Dharwad: 34 ಖಾಸಗಿ ಶಾಲೆಗಳ ಮಾನ್ಯತೆ ರದ್ದು?

By Kannadaprabha NewsFirst Published Jan 17, 2022, 4:10 AM IST
Highlights

*   2020-21ರಲ್ಲಿ ಜಿಲ್ಲೆಯ 34 ಖಾಸಗಿ ಶಾಲೆ ಮಾನ್ಯತೆ ಹಿಂಪಡೆಯಲು ತೀರ್ಮಾನ
*   2018-19ರಲ್ಲಿ 11 ಖಾಸಗಿ, 5 ಅನುದಾನಿತ ಶಾಲೆ ಮಾನ್ಯತೆ ಹಿಂದಕ್ಕೆ
*   ಶಾಲೆಗಳ ಮಾನ್ಯತೆ ರದ್ದತಿಗೆ ಮೂಲಭೂತ ಸೌಕರ್ಯದ ಜತೆಗೆ ಮಕ್ಕಳ ದಾಖಲಾತಿ ಕೊರತೆಯೇ ಕಾರಣ
 

ಬಸವರಾಜ ಹಿರೇಮಠ

ಧಾರವಾಡ(ಜ.17):  ಸರ್ಕಾರಿ ಶಾಲೆಗಳೆಂದು(Government Schools) ಮೂಗು ಮುರಿಯುತ್ತಿದ್ದ ಕಾಲ ಹೋಯಿತು. ಇತ್ತೀಚಿನ ಎರಡ್ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿಯೇ ದಾಖಲಾತಿ ಪ್ರಮಾಣ ಏರಿಕೆಯಾಗುತ್ತಿದ್ದು ಇದರ ಪರಿಣಾಮ ಖಾಸಗಿ ಶಾಲೆಗಳಿಗೆ ಮಕ್ಕಳ ದಾಖಲಾತಿಯ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯ 34 ಖಾಸಗಿ ಶಾಲೆಗಳಲ್ಲಿ(Private Schools) ಮಕ್ಕಳ ದಾಖಲಾತಿ ತೀರಾ ಕಳಪೆ ಹಿನ್ನೆಲೆಯಲ್ಲಿ ಅವುಗಳ ಮಾನ್ಯತೆ ಹಿಂಪಡೆಯಲು ಶಿಕ್ಷಣ ಇಲಾಖೆ(Department of Education) ತೀರ್ಮಾನಿಸಿದೆ.

ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕೊರತೆಯಾಗಿದ್ದು ಸರ್ಕಾರಿ ಶಾಲೆಗಳನ್ನು ಮುಚ್ಚಬೇಕೆಂಬ ಕೂಗು ಕೆಲವು ವರ್ಷಗಳ ಹಿಂದಷ್ಟೇ ಕೇಳಿ ಬಂದಿತ್ತು. ಆದರೆ, ಇದೀಗ ಕೋವಿಡ್‌(Covid-19) ನಂತರ ದಾಖಲಾತಿ(Admission) ಪ್ರಮಾಣ ಬದಲಾಗಿದೆ. ಶಿಕ್ಷಣ ತಜ್ಞರ ಸಮೀಕ್ಷೆ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ಶೇ. 25ರಷ್ಟು ಹೆಚ್ಚುವರಿ ಮಕ್ಕಳ ದಾಖಲಾತಿಯಾಗಿದೆ. ಪ್ರತಿಯಾಗಿ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತಗ್ಗಿದೆ. ಸಾಮಾನ್ಯವಾಗಿ ಪ್ರತಿ ಶಾಲೆಯ (ಸರ್ಕಾರಿ, ಅನುದಾನಿತ, ಖಾಸಗಿ) ಪ್ರತಿ ತರಗತಿಯಲ್ಲಿ ನಿಯಮಾವಳಿ ಪ್ರಕಾರ 30 ಮಕ್ಕಳ ಹಾಜರಾತಿ ಕಡ್ಡಾಯ. ಇದನ್ನು ಪಾಲನೆ ಮಾಡದೇ ಹೋದಲ್ಲಿ ಆಯಾ ಶಾಲಾ ವ್ಯಾಪ್ತಿಯ ಶಿಕ್ಷಣಾಧಿಕಾರಿಗಳು ಪರಿಶೀಲಿಸಿ ಈ ಕುರಿತು ಉಪ ನಿರ್ದೇಶಕರ ಕಚೇರಿಗೆ ವರದಿ ನೀಡಲಾಗುತ್ತದೆ. ಅಂತೆಯೇ ಉಪ ನಿರ್ದೇಶಕರು ನಿಯಮಾವಳಿ ಪ್ರಕಾರ ಮಾನ್ಯತೆ ರದ್ದು ಮಾಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ.

Guest Lecturers ಮತ್ತೆ ಸಿಡಿದೆದ್ದ ಅತಿಥಿ ಉಪನ್ಯಾಸಕರು, ಅಶ್ವತ್ಥ್ ನಾರಾಯಣ ಗರಂ

2 ವರ್ಷದಲ್ಲಿ 16 ಶಾಲೆ ಮಾನ್ಯತೆ ರದ್ದು:

ಅಂತೆಯೇ, 2018 ಮತ್ತು 2019ರಲ್ಲಿ ಜಿಲ್ಲೆಯ ಆಯಾ ಶಿಕ್ಷಣಾಧಿಕಾರಿಗಳು ನೀಡಿದ ವರದಿಯಂತೆ ಮಕ್ಕಳ ದಾಖಲಾತಿ ತೀರಾ ಕಡಿಮೆ ಇರುವ ಕಾರಣ ಹುಬ್ಬಳ್ಳಿಯ ಅಧ್ಯಾಪಕರ ನಗರದ ಗುರುಕುಲ ಕಿರಿಯ ಪ್ರಾಥಮಿಕ ಶಾಲೆ, ನವನಗರ ಸಂಸ್ಕೃತಿ ಎಲ್‌ಪಿಎಸ್‌ ಶಾಲೆ, ಅದರಗುಂಚಿಯ ಚಂದನ ಕನ್ನಡ ಪ್ರಾಥಮಿಕ ಶಾಲೆ, ಮಂಜುನಾಥ ನಗರದ ರಾಧಾಕೃಷ್ಣ ಪ್ರಾಥಮಿಕ ಶಾಲೆ, ಗಂಗಾಧರ ನಗರದ ಆರ್‌.ಕೆ. ಗೋಕಾಕ ಲಿಟಲ್‌ ಎಂಜಿಲ್ಸ್‌ ಶಾಲೆ, ವೆಂಕಟೇಶ್ವರ ನಗರದ ಲಕ್ಷ್ಮಿ ವೆಂಕಟೇಶ ಶಿಕ್ಷಣ ಸಂಸ್ಥೆ, ಧಾರವಾಡದ ತೇಜಸ್ವಿ ನಗರದ ತೇಜಸ್ವಿ ಆಂಗ್ಲ ಮಾಧ್ಯಮ ಶಾಲೆ, ಜಯನಗರದ ಲಕ್ಷ್ಯ ಇಂಟರನ್ಯಾಶನಲ್‌ ಆಂಗ್ಲ ಮಾಧ್ಯಮ ಶಾಲೆ, ಸಿ.ಬಿ. ನಗರದ ಪ್ರೊ. ಕಮಲಾ ಬಾಳೇಂಕುಂದ್ರಿ ಶಾಲೆ, ಅಳ್ನಾವರದ ದುರ್ಗಾಕೀರ್ತಿ ಪ್ರಾಥಮಿಕ ಶಾಲೆ, ನವಲಗುಂದದ ಪ್ರಗತಿ ಪ್ರಾಥಮಿಕ ಶಾಲೆ ಸೇರಿದಂತೆ 11 ಖಾಸಗಿ ಶಾಲೆಗಳು ಹಾಗೂ ಹುಬ್ಬಳ್ಳಿಯ ಗಂಗಮ್ಮಾ ಶಿವಪ್ಪ ಬೆಳಗಾವಿ ಕನ್ನಡ ಶಾಲೆ, ಧಾರವಾಡದ ಜನ್ನತನಗರದ ದ.ರಾ. ಬೇಂದ್ರೆ ಶಾಲೆ, ಶ್ರೀನಗರದ ಎನ್‌.ಬಿ. ಜ್ಯೋತಿ ಶಾಲೆ, ಕುಂದಗೋಳ ಗುಡಗೇರಿಯ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರಾಥಮಿಕ ಶಾಲೆ ಹಾಗೂ ಅಳ್ನಾವರದ ಮಹಾತ್ಮ ಗಾಂಧಿ ನಂದಿ ಕನ್ನಡ ಶಾಲೆ ಸೇರಿದಂತೆ 5 ಅನುದಾನಿತ ಶಾಲೆಗಳ ಮಾನತ್ಯೆಗಳನ್ನು ರದ್ದು ಮಾಡಲಾಗಿದೆ.

Covid 19 Spike: 'ಶಾಲೆ ಆರಂಭಿಸದಿದ್ದರೆ ಪ್ರತಿ ಮಗುವಿಗೆ 5000 ನೀಡಿ’

ಶಿಕ್ಷಕರಿಗೆ ಪರ್ಯಾಯ ಮಾರ್ಗ:

ಇದೀಗ ಕೋವಿಡ್‌ ಆನಂತರದಲ್ಲಿ ನಡೆದ ಸಮೀಕ್ಷೆ(Survey) ಪ್ರಕಾರ 2020-21ರಲ್ಲಿ ಶಿಕ್ಷಣಾಧಿಕಾರಿಗಳು 34 ಖಾಸಗಿ ಶಾಲೆಗಳಲ್ಲಿ ದಾಖಲಾತಿ ತೀರಾ ಕಡಿಮೆ ಇರುವ ಕಾರಣ ವರದಿ ನೀಡಿದ್ದು ಇಲಾಖೆಯು ಯಾವ ಶಾಲೆಗಳು ಎಂಬ ಮಾಹಿತಿ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಉಪ ನಿರ್ದೇಶಕರು ಇನ್ಮುಂದೆ ಈ ಶಾಲೆಗಳಿಗೆ ನೋಟಿಸ್‌(notice) ನೀಡುವ ಮೂಲಕ ಅವುಗಳ ಮಾನ್ಯತೆ ವಾಪಸ್‌ ಪಡೆಯುವ ಪ್ರಕ್ರಿಯೆ ಇನ್ನಷ್ಟೇ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಈ ರೀತಿ ಶಾಲೆಗಳು ಮುಚ್ಚಿದರೆ ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರ ಸ್ಥಿತಿ ಏನು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಮಾನ್ಯತೆ ರದ್ದಾದ ಶಾಲೆಯಲ್ಲಿನ ಶಿಕ್ಷಕರನ್ನು ಜಿಲ್ಲೆಯ ಬೇರೆ ಅನುದಾನಿತ ಶಾಲೆಗಳಿಗೆ ಕೌನ್ಸಿಲ್‌ ಮೂಲಕ ಅವರ ಸೇವೆಯನ್ನು ಮುಂದುವರಿಸಲಾಗುವುದು ಎಂದು ಶಿಕ್ಷಣಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮಕ್ಕಳ(Children) ದಾಖಲಾತಿಯೊಂದಿಗೆ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳು(Infrastructure) ಸಹ ಶಾಲೆಗಳ ಮಾನ್ಯತೆ ಹಿಂಪಡೆಯಲು ಪ್ರಮುಖ ಕಾರಣ. ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳಿದ್ದರೂ ಅವಕಾಶ ಕೊಟ್ಟು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮಾನ್ಯತೆ ರದ್ದು ಮಾಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ಅನುದಾನಿತ ಶಾಲಾ ಶಿಕ್ಷಕರನ್ನು ವರ್ಗಾವಣೆ ಮಾಡಬಹುದು. ಆದರೆ, ಖಾಸಗಿ ಶಾಲೆಯಲ್ಲಿ ಕಡ್ಡಾಯ ಶಿಕ್ಷಣ ಹಕ್ಕು (RTE) ಮಕ್ಕಳ ಪ್ರವೇಶ ಮಾತ್ರ ರದ್ದಾಗಲಿದೆ ಅಂತ ಡಿಡಿಪಿಐ ಎಸ್‌.ಎಸ್‌. ಕೆಳದಿಮಠ ತಿಳಿಸಿದ್ದಾರೆ.  
 

click me!