ಈ ಜಗತ್ತಿನಲ್ಲಿ ಅದೆಷ್ಟು ಚಿತ್ರವಿಚಿತ್ರವಾದ ಆಸಕ್ತಿಕರ ಉದ್ಯೋಗಗಳಿವೆ ಎಂದರೆ ಅವುಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಸೋಮಾರಿ ಮಠದ ಅಧ್ಯಕ್ಷರಾಗುವುದೂ ಒಂದು ಕೆಲಸವೇ ಎನಿಸಿಬಿಡಬಹುದು!
ಇಡೀ ದಿನಾ ಟಿವಿ ನೋಡುವುದು, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕೆಲಸ ಮಾಡಿಕೊಳ್ಳುವುದು, ಸುಮ್ಮನೆ ಸೂಟ್ ಹಾಕಿಕೊಂಡು ಓಡಾಡುವುದಕ್ಕೆ ಕೂಡಾ ಸಂಬಳ ಸಿಗುತ್ತದೆ ಎಂದರೆ ನಂಬುತ್ತೀರಾ? ಆದರೆ, ನಂಬಲೇಬೇಕು. ಏಕೆಂದರೆ ನಾವು ವಾಸಿಸುವ ಜಗತ್ತು ಬಹಳ ವಿಚಿತ್ರ ಹಾಗೂ ವಿಶೇಷ ಕೂಡಾ.
ಪ್ರೊಫೆಷನಲ್ ಫಾರಿನರ್
ಚೀನಾದಲ್ಲಿ ವಿದೇಶಿಯರು ಸುಮ್ಮನೆ ಸೂಟ್ ಹಾಕಿಕೊಂಡು ಚೈನೀಸ್ ಉದ್ಯಮಿಗಳ ಕೈ ಕುಲುಕುವುದೇ ಒಂದು ಉದ್ಯೋಗ! ಕಾರ್ಯಕ್ರಮದಲ್ಲಿ ಫಾರಿನರ್ ಇದ್ದರೆ ಅದರ ಘನತೆಯೇ ಬೇರೆ ಎಂದು ಚೀನೀಯರು ಯೋಚಿಸುವುದರಿಂದ ಕೆಲವು ಕಂಪನಿಗಳು ವಾರಕ್ಕೆ 1000 ಡಾಲರ್ ನೀಡಿ ಫಾರಿನರ್‌ಗಳನ್ನು ಇಂಥ ಈವೆಂಟ್‌ಗಳಿಗೆ ಆಹ್ವಾನಿಸುತ್ತಾರೆ.
ನಾಯಿ ಆಹಾರ ರುಚಿ ನೋಡುವುದು
ಸಾಕುಪ್ರಾಣಿಗಳ ಆಹಾರ ಉತ್ಪಾದಕ ಸಂಸ್ಥೆಗಳು ನಾಯಿಗಳ ಫುಡ್ ಟೇಸ್ಟ್ ಮಾಡುವುದಕ್ಕಾಗಿಯೇ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತವೆ. ಅವರು ಆಹಾರದ ರುಚಿ ನೋಡಿ ಬಳಿಕ ಉಗಿಯುತ್ತಾರೆ. ಜೊತೆಗೆ, ಆಹಾರದಲ್ಲಿರುವ ಪೋಷಕಾಂಶಗಳ ಕುರಿತು ಪರೀಕ್ಷೆ ನಡೆಸುತ್ತಾರೆ.
ಚಿಕನ್ ಸೆಕ್ಸರ್
ಕೋಳಿಮರಿಗಳ ಲಿಂಗ ಪರೀಕ್ಷೆ ಮಾಡಿ ಅವು ಗಂಡೋ ಹೆಣ್ಣೋ ಹೇಳುವುದೇ ಈ ಉದ್ಯೋಗಿಗಳ ಕೆಲಸ. ಸಾಮಾನ್ಯವಾಗಿ ಆರನೇ ಇಂದ್ರಿಯವಷ್ಟೇ ಇಲ್ಲಿ ಕೆಲಸ ಮಾಡಬೇಕು. ಬ್ರಿಟನ್ ಹಾಗೂ ಜಪಾನ್‌ನಲ್ಲಿ ಸಾಮಾನ್ಯ ಉದ್ಯೋಗ ಇದಾಗಿದ್ದು, ಇವರು ವರ್ಷಕ್ಕೆ ಸುಮಾರು 60,000 ಡಾಲರ್ ಹಣ ಸಂಪಾದಿಸುತ್ತಾರೆ.
ಪ್ರೊಫೆಷನಲ್ ಲೈನ್ ಸ್ಟ್ಯಾಂಡರ್
ನಮ್ಮಲ್ಲಿ ಹೆಚ್ಚಿನವರಿಗೆ ಮಾಡಲು ತಾಳ್ಮೆ ಇಲ್ಲದ ಕೆಲಸವನ್ನು ಇವರು ಮಾಡುತ್ತಾರೆ. ಹೌದು, ಕ್ಯೂನಲ್ಲಿ ನಿಲ್ಲುವುದೇ ಇವರ ಕೆಲಸ. ಹೊಸ ಪ್ರಾಡಕ್ಟ್ ಲಾಂಚ್ ಆದಾಗ, ಬಿಗ್ ಸೇಲ್‌ಗಳು ಇದ್ದಾಗ ಈ ಲೈನ್ ಸ್ಟ್ಯಾಂಡರ್‌ಗಳು ಬ್ಯುಸಿಯಾಗಿಬಿಡುತ್ತಾರೆ. ಇವರೆಲ್ಲ ಚಾರ್ಜ್ ಮಾಡುವ ರೇಟ್ ಬೇರೆ ಇರಬಹುದು. ಆದರೆ ವಾರಕ್ಕೆ ಸುಮಾರು 1000 ಡಾಲರ್‌ನಷ್ಟು ಇವರು ದುಡಿಯುತ್ತಾರೆ.
ಫಾರ್ಚ್ಯೂನ್ ಕುಕೀ ರೈಟರ್
ಫಾರ್ಚ್ಯೂನ್ ಕುಕೀಸ್ ಸಂಸ್ಥೆಯು ತಿಂಡಿಯೊಳಗೆ ಕೆಲ ಸ್ಫೂರ್ತಿಯುತ ಸರ್ಪ್ರೈಸ್ ಬರಹಗಳನ್ನಿಟ್ಟು ಕುಕೀಸ್ ಕೊಂಡವರಿಗೆ ಸಂತೋಷ ನೀಡುತ್ತದೆ. ಇಂಥ ಒನ್‌ಲೈನರ್ ಬರಹಗಳನ್ನು ಬರೆದುಕೊಡಲು ಫ್ರೀಲ್ಯಾನ್ಸರ್‌ಗಳನ್ನು ನೇಮಿಸುತ್ತದೆ. ಈ ಫ್ರೀಲ್ಯಾನ್ಸರ್ ಬರಹಗಾರರು ವರ್ಷಕ್ಕೆ ಸುಮಾರು 40,000 ಡಾಲರ್ ಸಂಪಾದಿಸುತ್ತಾರೆ.
ಪ್ರೊಫೆಷನಲ್ ಕಡ್ಲರ್
ಇದು ಮೇಲಿನದೆಲ್ಲಕ್ಕಿಂತ ವಿಚಿತ್ರ. ನೀವು ಬೇಕೆಂದಾಗ, ಬೇಜಾರಾದಾಗ ಇವರ ಬಳಿ ಹೋಗಿ ಮುದ್ದಾಡಿಸಿಕೊಳ್ಳಬಹುದು. ಪ್ರೊಫೆಷನಲ್ ಕಡ್ಲರ್‌ಗಳು ಗಂಟೆಗೆ ಸುಮಾರು 80 ಡಾಲರ್ ಛಾರ್ಜ್ ಮಾಡುತ್ತಾರೆ.
ಪ್ರೊಫೆಷನಲ್ ಟಿವಿ ವಾಚರ್
ಹೌದು, ಟಿವಿ ನೋಡುವುದೇ ಇವರ ಕೆಲಸ! ಆದರೆ ಇದೇನು ನೀವಂದುಕೊಂಡಷ್ಟು ಸುಲಭವಲ್ಲ. ಇವರು ವಿವಿಧ ಶೋಗಳನ್ನು, ನ್ಯೂಸ್ ಕ್ಲಿಪ್‌ಗಳನ್ನು ನೋಡಿ ಅವುಗಳಲ್ಲಿ ಯಾವುದಾದರೂ ಕ್ಲಿಪ್‌ನ್ನು ಹೊಸ ಟಿವಿ ಶೋಗೆ ಅಥವಾ ನ್ಯೂಸ್ ಪ್ರೊಗ್ರಾಂಗೆ ಬಳಸಬಹುದೇ ಎಂದು ಹುಡುಕಿ ತೆಗೆಯುವುದು ಇವರ ಕೆಲಸ. ವಾರಕ್ಕೆ 600 ಡಾಲರ್‌ನಿಂದ 1000 ಡಾಲರ್‌ನಷ್ಟು ಸಂಪಾದನೆ ಇವರದ್ದು.
Jobs ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಆ್ಯಶ್ ಆರ್ಟಿಸ್ಟ್
ಪ್ರೀತಿಪಾತ್ರರು ತೊರೆದು ಹೋದಾಗ ಅವರ ಬೂದಿಯನ್ನು ಬಳಸಿ ಅದರಲ್ಲಿ ಪೆಂಡೆಂಟ್ ಮಾಡುವುದು ಇಲ್ಲವೇ ಶೋಪೀಸ್ ಮಾಡುವುದು ಇವರ ಕೆಲಸ.
ಫೇಸ್ ಫೀಲರ್ಸ್
ಸೆನ್ಸರಿ ಸೈಂಟಿಸ್ಟ್‌ಗಳೆಂದೂ ಕರೆಸಿಕೊಳ್ಳುವ ಇವರು ಮುಖವನ್ನು ಮುಟ್ಟಿಯೇ ಫೇಶಿಯಲ್, ಲೋಶನ್ಸ್, ಕ್ಲೆನ್ಸರ್ಸ್, ರೇಜರ್ಸ್‌ಗಳು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿವೆ ಎಂದು ಹೇಳುತ್ತಾರೆ. ಪಾರ್ಟ್ ಟೈಂ ಕೆಲಸವಾದರೂ ಗಂಟೆಗೆ 25 ಡಾಲರ್‌ನಷ್ಟು ದುಡಿಯುತ್ತಾರೆ.