
ಹುಬ್ಬಳ್ಳಿ (ಮೇ.6): ನಿಶ್ಚಿತಾರ್ಥ ಮುಗಿಸಿಕೊಂಡು ಊರಿಗೆ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಐವರು ಪ್ರಯಾಣಿಕರಿದ್ದ ಕಾರ್ ಭೀಕರ ಅಘಾತಕ್ಕೆ ಈಡಗಿದ್ದು, ಸ್ಥಳದಲ್ಲಿಯೇ ಎಲ್ಲರೂ ಸಾವು ಕಂಡಿದ್ದಾರೆ. ನಿಶ್ಚಿತ ವಧುವೂ ಕೂಡ ಇಲ್ಲಿ ಪ್ರಾಣಬಿಟ್ಟಿರುವ ದಾರುಣ ಘಟನೆ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಕಿರಾಸೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಇಂಗಳಹಳ್ಳಿ ಕ್ರಾಸ್ ಬಳಿ ಮಂಗಳವಾರ ಬೆಳಿಗ್ಗೆ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
"ಮೃತರ ಗುರುತುಗಳು ಇನ್ನೂ ದೃಢಪಟ್ಟಿಲ್ಲ. ಪ್ರಾಥಮಿಕ ವರದಿಗಳ ಪ್ರಕಾರ ಕಾರು ಬೆಂಗಳೂರಿನಲ್ಲಿ ನೋಂದಾಯಿಸಲ್ಪಟ್ಟಿದೆ' ಎಂದು ಪೊಲೀಸರು ತಿಳಿಸಿದ್ದರು. ಆ ಬಳಿಕ ಮೃತರನ್ನು ವಿಠ್ಠಲ ಶೆಟ್ಟಿ, ಶಶಿಕಲಾ ಶೆಟ್ಟಿ, ಸಂದೀಪ್ ಶೆಟ್ಟಿ, ಶ್ವೇತಾ ಶೆಟ್ಟಿ ಹಾಗೂ ಅಂಜಲಿ ಶೆಟ್ಟಿ ಎಂದು ಗುರುತಿಸಲಾಗಿದೆ. ಅಪಘಾತದ ನಂತರ, ಲಾರಿ ಚಾಲಕ ತನ್ನ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಚಾಲಕನನ್ನು ಪತ್ತೆಹಚ್ಚಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಧಾರವಾಡ ಜಿಲ್ಲಾ ಎಸ್ಪಿ ಮತ್ತು ಗ್ರಾಮೀಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸಾವು ಕಂಡ ಎಲ್ಲರೂ ಒಂದೇ ಕುಟುಂಬದವರಗಿದ್ದಾರೆ. ನಿಶ್ಚಿತಾರ್ಥ ಮುಗಿಸಿಕೊಂಡು ಮರಳುವ ವೇಳೆ ಅಪಘಾತ ಸಂಭವಿಸಿದೆ. ಬೆಳಗೆ 8:30 ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ. ನಿಶ್ಚಿತಾರ್ಥ ಮಾಡಿಕೊಂಡಿದ್ದ ಶಶಿಕಲಾ ಶೆಟ್ಟಿ ಸಹ ಅಪಘಾತದಲ್ಲಿ ಸಾವು ಕಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ಮರಳುವಾಗ ಘಟನೆ ನಡೆದಿದೆ. ನಿಶ್ಚಿತಾರ್ಥ ಮುಗಿಸಿ ಮದುವೆಗೆ ಕುಟುಂಬ ತಯಾರಿ ನಡೆಸುತ್ತಿತ್ತು. ಕುಳಗೇರಿ ಕ್ರಾಸ್ ಬಳಿ ರಾಘವೇಂದ್ರ ಹೋಟೆಲ್ ಅನ್ನು ಶೆಟ್ಟಿ ಕುಟುಂಬ ನಡೆಸುತ್ತಿತ್ತು ಎನ್ನಲಾಗಿದೆ.
ಬೆಳಗಾವಿಯಲ್ಲೂ ಒಂದು ಅಪಘಾತ ಸಂಭವಿಸಿದ್ದು, ಎರಡು ಕಾರುಗಳು ಮುಖಾಮುಖಿ ಢಿಕ್ಕಿಯಾಗಿದ್ದರಿಂದ ಒಂದೇ ಕುಟುಂಬದ ಮೂವರು ಸಾವು ಕಂಡಿದ್ದಾರೆ. ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ಸಂಭವಿಸಿದೆ. ಬೈಲಹೊಂಗಲದಿಂದ ಹಿರೇಬಾಗೇವಾಡಿಗೆ ಬರ್ತಿದ್ದ ಅಲ್ಟೋ ಕಾರು ಬೈಲಹೊಂಗಲ ಹೋಗುತ್ತಿದ್ದ ಕೀಯಾ ನಡುವೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಮೂವರು ಸಾವು ಕಂಡಿದ್ದಾರೆ.
ಅಲ್ಟೋ ಕಾರಿನಲ್ಲಿದ್ದ ಗಂಡ ಅಯುಮ್, ಹೆಂಡತಿ, ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೀಯಾ ಕಾರಿನಲ್ಲಿದ್ದ ಮಾಜಿ ಶಾಸಕ ಆರ್.ವಿ ಪಾಟೀಲ್ ಪುತ್ರ ಅಪಘಾತ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಲ್ಲದೇ ಅಲ್ಟೋ ಕಾರಿನಲ್ಲಿದ್ದ ಮತ್ತೊಂದು ಮಗುವಿಗೆ ಗಂಭೀರವಾಗಿ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೊಂದೆಡೆ, ಚಿತ್ರದುರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಬೋರ್ಡ್ಗೆ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದು, 26ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಶಹಾಪುರ ಮೂಲದ ನಿವಾಸಿ ಶಿವಪ್ಪ (36) ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿ. ಕೆಎಸ್ಆರ್ಟಿಸಿ ಬಸ್ ಯಾದಗಿರಿಯಿಂದ ಚಳ್ಳಕೆರೆ ಮಾರ್ಗದಲ್ಲಿ ಬೆಂಗಳೂರಿಗೆ ತೆರಳುತ್ತಿತ್ತು.