* ರಾಜ್ಯದಲ್ಲಿ ಕೊರೋನಾ 3ನೇ ಅಲೆ ಆತಂಕ
* ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ಸರ್ಕಾರಕ್ಕೆ 92 ಪುಟಗಳ ಸುದೀರ್ಘ ವರದಿ
* ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್‌ವೈ
ಬೆಂಗಳೂರು, (ಜೂನ್.22): ರಾಜ್ಯದಲ್ಲಿ ಕೊರೋನಾ 3ನೇ ಅಲೆ ಆತಂಕ ಶುರುವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ಸರ್ಕಾರಕ್ಕೆ 92 ಪುಟಗಳ ಸುದೀರ್ಘ ವರದಿ ಸಲ್ಲಿಸಿದೆ.
ಮಧ್ಯಂತರ ವರದಿ ಬಗ್ಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ ಉನ್ನತ ಶಿಕ್ಷಣ ಆರಂಭಕ್ಕೆ ಚಿಂತನೆ ನಡೆಸಲಿದ್ದೇವೆ ಎಂದು ಎಂದರು.
ಶಾಲೆ ಆರಂಭದ ಬಗ್ಗೆ ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ತಜ್ಞರು!
ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಸಭೆಯಲ್ಲಿ ಕೊರೊನಾ 3ನೇ ಅಲೆಯನ್ನ ಎದುರಿಸಲು ಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಆಸ್ಪತ್ರೆ ಹಾಗೂ ಐಸಿಯುಗಳ ಸ್ಥಾಪನೆಗೆ ಸಮಿತಿ ಸಲಹೆ ನೀಡಿದೆ. ಹಾಗೂ ಪ್ರಸ್ತುತ ಸೋಂಕಿನ ತಡೆಗೆ ಸರ್ಕಾರ ಕೈಗೊಂಡಿದ್ದ ಕ್ರಮಗಳು ಸರಿ ಇದೆ ಎಂದೂ ಈ ಸಮಿತಿ ಹೇಳಿದೆ ಎಂದು ಯಡಿಯೂರಪ್ಪ ಹೇಳಿದರು.
ಇನ್ನು ರಾಜ್ಯದಲ್ಲಿ ಶಾಲಾ - ಕಾಲೇಜು ಪುನಾರಂಭದ ವಿಚಾರವಾಗಿ ಮಾತನಾಡಿದ ಸಿಎಂ ಯಡಿಯೂರಪ್ಪ, ಅಪೌಷ್ಠಿಕತೆ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಭಿಕ್ಷಾಟನೆಯಂತಹ ಸಮಸ್ಯೆ ನಿವಾರಣೆಗಾಗಿ ಶಾಲೆಗಳನ್ನ ತೆರೆಯೋದು ಒಳ್ಳೆಯದು ಎಂದು ಸಮಿತಿ ಹೇಳಿದೆ.
ಶಾಲೆಯ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗೆ ಲಸಿಕೆ ನೀಡಬೇಕು. ಮೊದಲು ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳನ್ನ ಆರಂಭಿಸಬೇಕು. ಇದಕ್ಕೂ ಮುನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ಪೂರೈಸುವ ವ್ಯವಸ್ಥೆ ಮಾಡಲಾಗುವುದು. ಮಕ್ಕಳಿಗೆ ಕೊರೋನಾ ಲಸಿಕೆಯ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದೆ. ಹೀಗಾಗಿ 1 ರಿಂದ 10ನೇ ತರಗತಿ ಆರಂಭದ ಬಗ್ಗೆ ಸದ್ಯ ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.