆ ಬಾಗಿಲಿಗೆ ಶಾಲೆ ಪ್ರಾಯೋಗಿಕ ಜಾರಿಗೆ ಸಿದ್ಧತೆ ನಡೆಸಲಾಗಿದೆ ಎಂದು ಪಾಲಿಕೆ ಶಿಕ್ಷಣ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ರಾಜ್ಯದ 7 ಸ್ಥಳಕ್ಕೆ ಪ್ರವಾಸ ಬರ್ತಾರೆ ಹೊರ ರಾಜ್ಯದ ಮಕ್ಕಳು..!

ಸಾಧಕ-ಬಾಧಕ ಅಧ್ಯಯನ:

ರಾಜ್ಯ ಸರ್ಕಾರದ ಅನುಮತಿ ಸಿಕ್ಕ ತಕ್ಷಣ ರಾಜರಾಜೇಶ್ವರಿ ನಗರ ವಲಯದ ದೊಡ್ಡಗೊಲ್ಲರಹಟ್ಟಿಹಾಗೂ ದಕ್ಷಿಣ ವಲಯದ ಹೊಸಕೆರೆಹಳ್ಳಿ ಕೊಳಗೇರಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಆರಂಭಿಸಲು ತೀರ್ಮಾನಿಸಲಾಗಿದೆ. ಈ ಪ್ರಾಯೋಗಿಕ ಅವಧಿಯಲ್ಲಿ ಎದುರಾಗುವ ಸಾಧಕ-ಬಾಧಕ ಅಧ್ಯಯನ ನಡೆಸಿ ಸರಿಪಡಿಸುವುದರ ಜತೆಗೆ ಹೊಸ ಸಾಧ್ಯತೆಗಳ ಬಗ್ಗೆಯೂ ಯೋಚಿಸಲಾಗುವುದು. ಬಳಿಕ ಇತರೆ ಇತರೆ ವಲಯಗಳಿಗೂ ಈ ಮನೆ ಬಾಗಿಲಿಗೆ ಶಾಲೆ ಯೋಜನೆ ವಿಸ್ತರಿಸುವುದಾಗಿ ಹೇಳಿದರು.

10 ಸಂಚಾರಿ ಶಾಲೆ ಸಿದ್ಧ

ಕೊಳಗೇರಿ ಹಾಗೂ ವಲಸಿಗರುವ ಸ್ಥಳಗಳಿಗೆ ತೆರಳಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪಾಲಿಕೆ .40 ಲಕ್ಷ ವೆಚ್ಚದಲ್ಲಿ ಬಿಎಂಟಿಸಿಯಿಂದ 10 ಬಸ್‌ ಖರೀದಿಸಿದೆ. ಈ ಬಸ್‌ಗಳಲ್ಲಿ ಆಸನಗಳನ್ನು ಕಳಚಿ ಶಾಲಾ ಕೊಠಡಿಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಬಸ್‌ಗಳಲ್ಲಿ ಬೋರ್ಡ್‌, ಮಕ್ಕಳ ಸ್ನೇಹಿ ಚಿತ್ರಗಳು, ಕುಡಿಯುವ ನೀರಿನ ವ್ಯವಸ್ಥೆ, ಲೇಖನ ಸಾಮಗ್ರಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಪಾಠಗಳು ನಡೆಯಲಿವೆ. ಒಂದು ಸಂಚಾರಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಹಾಗೂ ಆಯಾ ಸೇರಿ ಮೂವರು ಸಿಬ್ಬಂದಿ ಇರಲ್ಲಿದ್ದಾರೆ. ಸದ್ಯಕ್ಕೆ ಈ 10 ಬಸ್‌ಗಳನ್ನು ಪಾಲಿಕೆ ಆವರಣದಲ್ಲಿ ನಿಲ್ಲಿಸಲಾಗಿದೆ.

6ರಿಂದ 12ನೇ ಕ್ಲಾಸ್‌ ಪೂರ್ಣ ಪ್ರಮಾಣದಲ್ಲಿ ಆರಂಭ

ಮಾಸಾಂತ್ಯಕ್ಕೆ ಸಮೀಕ್ಷೆ ಪೂರ್ಣ

ಪಾಲಿಕೆ ಎಂಟು ವಲಯಗಳ ವ್ಯಾಪ್ತಿಯಲ್ಲಿ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿರುವ ಹಾಗೂ ಈವರೆಗೂ ಶಾಲೆಯ ಪರಿಚಯವೇ ಇಲ್ಲದ 6-14 ವರ್ಷದೊಳಗಿನ ಮಕ್ಕಳ ಪತ್ತೆಗೆ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸಮೀಕ್ಷೆ ಆರಂಭಿಸಲಾಗಿದೆ. ಈಗಾಗಲೇ ಶೇಕಡ 60ರಷ್ಟುಸಮೀಕ್ಷೆ ಪೂರ್ಣಗೊಂಡಿದ್ದು, ಈ ಮಾಸಾಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇನ್ನು ಕೊಳಗೇರಿ ಹಾಗೂ ವಲಸಿಗರ ಮಕ್ಕಳನ್ನು ಶಾಲೆಯತ್ತ ಸೆಳೆಯಲು ಈ ಸಂಚಾರಿ ಶಾಲೆಗಳಲ್ಲಿ ಒಂದು ಹೊತ್ತು ಬಿಸಿ ಊಟ ನೀಡಲು ಪಾಲಿಕೆ ಚಿಂತಿಸಿದೆ. ಈ ಸಂಬಂಧ ಅದಮ್ಯ ಚೇತನ ಟ್ರಸ್ಟ್‌ ಈ ಮಕ್ಕಳಿಗೆ ಬಿಸಿ ಊಟ ನೀಡಲು ಸಮ್ಮತಿಸಿದೆ ಎಂದು ತಿಳಿದು ಬಂದಿದೆ.

ವಲಸಿಗರ ಮಕ್ಕಳು ಹಾಗೂ ಕೊಳಗೇರಿ ಮಕ್ಕಳಿಗೆ ಶಿಕ್ಷಣ ನೀಡುವ ಮನೆ ಬಾಗಿಲಿಗೆ ಶಾಲೆ ಯೋಜನೆ ಪ್ರಾಯೋಗಿಕ ಜಾರಿಗೆ ಪಾಲಿಕೆ ಸಿದ್ಧವಾಗಿದ್ದು, ಸರ್ಕಾರದ ಅನುಮತಿ ಸಿಕ್ಕ ಕೂಡಲೇ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಪಾಲಿಕೆ ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ರೆಡ್ಡಿ ಶಂಕರ್‌ ಬಾಬು ತಿಳಿಸಿದ್ದಾರೆ. 
 

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ