ವಿದ್ಯಾರ್ಥಿಗಳ ನೆರವಿಗೆ PU ಬೋರ್ಡ್: ಮಾರ್ಕ್ಸ್ ಕಾರ್ಡ್ ಕಳೆದುಕೊಂಡಿದ್ರೆ ಹೊಸ ಅಂಕಪಟ್ಟಿ

By Web DeskFirst Published Aug 19, 2019, 8:12 PM IST
Highlights

ಪ್ರವಾಹದಿಂದ ತತ್ತರಿಸಿರುವ ಜನರ ಪಾಲಿಗೆ ಸಂಘ ಸಂಸ್ಥೆಗಳು ಸಹಾಯ ಕಲ್ಪಿಸುತ್ತಿದ್ರೆ, ನೆರೆಯಿಂದ ಅಂಕಪಟ್ಟಿ ಕಳೆದುಕೊಂಡಿರುವ ವಿದ್ಯಾರ್ಥಿಗಳ ನೆರವಿಗೆ ಪಿಯು ಬೋರ್ಡ್ ಧಾವಿಸಿದೆ.

ಬೆಂಗಳೂರು, [ಆ.19]: ನೆರೆಯಿಂದ ಅಂಕಪಟ್ಟಿ ಕಳೆದುಕೊಂಡಿರುವ ವಿದ್ಯಾರ್ಥಿಗಳ ನೆರವಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. 

ನೆರೆಯಿಂದ ಅಂಕಪಟ್ಟಿ ಕಳೆದುಕೊಂಡು ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೊಸ ಅಂಕಪಟ್ಟಿ ಹಾಗೂ ಸಂಬಂಧಿತ ದಾಖಲೆಗಳನ್ನು ನೀಡುವುದಾಗಿ ಪ್ರಕಟಿಸಿದೆ.

ಬದುಕಿನ ಜತೆಗೆ ಶಾಲಾ ಪುಸ್ತಕವೂ ನೀರು ಪಾಲು!

ಈ ಸಂಬಂಧ  ಇಂದು [ಸೋಮವಾರ] ಸುತ್ತೋಲೆ ಹೊರಡಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ  ನಿರ್ದೇಶಕರು, ನೆರೆ ಹಾಗೂ ಅತಿವೃಷ್ಠಿಯಿಂದ ಸಾರ್ವಜನಿಕರು ಆಸ್ತಿ, ಮನೆ ಸೇರಿದಂತೆ ಎಲ್ಲವನ್ನು ಕಳೆದುಕೊಂಡಿದ್ದಾರೆ. ಅಂತಹ ಕುಟುಂಬಗಳ ವಿದ್ಯಾರ್ಥಿಗಳಿಗೆ ಹೊಸದಾಗಿ ಅಂಕಪಟ್ಟಿ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. 

ಹೀಗಾಗಿ ವಿದ್ಯಾರ್ಥಿಗಳು ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ತೆರಳಿ ಹೊಸ ಅಂಕಪಟ್ಟಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಹೊಸ ಅಂಕ ಪಟ್ಟಿಗಳು, ಇತರೆ ದಾಖಲೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಮಂಡಳಿ ತಿಳಿಸಿದೆ.

ನೆರೆ ಪೀಡಿತ ಜಿಲ್ಲೆಗಳಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ದಿನಾಂಕವನ್ನು ಆಗಸ್ಟ್ 23 ವರೆಗೂ ವಿಸ್ತರಣೆ ಮಾಡಿದೆ. ಇದರ ಜೊತೆಗೆ ನೆರೆ ಸಂತಸ್ಥ ಜಿಲ್ಲೆಗಳ ಶೈಕ್ಷಣಿಕ-ಮೂಲಭೂತ ಸೌಕರ್ಯಗಳ ಹಾನಿಗೀಡಾಗಿದ್ದು, ಅಂತಹ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ದಿಗಾಗಿ ಪದವಿ ಪೂರ್ವ ಶಿಕ್ಷಣ ಮಂಡಳಿ ಸಮಿತಿಗಳ ನೇಮಕ ಮಾಡಿ ಆದೇಶ ಹೊರಡಿಸಿದೆ. 

ಜಿಲ್ಲೆಯ ಉಪ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಿದ್ದು, ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ 5 ಜನ ಪ್ರಾಂಶುಪಾಲರು ಒಳಗೊಂಡಿರುವ ಸಮಿತಿಯ  ಸದಸ್ಯರಾಗಲಿದ್ದಾರೆ. ಈ ಸಮಿತಿ ನೆರೆ ಜಿಲ್ಲೆಗಳ ಶೈಕ್ಷಣಿಕ, ಮೂಲಭೂತ ಸೌಕರ್ಯ  ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವೂ ಸಹ ನೆರೆ ಹಾಗೂ ಅತಿವೃಷ್ಠಿ ಸಂತ್ರಸ್ಥರ ನೆರೆವಿಗೆ ಧಾವಿಸಿದ್ದು, 2019-20 ನೇ ಸಾಲಿನ ಶೈಕ್ಷಣಿಕ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿ ಶುಲ್ಕ ಮತ್ತು ದಂಡ ಶುಲ್ಕ ರಹಿತವಾಗಿ ಆಗಸ್ಟ್ ಅಂತ್ಯದವರೆಗೂ ತರಗತಿಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುವುದು ಎಂದು ಸುತ್ತೋಲೆ ಹೊರಡಿಸಿದೆ

click me!