ಯಶಸ್ಸಿನ ಉತ್ತುಂಗದಲ್ಲಿದ್ದರೂ ಕಾಲು ನೆಲದಲ್ಲಿಲ್ಲವಾದರೆ, ವೇಗವಾಗಿ ಇದ್ದಕ್ಕಿಂದ್ದಂತೆ ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಗಳಿವೆ. ಯಶಸ್ಸು ನಮ್ಮ ವ್ಯಕ್ತಿತ್ವವನ್ನು ಹಿಗ್ಗಿಸಬೇಕೇ ಹೊರತು, ಅಹಂಕಾರದಿಂದ ಕುಗ್ಗಿಸಬಾರದು.
ಯಶಸ್ಸಿನ ಏಣಿ ಏರುವುದು ಸುಲಭದ ಕೆಲಸವಲ್ಲ. ಗಾಂಧೀಜಿ ಹೇಳಿದಂತೆ, "ಮೊದಲು ಅವರು ನಿಮ್ಮನ್ನು ಕಡೆಗಣಿಸುತ್ತಾರೆ, ಬಳಿಕ ನಿಮ್ಮತ್ತ ನೋಡಿ ನಗುತ್ತಾರೆ, ನಂತರ ನಿಮ್ಮ ವಿರುದ್ಧ ಫೈಟ್ ಮಾಡುತ್ತಾರೆ, ಆ ಬಳಿಕ ನೀವು ಗೆಲ್ಲುತ್ತೀರಿ". ಅಂತೂ ಗೆದ್ದೇ ಬಿಟ್ಟಿರಿ, ಯಶಸ್ಸು ನಿಮ್ಮ ಕೈಗೆ ಸಿಕ್ಕಿತು ಎಂದುಕೊಳ್ಳಿ... ಆಗ ಹಲವು ಬದಲಾವಣೆಗಳಾಗುತ್ತವೆ. ಆದರೆ, ನೀವು ಮಾತ್ರ ಈ ಹಣ ಅಧಿಕಾರದ ನಶೆ ತಲೆಗೇರಲು ಬಿಡಬಾರದು. ಬಿಟ್ಟಿರೋ, ಕೆಟ್ಟಿರೆಂದೇ ಅರ್ಥ. ಎಷ್ಟೇ ಎತ್ತರಕ್ಕೇರಿದರೂ ನೀವು ಮರೆಯಬಾರದ ವಿಷಯಗಳಿವು....
1. ವಿನಯ
ನಿಮ್ಮ ಬದುಕಿನಲ್ಲಿ ಸಹಾಯ ಮಾಡಿದ ಯಾರನ್ನೂ ಮರೆಯಬೇಡಿ. ನೀವೆಷ್ಟೇ ಪ್ರತಿಭಾವಂತರಾಗಿರಿ, ನಿಮಗೆ ಕಲಿಸಿದವರಿಗಿಂತ ಹೆಚ್ಚು ಕಲಿತಿರಿ, ಆದರೆ, ದಾರಿಯಲ್ಲಿ ಅನೇಕರ ಸಣ್ಣಪುಟ್ಟ ಸಹಾಯ ಪಡೆದೇ ನೀವಿಂದು ಯಶಸ್ಸನ್ನು ಸಾಧಿಸಿರುತ್ತೀರಿ ಎಂಬುದರಲ್ಲಿ ಅನುಮಾನವಿಲ್ಲ. ಯಾವಾಗಲೂ ಅವರೆಡೆಗೆ ಒಂದು ಕೃತಜ್ಞತೆ, ಗೌರವ, ಸಿಕ್ಕಾಗ ವಿನಯದಿಂದ ವರ್ತಿಸುವುದು ಬದುಕಾಗಲಿ. ಇದರಿಂದ ಅವರಿಗಷ್ಟೇ ಅಲ್ಲ, ನಿಮಗೆ ಕೂಡಾ ಒಳಿತೆನಿಸುತ್ತದೆ.
ಸಂದರ್ಶನದಲ್ಲಿ 'ನಿಮ್ಮ ಬಗ್ಗೆ ಹೇಳಿ' ಎಂದಾಗ ಏನು ಹೇಳ್ಬೇಕು?
2. ಎಲ್ಲಿಂದ ಶುರು ಮಾಡಿದಿರಿ ಎಂಬುದು ಮರೆಯಬೇಡಿ
ಯಶಸ್ಸು ಸಿಕ್ಕ ಬಳಿಕ ಜನರು ತಾವು ಎಲ್ಲಿಂದ ಆರಂಭಿಸಿದ್ದು ಎಂಬುದನ್ನೇ ಮರೆತುಬಿಡುತ್ತಾರೆ. ಮುಂಚೆ ನಿಮ್ಮ ಬದುಕು ಹೇಗಿತ್ತು ಎಂಬುದನ್ನು ಮರೆಯದೆ ಎಲ್ಲ ಜನರನ್ನೂ ಒಂದೇ ಗೌರವ ಹಾಗೂ ಪ್ರೀತಿಯಿಂದ ನಡೆಸಿಕೊಳ್ಳಿ.
3. ಕೊಳ್ಳುಬಾಕರಾಗಬೇಡಿ
ಹಿಂದೆ ನಿಮ್ಮ ಬಳಿ ಏನೂ ಇಲ್ಲದೆ ಈಗ ಶ್ರೀಮಂತಿಕೆ ಬಂದಿರಬಹುದು. ಹಾಗಂತ ಕಂಡಕಂಡಿದ್ದನ್ನೆಲ್ಲ ಕೊಂಡು ನನ್ನ ಬಳಿ ಎಲ್ಲವೂ ಇರಬೇಕು ಎಂಬ ಹಟ ಬೇಡ. ಯಾವುದು ಅಗತ್ಯವೋ ಅದನ್ನು ಮಾತ್ರ ಎಷ್ಟು ಬೇಕೋ ಅಷ್ಟು ಕೊಂಡುಕೊಳ್ಳುವುದು ರೂಢಿಸಿಕೊಳ್ಳಿ. ನೀವು ಬಹಳ ಕಷ್ಟು ಪಟ್ಟು ಮೇಲೆ ಬಂದಿದ್ದೀರಿ. ಆ ಹಾರ್ಡ್‌ವರ್ಕ್‌ಗೆ ಬೆಲೆ ನೀಡಬೇಕು. ಅನಗತ್ಯವಾದುದಕ್ಕೆಲ್ಲ ಕಷ್ಟಪಟ್ಟು ದುಡಿದ ಹಣ ಸುರಿಯುವುದು ಸರಿಯಲ್ಲ. ಜೀವನವನ್ನು ಎಂಜಾಯ್ ಮಾಡಬೇಕು. ಆದರೆ, ಎಂಜಾಯ್ ಮಾಡುವುದೇ ಜೀವನವಲ್ಲ.
ಬ್ರೇಕ್ ಕೆ ಬಾದ್; ಉದ್ಯೋಗಕ್ಕೆ ಮರಳಲು ಹೀಗೆ ತಯಾರಿ ನಡೆಸಿ!
4. ನಿಮ್ಮ ಪ್ರತಿಸ್ಪರ್ಧಿ ನೀವು ಮಾತ್ರ
ಯಶಸ್ಸಿನ ಹಾದಿಯಲ್ಲಿದ್ದೀರಿ ಎಂಬ ಮಾತ್ರಕ್ಕೆ ನಿಮಗೆ ಯಶಸ್ವಿ ಎನಿಸಿದವರ ವಿರುದ್ಧವೆಲ್ಲ ಗೆಲ್ಲಬೇಕೆಂದು ಸ್ಪರ್ಧೆಗೆ ನಿಲ್ಲಬೇಡಿ. ಇದರಿಂದ ವೃಥಾ ಒತ್ತಡ, ಚಿಂತೆ, ದುಗುಡಗಳಿಂದ ಸುಸ್ತಾಗುತ್ತೀರಿ. ಬದಲಿಗೆ ನಿಮಗೆ ನೀವೇ ಪ್ರತಿಸ್ಪರ್ಧಿಯಾಗಿ. ಇಂದಿಗಿಂತಾ ನಾಳೆಗೆ ಉತ್ತಮವಾಗುವ ಕನಸು ಕಾಣುತ್ತಲೇ ಸಾಗಿ. ಆಗ, ನಿಮ್ಮ ಯಶಸ್ಸಿನೊಂದಿಗೆ ವ್ಯಕ್ತಿತ್ವವೂ ಬೆಳೆಯುತ್ತದೆ.
5. ಸಮಾಜಕ್ಕೆ ಹಿಂದಿರುಗಿಸಿ
ಹಣ ಬಂದ ಮೇಲೆ ಅದನ್ನು ಪೂರ್ತಿ ನಮ್ಮ ಖುಷಿಗಾಗಿ ಬಳಸುವುದಕ್ಕಿಂತಾ ಇನ್ನೊಬ್ಬರ ಅಗತ್ಯಗಳಿಗೆ ಬಳಸಿದಾಗ ಸಿಗುವ ಸಂತೋಷ ಹೆಚ್ಚು ಎನ್ನುತ್ತವೆ ಸಂಶೋಧನೆಗಳು. ಸಣ್ಣ ಮಟ್ಟಿಗಾದರೂ ಸರಿ, ಮತ್ತೊಬ್ಬರ ಜೀವನಕ್ಕೆ ನೆರವಾಗಿ. ಒಬ್ಬನೇ ಬೆಳೆಯುವುದಕ್ಕಿಂತಾ ಸಮಾಜವೂ ನಿಮ್ಮ ಜೊತೆಯೇ ಬೆಳೆದರೆ ಒಟ್ಟಿಗೇ ಸಂಭ್ರಮಿಸಬಹುದು. ಕೆಲವೊಮ್ಮೆ ಕೇವಲ ಹಣದ ವಿಷಯದಲ್ಲಲ್ಲ, ನಿಮ್ಮ ಸಮಯ, ಅನುಭವಗಳನ್ನು ಸಮಾಜಕ್ಕೆ ನೀಡುವುದು ಕೂಡಾ ಅಗತ್ಯ ಹಾಗೂ ಲಾಭದಾಯಕವೇ. ಹಾಗಂತ ಇದು ಅನಿವಾರ್ಯವಾಗದೆ, ಬದುಕಿನ ರೀತಿಯಾಗಿದ್ದರೆ ಉತ್ತಮ.
ಪ್ರಾಣಿ ಫೋಟೋ ನೋಡಿದ್ರೆ ಹೆಚ್ಚುತ್ತೆ ಪ್ರೊಡಕ್ಟಿವಿಟಿ!
6. ಚಟಗಳಿಂದ ದೂರವಿರಿ
ಎಷ್ಟೇ ಐಶ್ವರ್ಯ ಅಂತಸ್ತು ಬಂದರೂ ನಿಮಗೆ ಚಟಗಳಿದ್ದರೆ ಅವು ನಿಮ್ಮ ಹಿತಶತ್ರುಗಳೇ. ನೀವು ಅವನ್ನು ಸಲಹಲು ವ್ಯಯಿಸುತ್ತೀರಿ, ಆದರೆ, ಅವು ನಿಮ್ಮನ್ನು ಮುಗಿಸಲು ಹೊಂಚು ಹಾಕುತ್ತಿರುತ್ತವೆ. ಚಟಗಳು ನಮಗೆ ನಾವೇ ಮಾಡಿಕೊಳ್ಳುವ ಮೋಸ. ಮೇಲೆ ಹೋದಂತೆಲ್ಲ ಟೆನ್ಷನ್ ಹೆಚ್ಚು. ಇದನ್ನು ನಿಭಾಯಿಸಲು ಸೋತು ಚಟಗಳ ದಾಸರಾಗುವ ಸಂಭವಗಳಿರುತ್ತವೆ. ಆದರೆ, ಟೆನ್ಷನ್ ನಿಭಾಯಿಸಲು ಬೇರೆಯದೇ ಮಾರ್ಗಗಳಿವೆ. ಡ್ರಗ್ಸ್, ಆಲ್ಕೋಹಾಲ್‌ಗಳೆಲ್ಲ ಸ್ವತಃ ಸಮಸ್ಯೆಯೇ ಹೊರತು ಪರಿಹಾರವಾಗಲು ಸಾಧ್ಯವಿಲ್ಲ.
7. ಸಹಾಯ ಯಾಚನೆಗೆ ಹಿಂಜರಿಯದಿರಿ
ಒಂದು ಹಂತಕ್ಕೆ ಹೋದ ಮೇಲೆ ಸಹಾಯ ಯಾಚಿಸುವುದು, ನಮ್ಮ ದುಃಖ ಹೇಳಿಕೊಳ್ಳುವುದು ಎಲ್ಲವೂ ಕಷ್ಟವೆನಿಸುತ್ತದೆ. ಆದರೆ, ಹಣ ಹೆಸರು ಬಂದಾಗಲಾದರೂ ಸುಖ, ನೆಮ್ಮದಿಯಿಂದಿರುವುದು ಮುಖ್ಯ. ಹಾಗಾಗಿ, ಯಾವುದೇ ಸಣ್ಣ ಪುಟ್ಟ ಸಹಾಯವಾದರೂ ಸರಿ, ಕೇಳಲು ಹಿಂಜರಿಯಬೇಡಿ. ದೊಡ್ಡದಾಗಿ ಕನಸು ಕಂಡು ಸತ್ಯದ ಹಾದಿಯಲ್ಲಿ ನಡೆಯಿರಿ.