ಜೂ.24ರಿಂದ 28ರೊಳಗೆ 2ನೇ ಪಿಯುಸಿ ಫಲಿತಾಂಶ ಪ್ರಕಟ

By Kannadaprabha News  |  First Published Jun 2, 2022, 6:35 AM IST

*  3ನೇ ವಾರದಲ್ಲೇ ಪ್ರಕಟಿಸಲು ಸರ್ವಸಿದ್ಧತೆ
*  ಸಾಧ್ಯವಾಗದಿದ್ದರೆ 4ನೇ ವಾರದಲ್ಲಿ ಪ್ರಕಟ
*  ಏ.22ರಿಂದ ಮೇ 18ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ
 


ಬೆಂಗಳೂರು(ಜೂ.02): ಈಗಾಗಲೇ ಘೋಷಿಸಿರುವಂತೆ ಜೂನ್‌ ಮೂರನೇ ವಾರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸರ್ವ ಪ್ರಯತ್ನ ನಡೆಸುತ್ತಿದೆ. ಒಂದು ವೇಳೆ ಕಾರಣಾಂತರಗಳಿಂದ ಸಾಧ್ಯವಾಗದಿದ್ದರೆ ಮಾತ್ರ ಒಂದೆರಡು ದಿನ ತಡವಾಗಿ ಅಂದರೆ ನಾಲ್ಕನೇ ವಾರದಲ್ಲಿ ಪ್ರಕಟಿಸುವ ಚಿಂತನೆಯಲ್ಲಿದೆ.

ಮೂರನೇ ವಾರದಲ್ಲಾದರೆ ಜೂ.24ರಂದು, ನಾಲ್ಕನೇ ವಾರದಲ್ಲಾದರೆ ಜೂ.28ಕ್ಕೆ ಫಲಿತಾಂಶ ನೀಡಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಆದರೆ, ಇದನ್ನು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ರಾಮಚಂದ್ರನ್‌ ನಿರಾಕರಿಸಿದ್ದಾರೆ.

Tap to resize

Latest Videos

ಪಿಯು ಅಡ್ಮಿಷನ್‌ಗೆ ಭಾರೀ ಡಿಮ್ಯಾಂಡ್: ಬ್ಲಾಕ್‌ನಲ್ಲಿ ಸೀಟು ಮಾರಾಟ..!

ಮೂರನೇ ವಾರದಲ್ಲೇ ಫಲಿತಾಂಶ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ನಿರೀಕ್ಷೆಯಂತೆ ಮೌಲ್ಯಮಾಪನ ಕಾರ್ಯವೂ ನಡೆಯುತ್ತಿದೆ. ಅನಿರೀಕ್ಷಿತ ಕಾರಣಗಳಿಂದ ಸಾಧ್ಯವಾಗಿದ್ದರೆ ಮಾತ್ರ ಫಲಿತಾಂಶ ಪ್ರಕಟಣೆ ನಾಲ್ಕನೇ ವಾರದಲ್ಲಿ ಆಗಬಹುದು. ಆದರೆ, ಇನ್ನೂ ಯಾವುದೇ ತಾತ್ಕಾಲಿಕ ದಿನಾಂಕ ನಿಗದಿ ಪಡಿಸಿಲ್ಲ. ಮೌಲ್ಯಮಾಪನ ಪೂರ್ಣಗೊಂಡು ಫಲಿತಾಂಶ ಪ್ರಕಟಣೆಗೆ ಸಿದ್ಧತೆಗಳು ಪೂರ್ಣಗೊಂಡ ಬಳಿಕ ಅಧಿಕೃತ ದಿನಾಂಕ ನಿಗದಿಪಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಲಾಖೆ ಮೂಲಗಳ ಪ್ರಕಾರ ಮೌಲ್ಯಮಾಪನ ಕಾರ್ಯ ಮೇ 23ರಿಂದ ಆರಂಭವಾಗಿದ್ದು, ಕಳೆದ ಎಂಟು ದಿನಗಳಲ್ಲಿ ಶೇ.50ರಷ್ಟುಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದೆ. ಕಲಾ ಮತ್ತು ವಾಣಿಜ್ಯ ವಿಭಾಗಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಿರೀಕ್ಷೆಗಿಂತ ವೇಗವಾಗಿ ನಡೆದಿದೆ. ವಿಜ್ಞಾನ ವಿಷಯಗಳ ಮೌಲ್ಯಮಾಪನ ಕಾರ್ಯವೂ ನಿರೀಕ್ಷೆಯಂತೆ ನಡೆಯುತ್ತಿದೆ. ಇನ್ನೊಂದು ವಾರದೊಳಗೆ ಬಹುತೇಕ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದ್ದು, ನಂತರದ 10 ದಿನಗಳ ಒಳಗೆ ಫಲಿತಾಂಶ ಪ್ರಕಟಣೆಯ ಮಟ್ಟಕ್ಕೆ ಸಿದ್ಧವಾಗಲಿದೆ.

ಅಲ್ಲಿಗೆ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟಿಸಲು ಸಮಸ್ಯೆಯಾಗುವುದಿಲ್ಲ ಎನ್ನಲಾಗಿದೆ. ಒಂದು ವೇಳೆ ಯಾವುದಾದರೂ ತಾಂತ್ರಿಕ ಸಮಸ್ಯೆ, ಫಲಿತಾಂಶ ಪ್ರಕಟಿಸಲು ಸಚಿವರ ಒಪ್ಪಿಗೆ ಸೇರಿದಂತೆ ಇನ್ಯಾವುದೇ ಕಾರಣಗಳಿಂದ ತಡವಾದರೆ ಮಾತ್ರ ನಾಲ್ಕನೇ ವಾರಕ್ಕೆ ಮುಂದೂಡಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಏ.22ರಿಂದ ಮೇ 18ರವರೆಗೆ ನಡೆದಿದ್ದ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗೆ 6.84 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
 

click me!