
ಬೆಂಗಳೂರು, (ಆ.25): ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 2020ನೇ ಸಾಲಿನ 10ನೇ ತರಗತಿಯ ಪ್ರಶ್ನೆ ಪತ್ರಿಕೆ ಸ್ವರೂಪದಲ್ಲಿ ಬದಲಾವಣೆಯನ್ನು ತರಲು ಮುಂದಾಗಿರುವ ಬೆನ್ನಲ್ಲೇ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಹ ಪ್ರಶ್ನೆ ಪತ್ರಿಕೆಯಲ್ಲಿ ಕೆಲ ಚೇಂಜಸ್ ಮಾಡಲು ನಿರ್ಧರಿಸಿದೆ.
ಪ್ರಶ್ನೆ ಪತ್ರಿಕೆಯಲ್ಲಿ ಪ್ರಮುಖವಾಗಿ ಅಂಕಗಳ ಹಂಚಿಕೆ ಪದ್ಧತಿಯನ್ನು ಕೈಬಿಟ್ಟು ವಿಷಯಾಧಾರಿತ ಪ್ರಶ್ನೆಪತ್ರಿಕೆಯನ್ನು ರೂಪಿಸಲು ಮುಂದಾಗಿದ್ದು, ಪ್ರಶ್ನೆಗಳ ಸಂಖ್ಯೆಯನ್ನು 40ರಿಂದ 38ಕ್ಕೆ ಇಳಿಕೆ ಮಾಡಲು ರಾಜ್ಯ ಎಸ್‌ಎಸ್‌ಎಲ್‌ಸಿ ಬೋರ್ಡ್ ತೀರ್ಮಾನಿಸಿದೆ.
ಬಹು ಆಯ್ಕೆಯ ಒಂದು ಅಂಕದ ಪ್ರಶ್ನೆಗಳನ್ನು ಕಡಿಮೆ ಮಾಡುವುದರ ಜತೆಗೆ 2 ಅಂಕದ ಪ್ರಶ್ನೆಗಳನ್ನು 6ರಿಂದ 9ಕ್ಕೆ ಏರಿಕೆ ಮಾಡಲು ರಾಜ್ಯ ಪ್ರೌಢ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಮತ್ತೊಂದು ಮಹತ್ವದ ಬದಲಾವಣೆ ಅಂದ್ರೆ 5 ಅಂಕದ ಪ್ರಶ್ನೆ ಸೇರಿಸಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಎಸ್‌ಎಲ್‌ಸಿ ಬೋರ್ಡ್ ನಿರ್ದೇಶಕಿ ವಿ. ಸುಮಂಗಲಾ, ಪ್ರಶ್ನೆಗಳ ಸಂಖ್ಯೆ 40ರಿಂದ 38ಕ್ಕೆ ಇಳಿಸುವುದರ ಮೂಲಕ ಸಣ್ಣ ಬದಲಾವಣೆ ಮಾಡಲಾಗುತ್ತಿದ್ದು, ನಾವು ಬರವಣಿಗೆಯ ಕೌಶಲ್ಯಕ್ಕೆ ಹೆಚ್ಚಿನ ಒತ್ತು ನೀಡಲು ಬಯಸುತ್ತೇವೆ ಎಂದು ಹೇಳಿದರು.
ಈ ಬದಲಾವಣೆ ಮೂಲಕ ಹೊಸ ಪ್ರಶ್ನೆ ಪತ್ರಿಕೆ 2020ರಿಂದ ಜಾರಿಗೆ ಬರಲಿದೆ. ಇದೇ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ