ಎಸ್ಸೆಸ್ಸೆಲ್ಸಿ ಪೇಲ್‌ ಕಡಿಮೆ ಮಾಡಲು 10% ಕೃಪಾಂಕ

By Girish Goudar  |  First Published May 12, 2022, 6:52 AM IST

*  ಕೆಲವೇ ಅಂಕದಿಂದ ಫೇಲಾಗುವವರಿಗೆ ಶ್ರೀರಕ್ಷೆ
*  3 ವಿಷಯಗಳಿಗೆ ಒಟ್ಟು 10% ಗ್ರೇಸ್‌ ಮಾರ್ಕ್ಸ್
*  ಗ್ರೇಸ್‌ ಅಂಕ ಹೊಸದಲ್ಲ
 


ಬೆಂಗಳೂರು(ಮೇ.12): ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕಾಗಿ(SSLC Results) ಕಾಯುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟು ಅಂಕಗಳ ಕೊರತೆ ಹೊಂದಿರುವವರಿಗೆ ಈ ಬಾರಿಯೂ ಗರಿಷ್ಠ ಮೂರು ವಿಷಯದಲ್ಲಿ ಶೇ.10ರಷ್ಟು ಗ್ರೇಸ್‌ ಅಂಕ ನೀಡಿ ಪಾಸ್‌ ಮಾಡಲು ಸರ್ಕಾರ ತೀರ್ಮಾನಿಸಿದೆ.

ಅನುತ್ತೀರ್ಣವಾಗಿರುವ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳಲ್ಲಿನ ಶೇ.10 ಕೃಪಾಂಕಗಳನ್ನು ಅಗತ್ಯವಾರು ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಪಾಸಾಗುವುದಾದರೆ ಮಾತ್ರ ಇದರ ಉಪಯೋಗ ಸಿಗಲಿದೆ.

Tap to resize

Latest Videos

SSLC Result: ಮೇ 15ಕ್ಕಲ್ಲ, 19ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ?

ಉದಾಹರಣೆಗೆ- ಪರೀಕ್ಷೆ(Exam) ಬರೆದಿರುವ ಆರು ವಿಷಯಗಳ ಪೈಕಿ ಮೂರು ವಿಷಯಗಳಲ್ಲಿ ಉತ್ತೀರ್ಣರಾಗಿದ್ದು, ಇನ್ನುಳಿದ ಮೂರು ವಿಷಯಗಳಲ್ಲಿ ಅನುತ್ತಿರ್ಣವಾಗಿದ್ದರೆ ಆ ಮೂರು ವಿಷಯಗಳಲ್ಲಿ ಥಿಯರಿ ಪರೀಕ್ಷೆಯ ತಲಾ 80 ಅಂಕದ ಶೇ.10ರಷ್ಟು ಅಂದರೆ ಮೂರು ವಿಷಯಗಳಿಂದ 24 ಅಂಕಗಳು ಗ್ರೇಸ್‌ ಅಂಕಗಳಾಗಿ ದೊರೆಯುತ್ತವೆ. ಕನ್ನಡ(Kannada) ಭಾಷಾ ವಿಷಯಕ್ಕೆ 100 ಅಂಕಗಳಿಗೆ ಥಿಯರಿ ಪರೀಕ್ಷೆ ಇರುವುದರಿಂದ ಶೇ.10 ಅಂದರೆ 10 ಅಂಕಗಳಾಗುತ್ತದೆ. ಹಾಗಾಗಿ ಅನುತ್ತೀರ್ಣ ವಿಷಯಗಳಲ್ಲಿ ಪ್ರಥಮ ಭಾಷೆ ಕನ್ನಡ ಇದ್ದಲ್ಲಿ ಮೂರು ವಿಷಯಗಳ ಕೃಪಾಂಕ ಸಂಖ್ಯೆ ಆಗ 26 ಆಗಲಿದೆ. ಈ ಅಂಕಗಳನ್ನು ಅನುತ್ತೀರ್ಣ ವಿಷಯಗಳಿಗೆ ಹಂಚಿಕೆ ಮಾಡಿ ಪಾಸು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಗ್ರೇಸ್‌ ಅಂಕಗಳನ್ನು(Grace Marks) ಯಾವ ರೀತಿ ಹಂಚಿಕೆ ಮಾಡಲಾಗುತ್ತದೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.

2021ರ ಪೂರಕ ಪರೀಕ್ಷೆಗಳಲ್ಲಿ ಗ್ರೇಸ್‌ ಅಂಕದಿಂದಾಗಿ ಶೇ.9ರಷ್ಟು ವಿದ್ಯಾರ್ಥಿಗಳು(Students) ಉತ್ತೀರ್ಣವಾಗಿದ್ದರು. ಸುಮಾರು 13 ವಿದ್ಯಾರ್ಥಿಗಳಿಗೆ ಗರಿಷ್ಠ 26 ಅಂಕಗಳನ್ನು ನೀಡಲಾಗಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಆರಂಭದಲ್ಲಿ ಸರಿಯಾಗಿ ತರಗತಿಗಳು ನಡೆದಿಲ್ಲ. ಹೀಗಾಗಿ ಮಕ್ಕಳಲ್ಲಿ ಕಲಿಕೆಯ ಕೊರತೆ ಸಹಜ ಎಂದು ಗ್ರೇಸ್‌ ಅಂಕ ನೀಡಲಾಗುತ್ತಿದೆ. ಬಹುಶಃ ಈ ಬಾರಿಯೂ ಗ್ರೇಸ್‌ ಅಂಕ ಪಡೆದು ಪಾಸಾಗುವ ಮಕ್ಕಳ ಸಂಖ್ಯೆ ಹೆಚ್ಚೇ ಇರುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

4-5ನೇ ತರಗತಿ ಲೆಸ್ ಹೋಂವರ್ಕ್, ಮೇ 3ನೇ ವಾರದೊಳಗೆ SSLC Result

ಗ್ರೇಸ್‌ ಅಂಕ ಹೊಸದಲ್ಲ

ಅಧಿಕಾರಿಗಳು ಹೇಳುವ ಪ್ರಕಾರ ಗ್ರೇಸ್‌ ಅಂಕ ನೀಡಿಕೆ ಹೊಸದೇನಲ್ಲ, ನಿಯಮಾವಳಿಯಲ್ಲೇ ಇದಕ್ಕೆ ಮೊದಲಿಂದಲೂ ಅವಕಾಶವಿದೆ. ಫಲಿತಾಂಶ ಉತ್ತಮಗೊಳಿಸುವ ಕಾರಣದಿಂದ ಗರಿಷ್ಠ ಮೂರು ವಿಷಯಗಳಿಗೆ ಶೇ.5ರಷ್ಟು ಗ್ರೇಸ್‌ ಅಂಕ ನೀಡುವ ಮಾನದಂಡ ಅನುಸರಿಸಿಕೊಂಡು ಬರಲಾಗುತ್ತಿದೆ. ಆದರೆ, ಕೋವಿಡ್‌ನಿಂದ(Covid-19) ಶಾಲೆಗಳು ಆರಂಭವಾಗದೆ ಮಕ್ಕಳಿಗೆ ಭೌತಿಕ ತರಗತಿಗಳು ನಡೆಯದೆ ಕಲಿಕೆಯಲ್ಲಿ ಹಿಂದುಳಿದ ಕಾರಣ 2021ರಲ್ಲಿ ಮಂಡಳಿಯು ಇದನ್ನು ಶೇ.10ಕ್ಕೆ ಹೆಚ್ಚಿಸಿತ್ತು. 2021ರ ವಾರ್ಷಿಕ ಪರೀಕ್ಷೆಯನ್ನು ಎರಡೇ ದಿನದಲ್ಲಿ ಮುಗಿಸಿ ಸಾಮೂಹಿಕವಾಗಿ ಎಲ್ಲರನ್ನೂ ಪಾಸ್‌ ಮಾಡಿದ್ದರಿಂದ ಆಗ ಗ್ರೇಸ್‌ ಅಂಕದ ಪ್ರಶ್ನೆ ಉದ್ಭವಿಸಿರಲಿಲ್ಲ. ಆದರೆ, ನಂತರ ನಡೆದ ಪೂರಕ ಪರೀಕ್ಷೆಯಲ್ಲಿ ಶೇ.10 ಗ್ರೇಸ್‌ ಅಂಕಗಳನ್ನು ನೀಡಲಾಗಿತ್ತು.

ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಗ್ರೇಸ್‌ ಅಂಕ ನೀಡುವ ವಿಚಾರ ನಿಯಮಾವಳಿಯಲ್ಲೇ ಇದೆ. ಅದು ಈ ವರ್ಷವೂ ಮುಂದುವರೆಯುತ್ತದೆ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿಶಾಲ್‌ ತಿಳಿಸಿದ್ದಾರೆ. 
 

click me!